ಆ್ಯಪ್‌ನಿಂದ ಕರೊನಾ ರೋಗಿ ಪತ್ತೆ!

Arogya sethu
Published on

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮೊದಲ ಬಾರಿಗೆ ಆರೋಗ್ಯ ಸೇತು ಆ್ಯಪ್ ಮೂಲಕ ಕರೊನಾ ರೋಗಪೀಡಿತನನ್ನು ಗುರುತಿಸಲಾಗಿದೆ.

ಮಂಗಳೂರಿನ ಎಕ್ಕೂರಿನ ಮೀನು ಮಾರಾಟ ಮಾಡುವ ಯುವಕನ ಬಗ್ಗೆ ಮೊದಲು ಶಂಕೆ ವ್ಯಕ್ತವಾಗಿ, ನಂತರ ಪರೀಕ್ಷೆಯಲ್ಲಿ ಆತ ರೋಗಿ ಎಂದು ಸಾಬೀತಾಗಿದೆ. ವಿಶೇಷವೆಂದರೆ, ಈ ಯುವಕನಿಗೆ ಕೋವಿಡ್ ತಗುಲಿರುವ ವಿಚಾರ ಆರೋಗ್ಯ ಇಲಾಖೆ ಅಧಿಕಾರಿಗಳಿಗಿಂತ ಮೊದಲು ತಿಳಿದದ್ದು ನೆರಮನೆಯವರಿಗೆ. ಆರೋಗ್ಯ ಸೇತು ಆ್ಯಪ್ ಮೂಲಕ ಅವರಿಗೆ ಈ ಮಾಹಿತಿ ಗೊತ್ತಾಯಿತು. ಆ್ಯಪ್ ಕೋವಿಡ್ ಲಕ್ಷಣವಿರುವ ವ್ಯಕ್ತಿ ಸಮೀಪದಲ್ಲಿದ್ದಾಗ ಎಚ್ಚರಿಸುವ ಕೆಲಸ ಮಾಡುತ್ತದೆ. ಈ ಕಾರಣದಿಂದ ನೆರಮನೆಯವರು ಯುವಕನನ್ನು ವಿಚಾರಿಸಿದ್ದು ರೋಗ ಲಕ್ಷಣವಿರುವುದನ್ನು ಆತ ಒಪ್ಪಿಕೊಂಡ. ನಂತರ ಆರೋಗ್ಯ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು. ಅದುವರೆಗೂ ವಿಷಯ ಬಹಿರಂಗಪಡಿಸದ ಯುವಕನ ಬಗ್ಗೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.

ಸಂಪರ್ಕದಿಂದ ಸೋಂಕು: ಈ ಯುವಕ ಬಂದರಿಗೆ ಹೋಗಿ ಮೀನು ತಂದು ಮನೆ ಮನೆಗೆ ಹೋಗಿ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆತನಿಂದ ಮೀನು ಖರೀದಿ ಮಾಡಿದ್ದವರು ಆತಂಕಕ್ಕೊಳಗಾಗಿದ್ದಾರೆ. ಯುವಕನಿಗೆ ಬೇರೊಬ್ಬ ಕರೊನಾ ಪಾಸಿಟಿವ್ ರೋಗಿಯಿಂದಲೇ ಸೋಂಕು ತಗಲಿರುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಂಪರ್ಕ ವಿಶ್ಲೇಷಣೆ ವೇಳೆ ತಿಳಿದು ಬಂದಿದೆ. ಎಕ್ಕೂರಿನ ಯುವಕನಿಗೆ ಕರೊನಾ ಪಾಸಿಟಿವ್ ಇದ್ದವರ ಸಂಪರ್ಕ ಇತ್ತು. ಅದು ದೃಢಪಟ್ಟಿದೆ. ಅದರಿಂದಾಗಿಯೇ ಸೋಂಕು ಬಂದಿದ್ದು, ಆತನನ್ನು ಭಾನುವಾರ ಪರೀಕ್ಷೆಗೆ ಒಳಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net