ಮತ್ತೊಮ್ಮೆ ಕೊಡಗಿನಲ್ಲಿ ಕರೊನಾ

Published on

ಮಡಿಕೇರಿ: ಹಸಿರು ವಲಯದಲ್ಲಿದ್ದ ಕೊಡಗು ಜಿಲ್ಲೆಯಲ್ಲಿ 60 ದಿನ ಬಳಿಕ ಮತ್ತೊಮ್ಮೆ ಕರೊನಾ ವೈರಾಣು ಸೋಂಕು ಕಾಣಿಸಿಕೊಂಡಿದೆ. ಮುಂಬೈಯಿಂದ ಮರಳಿರುವ ಮಡಿಕೇರಿ ತಾಲೂಕಿನ ಮಹಿಳೆ ಮೂಲಕ ಸೋಂಕು ಮತ್ತೊಮ್ಮೆ ಕೊಡಗು ಪ್ರವೇಶಿಸಿದೆ. ಎರಡು ತಿಂಗಳ ಹಸಿರು ವಲಯಕ್ಕೆ ಇದೀಗ ಮುಂಬೈಯಿಂದ ಭಂಗ ಉಂಟಾಗಿದೆ.

ದುಬೈಯಿಂದ ಮರಳಿದ್ದ ವಿರಾಜಪೇಟೆ ತಾಲೂಕು ವ್ಯಾಪ್ತಿಯ ಕೊಂಡಂಗೇರಿ ಗ್ರಾಮದ ಕೇತಿಮೊಟ್ಟೆ ನಿವಾಸಿಗೆ ಮಾರ್ಚ್ 19 ರಂದು ಸೋಂಕು ಕಾಣಿಸಿಕೊಂಡಿತ್ತು. ಆತ ಗುಣಮುಖರಾದ ಬಳಿಕ ಕೊಡಗು ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಪ್ರಥಮ ಸೋಂಕಿತ ವ್ಯಕ್ತಿ ಗುಣಮುಖರಾದ ಬಳಿಕ 28 ದಿನ ಮತ್ತೊಂದು ಪ್ರಕರಣ ಕಾಣಿಸಿಕೊಳ್ಳದ ಕಾರಣದಿಂದ ರಾಷ್ಟ್ರ ಮಟ್ಟದಲ್ಲಿ ಕೊಡಗು ಗುರುತಿಸಿಕೊಂಡಿತ್ತು.

ಸೋಂಕಿತ ಮಹಿಳೆಗೆ ಯಾವ ರೋಗ ಲಕ್ಷಣ ಇಲ್ಲದಿರುವುದು ವಿಶೇಷ. ಮುಂಬೈಯಿಂದ ಆಗಮಿಸಿದ್ದಾರೆಂಬ ಕಾರಣಕ್ಕಾಗಿ ತಕ್ಷಣ ಗಂಟಲು ದ್ರವ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿದ್ದ ಹಿನ್ನೆಲೆಯಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯದ ಮಟ್ಟಿಗೆ ಮಹಿಳೆ ಆರೋಗ್ಯದಿಂದ ಇದ್ದು, ಪಾಸಿಟಿವ್ ಬಂದಿರುವ ಮಾಹಿತಿ ನೀಡಲಾಗಿದೆ.

ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದವರು ಮಾತ್ರ ಸೋಂಕಿತ ಮಹಿಳೆ ನೇರ ಸಂಪರ್ಕಕ್ಕೆ ಬಂದಿದ್ದಾರೆ. ಆಂಬುಲೆನ್ಸ್ ಮೂಲಕ ಕೋವಿಡ್ ಆಸ್ಪತ್ರೆ ಐಸೋಲೇಷನ್ ವಾರ್ಡ್‌ಗೆ ದಾಖಲಿಸಿದ್ದರಿಂದ ಸೋಂಕು ಹರಡುವ ಆತಂಕವಿಲ್ಲ. ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದವರ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ. ಅಗತ್ಯವಾದಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ನಿರ್ಧಾರಕ್ಕೆ ಬರಲಾಗಿದೆ.

