

ತುಮಕೂರು: ರೈತರಿಂದ ನೇರವಾಗಿ ಖರೀದಿಸಿದ ತರಕಾರಿ ಹಾಗೂ ಹಣ್ಣುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜತೆಜತೆಗೆ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾ ತೋಟಗಾರಿಕಾ ಕಚೇರಿ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಲಾಕ್‌ಡೌನ್ ಜಾರಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತರಕಾರಿ ಖರೀದಿಗೆ ತೊಂದರೆಯಾಗದಂತೆ ಜಿಲ್ಲಾ ತೋಟಗಾರಿಕಾ ಇಲಾಖೆ, ಹಾಪ್‌ಕಾಮ್ಸ್, ರೈತ ಉತ್ಪಾದಕರ ಸಂಸ್ಥೆಗಳು ಹಾಗೂ ಹನಿಮಿತ್ರ ಸಹಯೋಗದಲ್ಲಿ ನಗರದ ಪ್ರತೀ ಬಡಾವಣೆಗೆ ತರಕಾರಿ ಹಣ್ಣುಗಳನ್ನು ತಲುಪಿಸುವ ಕಾರ್ಯ ಕೈಗೊಳ್ಳಲಾಗಿದೆ. ಲಾಕ್‌ಡೌನ್‌ನಿಂದ ತರಕಾರಿ, ಹಣ್ಣು ಬೆಲೆ ಏರಿಕೆಯಾಗಿದ್ದಲ್ಲದೆ, ರೈತರ ಬೆಳೆದ ಬೆಳೆ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸಿ ನೇರವಾಗಿ ಗ್ರಾಹಕರಿಗೆ ಮುಟ್ಟಿಸಲಾಗುತ್ತಿದೆ. ಪ್ರತಿದಿನ ಒಂದೊಂದು ವಾರ್ಡ್‌ಗೆ ತೆರಳಿ ತರಕಾರಿ, ಹಣ್ಣುಗಳನ್ನು ತಲುಪಿಸಲಾಗುತ್ತದೆ. ತರಕಾರಿ, ಹಣ್ಣುಗಳ ದರ ತಿಳಿದುಕೊಳ್ಳಲು ಮತ್ತು ಏನಾದರೂ ದೂರುಗಳಿದ್ದರೆ ನೀಡಲು ಸಹಾಯವಾಣಿಯನ್ನೂ ಸಹ ಇಲಾಖೆ ವತಿಯಿಂದ ತೆರೆಯಲಾಗಿದೆ. ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್‌ಕುಮಾರ್, ಹನಿಮಿತ್ರ ತಂಡದ ಹರೀಶ್, ಆಕಾಶ್, ಗುರುಪ್ರಸಾದ್ ಮತ್ತಿತರರು ಇದ್ದರು.
25 ವಾಹನ ಸಂಚಾರ: ಹಣ್ಣು ಮತ್ತು ತರಕಾರಿ ಮಾರಾಟದ 25 ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ. ಕಳೆದ 3-4 ದಿನಗಳಿಂದ ಸುಲಭವಾಗಿ ರೈತರು ಬೆಳೆದಿರುವ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಂದಲೂ ಉತ್ತಮ ಬೇಡಿಕೆ ಬರುತ್ತಿದ್ದು, ಇನ್ನೂ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ದೂರುಗಳಿದ್ದ ಈ ಸಹಾಯವಾಣಿ ( 0816 2970310, 0816 2275189)ಗೆ ಕರೆ ಮಾಡುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಘು ತಿಳಿಸಿದರು.
160 ವಾಹನಗಳು ವಶ: ಲಾಕ್‌ಡೌನ್ ಇದ್ದರೂ ಅನವಶ್ಯಕವಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದು ಏ. 2 ರಿಂದ 4ರವರೆಗೆ 4 ಚಕ್ರದ ವಾಹನಗಳು - 4, ತ್ರಿಚಕ್ರ ವಾಹನಗಳು - 14 ಹಾಗೂ ದ್ವಿಚಕ್ರ ವಾಹನ -142, ಜಿಲ್ಲೆಯಾದ್ಯಂತ 160 ವಾಹನ ವಶ ಪಡಿಸಿಕೊಳ್ಳಲಾಗಿದೆ.