ಅಷ್ಟಮಿ ಮಾರಾಟ, ಖರೀದಿಗಿಲ್ಲ ಆಸಕ್ತಿ, ಕರೊನಾ, ಮಳೆ ಹಿನ್ನೆಲೆಯಲ್ಲಿ ಬಾರದ ಹೂವಿನ ವ್ಯಾಪಾರಿಗಳು

janmashtami
Published on

ಮಂಗಳೂರು: ಪ್ರಸಕ್ತ ಸಾಲಿನ ಹಬ್ಬಗಳ ಸೀಸನ್ ಆರಂಭವಾಗಿದೆ. ಆದರೆ ಹಿಂದಿನ ವರ್ಷಗಳಂತೆ ಈ ಬಾರಿ ಜನರು-ವ್ಯಾಪಾರಿಗಳಲ್ಲಿ ಹೆಚ್ಚಿನ ಆಸಕ್ತಿ ಕಂಡುಬಂದಿಲ್ಲ. ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ನಗರದ ಮಾರುಕಟ್ಟೆಗಳಲ್ಲಿ ಭಾರಿ ರಷ್ ಇರಬೇಕಿತ್ತು. ಆದರೆ ಎಲ್ಲೂ ಹಬ್ಬದ ಖರೀದಿಯ ಕಳೆಯೇ ಇರಲಿಲ್ಲ.

ಹಾಸನ, ಮೈಸೂರು ಭಾಗದಿಂದ ನೂರಾರು ಸಂಖ್ಯೆಯಲ್ಲಿ ಹೂವಿನ ವ್ಯಾಪಾರಿಗಳು ಎರಡು ದಿನ ಮೊದಲೇ ನಗರಕ್ಕೆ ಬಂದು ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿದ್ದು. ಮಿನಿ ವಿಧಾನಸೌಧ, ಪುರಭವನ ಮುಂಭಾಗ, ಮೈದಾನ ರಸ್ತೆ, ಸ್ಟೇಟ್‌ಬ್ಯಾಂಕ್ ಮೊದಲಾದೆಡೆ ಜನ ಜಂಗುಳಿ ಈ ಬಾರಿ ಕಂಡುಬಂದಿಲ್ಲ. ಈ ಬಾರಿ ಬೆರಳೆಣಿಕೆಯ ಹೂವಿನ ವ್ಯಾಪಾರಿಗಳು ಮಾತ್ರ ನಗರಕ್ಕೆ ಬಂದು ವ್ಯಾಪಾರ ಮಾಡಿದ್ದಾರೆ.

ಸೇವಂತಿಗೆ ಮೊಳ 30-40 ರೂ., ಕಾಕಡ 30 ರೂ., ತುಳಸಿ ಮಾಲೆ ಗೆ 40-50 ರೂ.(ಮೊಳ) ದರದಲ್ಲಿ ಮಾರಾಟವಾಗಿದೆ. ಹಿಂದಿನ ವರ್ಷಗಳಲ್ಲಿ ಹೂವಿನ ಗುಚ್ಚಿಗಳಿಗೇ ಬೇಡಿಕೆ ಇರುತಿತ್ತು. ಆದರೆ ಈ ಬಾರಿ 100 ರೂ., 200 ರೂ. ಮೌಲ್ಯದ ಹೂವುಗಳನ್ನು ಮಾತ್ರ ಜನರು ಖರೀದಿಸುತ್ತಿರುವುದು ಕಂಡು ಬಂದಿದೆ. ನಗರಕ್ಕೆ ಬಂದಿರುವ ಹೂವಿನ ಪ್ರಮಾಣವೂ ಕಡಿಮೆಯಾಗಿದೆ.

ಮೂಡೆಯೂ ದುಬಾರಿ: ಅಷ್ಟಮಿಗೆ ಪ್ರಮುಖ ತಿಂಡಿಯಾಗಿರುವ ಮೂಡೆ ಎಲೆಗಳೂ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದು, ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಮೂಡೆಗೆ ಹೆಚ್ಚಿನ ಬೇಡಿಕೆಯಿದ್ದು, 100 ರೂಪಾಯಿಗೆ ದೊಡ್ಡ ಗಾತ್ರದ 4 ಮತ್ತು ಸಣ್ಣ ಗಾತ್ರದ 6 ಮೂಡೆ ಸಿಗುತ್ತಿದೆ. ತಯಾರಿ ಕಷ್ಟ, ಪರಿಕರಗಳು ದೂರದಿಂದ ತರಬೇಕಾಗಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಾರೆ ವ್ಯಾಪಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net