

ತುಮಕೂರು: ಕರೊನಾ ಸೋಂಕಿತ 40 ವರ್ಷದ ವ್ಯಕ್ತಿ ಹಾಗೂ ಆತನ 29 ವರ್ಷದ ಪತ್ನಿ ನಗರದಲ್ಲಿ ಸಂಚರಿಸಿದ್ದಾರೆ ಎನ್ನಲಾದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ನಗರದ ಪೂರ್‌ಹೌಸ್ ಕಾಲನಿ, ಕೆಎಚ್‌ಬಿ (ಪಿಎಚ್) ಕಾಲನಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದರ ಜತೆಗೆ ಸೋಂಕಿತರಿಬ್ಬರು ಓಡಾಡಿರುವ ಜಯಪುರ, ಟಿಪ್ಪುನಗರ, ಹೆಗಡೆ ನಗರ, ಮರಳೂರುದಿಣ್ಣೆ ಪ್ರದೇಶಗಳನ್ನೂ ಸಹ ಸೀಲ್‌ಡೌನ್ ಮಾಡಲಾಗಿದೆ.
ಕಂದಾಯ ಇಲಾಖೆ ಸಹಯೋಗದಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಈ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಗುಜರಾತ್‌ನಿಂದ ಧರ್ಮಬೋಧನೆಗೆ ಬಂದು ಪಿಎಚ್ ಕಾಲನಿಯ ನಿಮ್ರಾ ಮಸೀದಿಯಲ್ಲಿ ನೆಲೆಸಿದ್ದ 32 ವರ್ಷದ ವ್ಯಕ್ತಿ ಆ ನಂತರ ಕೆಎಚ್‌ಬಿ ಕಾಲನಿಯ 74 ವರ್ಷದ ಮೃತವೃದ್ಧ ಹಾಗೂ ಆತನ 65 ವರ್ಷದ ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿತ್ತು.
ಗಂಡ, ಹೆಂಡತಿ ತಂದಿಟ್ಟ ಆತಂಕ: ಗುಬ್ಬಿ ತಾಲೂಕು ಎಂಎಚ್ ಪಟ್ಟಣದ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದ 40 ವರ್ಷದ ಸೋಂಕಿತ ಹಾಗೂ ಆತನ ಹೆಂಡತಿ ನಗರದ ವಿವಿಧೆಡೆ ಓಡಾಡಿರುವುದು ಈಗ ಸಾಕಷ್ಟು ಆತಂಕ ಸೃಷ್ಟಿಸಿದೆ. ಹಾಗಾಗಿ, ಇವರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು ಅವರನ್ನೆಲ್ಲಾ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಇನ್ನೂ ಕೆಲವರನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ನಗರದಲ್ಲಿ ಓಡಾಡಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಿ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.
ಕಂಟೈನ್ಮೆಂಟ್ ರೆನ್: ಪಿಎಚ್ ಕಾಲನಿ ಹಾಗೂ ಕೆಎಚ್‌ಬಿ ಕಾಲನಿಯಲ್ಲಿ ಕರೊನಾ ಸೋಂಕಿತರ ವಾಸಿಸುತ್ತಿದ್ದ ಪ್ರದೇಶದ ಸುತ್ತಮುತ್ತ 150 ಮೀ.,ವ್ಯಾಪ್ತಿಯನ್ನು ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ. ಇನ್ನೂ 1 ಕಿ.ಮೀ., ಪ್ರದೇಶವನ್ನು ಇಂಟೆನ್ಸಿವ್ ಬಫರ್ ರೆನ್‌ನೆಂದು ಗುರುತಿಸಿ ಈ ಪ್ರದೇಶದಲ್ಲಿ ಮನೆ, ಮನೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ.
ಸ್ವಗ್ರಾಮಕ್ಕೆ 407 ವಲಸೆ ಕಾರ್ಮಿಕರು: ಎರಡನೇ ದಿನವೂ ಜಿಲ್ಲೆಯಿಂದ ವಲಸೆ ಕಾರ್ಮಿಕರು ತಮ್ಮೂರಿನತ್ತ ತೆರಳಿದರು. 2ನೇ ದಿನ ಜಿಲ್ಲೆಯ ವಿವಿಧ ಭಾಗದಲ್ಲಿ ನೆಲೆನಿಂತಿದ್ದ ರಾಜ್ಯದ ವಿವಿಧ ಜಿಲ್ಲೆಗಳ 407 ವಲಸೆ ಕಾರ್ಮಿಕರನ್ನು 14 ಬಸ್‌ಗಳಲ್ಲಿ ಸ್ವಗ್ರಾಮಗಳಿಗೆ ಕಳುಹಿಸುವ ಕಾರ್ಯಾಚರಣೆ ಮಂಗಳವಾರವೂ ಮುಂದುವರಿಯಿತು. ಯಾದಗಿರಿ-ಕಲ್ಬುರ್ಗಿ, ರಾಯಚೂರು, ಶಿವಮೊಗ್ಗ, ಹಾವೇರಿ-ಬೆಳಗಾವಿ, ಹುಬ್ಬಳ್ಳಿ-ಗದಗ, ಬೆಂಗಳೂರು, ಶಿವಮೊಗ್ಗ-ಉಡುಪಿ, ಬೆಳಗಾವಿ, ಯಾದಗಿರಿ-ರಾಯಚೂರು-ಬೀದರ್, ಕುಷ್ಟಗಿ-ಬಾಗಲಕೋಟೆ, ಬಿಜಾಪುರ-ಬಾಗಲಕೋಟೆ, ಬಳ್ಳಾರಿ-ರಾಯಚೂರು ಜಿಲ್ಲೆಗಳಿಗೆ ಒಟ್ಟು 14 ಬಸ್‌ಗಳಲ್ಲಿ 407 ಕಾರ್ಮಿಕರನ್ನು ತುಮಕೂರು ನಗರದಿಂದ ಕಳುಹಿಸಿಕೊಡಲಾಯಿತು. ಬೇರೆ ಜಿಲ್ಲೆಗಳಿಂದ 326 ವಲಸೆ ಕಾರ್ಮಿಕರು ಜಿಲ್ಲೆಗೆ ಬಂದಿದ್ದು ಅವರ ಸಂಪೂರ್ಣ ಮಾಹಿತಿಯನ್ನು ಆಯಾ ತಹಸೀಲ್ದಾರ್ ಪಡೆದುಕೊಂಡು ಹೋಂ ಕ್ವಾರಂಟೈನ್‌ನಲ್ಲಿರಿಸಲಿದ್ದಾರೆ.