ಬೆಳಗಾವಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 6

death
Published on

ಬೆಳಗಾವಿ: ಕರೊನಾ ವೈರಸ್‌ನಿಂದ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಇಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ವೀರಭದ್ರ ನಗರದ 48 ವರ್ಷದ ವ್ಯಕ್ತಿ ಹಾಗೂ ರಾಯಬಾಗ
ತಾಲೂಕಿನ ಕುಡಚಿಯ 70 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಕರೊನಾದಿಂದ ಮೃತಪಟ್ಟವರ ಸಂಖ್ಯೆ ಇದೀಗ 6ಕ್ಕೆ ಏರಿಕೆಯಾಗಿದೆ.

ಕರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಪ್ರಕ್ರಿಯೆ ವಿಷಯದಲ್ಲಿ ರಾಜ್ಯದಲ್ಲಿ ತೀವ್ರ ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ರೂಪಿಸಿರುವ
ನಿಯಮಾವಳಿ ಪ್ರಕಾರ ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಪ್ರತ್ಯೇಕ ಜಾಗ ಮೀಸಲು: ಬೆಳಗಾವಿಯಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕಾಗಿಯೇ ಈದ್ಗಾ ಬಳಿ ಪ್ರತ್ಯೇಕ ಜಾಗ ಮೀಸಲಿಡಲಾಗಿದೆ. ಜೆಸಿಬಿ ಮೂಲಕ ನಿಗದಿತ ಭೂಮಿಯಲ್ಲಿ 10 ಅಡಿ ಆಳದ ಗುಂಡಿ ತೋಡಿ ಕರೊನಾ ಸೋಂಕಿನಿಂದ ಮೃತಪಟ್ಟವರನ್ನು ಹೂಳಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಸರ್ಕಾರದ ಎಲ್ಲ ನಿಯಮ ಪಾಲಿಸಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಆರ್.ಕೆ. ಕುಲಕರ್ಣಿ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಬಸವರಾಜ ಧಾಬಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net