ಸೋಂಕಿತ ಮಹಿಳೆ ತಮ್ಮ ಮನೆಗೆ ಹೋಗದಿರುವುದು ಹಾಗೂ ಮನೆಯವರು ಭೇಟಿ ಮಾಡದಿರುವುದರಿಂದ ಈ ಬಾರಿ ಯಾವ ಗ್ರಾಮವನ್ನು ಕಂಟೈನ್‌ಮೆಂಟ್ ಏರಿಯಾ, ಬಫರ್ ಜೋನ್ ಎಂದು ಘೋಷಿಸಲಾಗುತ್ತಿಲ್ಲ. ಇದೊಂದು ಸಮಾಧಾನಕರ ವಿಷಯ. ಹೀಗಿದ್ದರೂ, ಸೋಂಕು ಪೀಡಿತ ಪ್ರದೇಶದಿಂದ ಬಂದವರು ಹಾಗೂ ವಿದೇಶದಿಂದ ಆಗಮಿಸುವವರ ವೈದ್ಯಕೀಯ ಪರೀಕ್ಷಾ ವರದಿ ಕುತೂಹಲ ಮೂಡುವಂತೆ ಮಾಡಿದೆ.
ಮಹಾರಾಷ್ಟ್ರದಿಂದ 40, ತಮಿಳುನಾಡಿನಿಂದ 75, ಕೇರಳದಿಂದ 192, ಆಂಧ್ರಪ್ರದೇಶ, ತೆಲಂಗಾಣದಿಂದ 14, ರಾಜಸ್ಥಾನದಿಂದ 8, ಗುಜರಾತ್‌ನಿಂದ 1 ಸೇರಿ ಹೊರ ರಾಜ್ಯದಿಂದ 420 ಜನ ಆಗಮಿಸಿದ್ದಾರೆ. ಈ ಪೈಕಿ ಇನ್ನೂ 200 ಜನರ ವೈದ್ಯಕೀಯ ಪರೀಕ್ಷಾ ವರದಿ ಪ್ರಯೋಗಾಲಯದಿಂದ ಬರಬೇಕಾಗಿದೆ.

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 10 ವರ್ಷ ಪ್ರಾಯದೊಳಗಿನ ಇಬ್ಬರು ಮಕ್ಕಳೊಂದಿಗೆ ಗರ್ಭಿಣಿ ಆಗಮಿಸಿದ್ದು, ಸಾಂಸ್ಥಿಕ ಸಂಪರ್ಕ ತಡೆಯಲ್ಲಿದ್ದಾರೆ. ವೈದ್ಯಕೀಯ ವರದಿ ನೆಗೆಟಿವ್ ಬಂದಲ್ಲಿ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ದುಬೈಯಿಂದ ಮುಂಬೈಗೆ ಆಗಮಿಸಿದ್ದ ಕೊಡಗಿನ ಒಬ್ಬ, ಬೆಂಗಳೂರಿನ ಇಬ್ಬರು ಸೇವಾ ಸಿಂಧೂ ಪಾಸ್ ಪಡೆದುಕೊಂಡು ತೆರಳುತ್ತಿದ್ದ ವೇಳೆ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ವಶಕ್ಕೆ ಪಡೆದು ಸಾಂಸ್ಥಿಕ ಸಂಪರ್ಕ ತಡೆಗೆ ಒಳಪಡಿಸಲಾಗಿದೆ. ವಿದೇಶದಿಂದ ಆಗಮಿಸಿದ 6 ಜನ ಈಗ ಸಾಂಸ್ಥಿಕ ಸಂಪರ್ಕ ತಡೆಯಲ್ಲಿದ್ದಾರೆ.

ಹೊರ ರಾಜ್ಯ, ಹೊರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಇದಕ್ಕೆ ಯಾರೂ ಗಾಬರಿಗೆ ಒಳಗಾಗುವ ಅಗತ್ಯತೆ ಇಲ್ಲ. 250 ಹಾಸಿಗೆ ಕೋವಿಡ್ ಆಸ್ಪತ್ರೆ ಚಿಕಿತ್ಸೆಗೆ ಸಜ್ಜುಗೊಂಡಿದೆ. 120 ಜನರಿಗೆ ಕೃತಕ ಉಸಿರಾಟ ವ್ಯವಸ್ಥೆ ಇದೆ. 13 ವೆಂಟಿಲೇಟರ್ ಇದೆ. ಮೇ 29 ರಂದು ಮಡಿಕೇರಿಯಲ್ಲಿಯೇ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಭಯ ನೀಡಿದ್ದಾರೆ.

ಜಿಲ್ಲೆಯಲ್ಲಿರುವ ಎಲ್ಲ ವಿದ್ಯಾರ್ಥಿ ನಿಲಯವನ್ನು ಸಾಂಸ್ಥಿಕ ಸಂಪರ್ಕ ತಡೆ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಹಾಸ್ಟೆಲ್‌ನ ಒಟ್ಟು ಸಾಮರ್ಥ್ಯದ ಶೇ.30 ರಷ್ಟು ಜನರಿಗೆ ಆಶ್ರಯ ಕಲ್ಪಿಸಲಾಗುತ್ತಿದೆ. ಹಣ ಪಾವತಿಸಿ ವಾಸ್ತವ್ಯ ಹೂಡುವವರಿಗೆ ಜಿಲ್ಲೆಯ 25 ಹೋಟೆಲ್ ಗುರುತಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net