

| ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ದೇಶದ ಏಕೈಕ ಅಧಿಕೃತ ರಾಷ್ಟ್ರ ಧ್ವಜ ನಿರ್ಮಾಣ ಸಂಸ್ಥೆಯಾದ ನಗರದ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ನಿರ್ಮಾಣ ಕಾರ್ಯಕ್ಕೂ ಕರೊನಾ ಲಾಕ್ಡೌನ್ ಬಿಸಿ ತಟ್ಟಿದೆ. ಈ ಬಾರಿಯೂ ಬೇಡಿಕೆ ಹೆಚ್ಚಳವಾಗದಿರುವುದು ಸಂಘದ ಸಾವಿರಾರು ನೇಕಾರರು ಹಾಗೂ ಕಾರ್ವಿುಕರ ಆತಂಕಕ್ಕೆ ಕಾರಣವಾಗಿದೆ. ಕರೊನಾ ಪೂರ್ವದಲ್ಲಿ ಖಾದಿ ಗ್ರಾಮೋದ್ಯೋಗ ಸಂಘವು ವಾರ್ಷಿಕವಾಗಿ 2 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿತ್ತು. ಲಾಕ್ಡೌನ್ ಬಳಿಕ ಈ ಪ್ರಮಾಣ ಅರ್ಧಕ್ಕಿಂತ ಕಡಿಮೆಯಾಗಿದ್ದು, 2020ರಲ್ಲಿ 1.29 ಕೋಟಿ ರೂ. ಹಾಗೂ 2021ರಲ್ಲಿ ಜುಲೈವರೆಗೆ 92 ಲಕ್ಷ ರೂ. ವಹಿವಾಟು ನಡೆದಿದೆ.
1957ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ ಸ್ಥಾಪಿಸಿದ ಖಾದಿ ಗ್ರಾಮೋದ್ಯೋಗ ಸಂಘ ತಯಾರಿಸಿದ ತ್ರಿವರ್ಣ ಧ್ವಜಗಳು ಇಂದು ದೇಶ- ವಿದೇಶಗಳಲ್ಲಿ ರಾರಾಜಿಸುತ್ತಿವೆ. ರಾಷ್ಟ್ರಧ್ವಜ ನಿರ್ವಣಕ್ಕಾಗಿ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಮಾರ್ಕ್ ಪಡೆದಿರುವ ದೇಶದ ಏಕೈಕ ಸಂಘ ಖಾದಿ ಗ್ರಾಮೋದ್ಯೋಗ ಸಂಘ. ದೆಹಲಿಯ ಸಂಸತ್ ಭವನ, ಕೆಂಪು ಕೋಟೆ, ರಕ್ಷಣಾ ಇಲಾಖೆ, ಬೆಂಗಳೂರಿನ ವಿಧಾನಸೌಧ, ರಾಜಭವನ, ಸರ್ಕಾರಿ ಕಚೇರಿ ಸೇರಿ ಬಹುತೇಕ ರಾಜ್ಯಗಳಲ್ಲೂ ಆ. 15, ಜ.26ರಂದು ಇಲ್ಲಿನ ಧ್ವಜಗಳೇ ಹಾರಾಡುತ್ತವೆ. ಈ ಸಂಘದ ಅಡಿಯಲ್ಲಿ ಸುಮಾರು 1100 ಕಾರ್ವಿುಕರು, ನೇಕಾರರು ಕೆಲಸ ಮಾಡುತ್ತಾರೆ. ರಾಷ್ಟ್ರಧ್ವಜಕ್ಕೆ ಬೇಕಾಗುವ ಕಚ್ಚಾ ವಸ್ತುಗಳಾದ ನೂಲು ಹಾಗೂ ಬಟ್ಟೆಯು ಬಾಗಲಕೋಟೆ ಜಿಲ್ಲೆಯಲ್ಲಿ ತಯಾರಾಗುತ್ತದೆ. ಅಲ್ಲಿ ತಯಾರಾದ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಹುಬ್ಬಳ್ಳಿಗೆ ಬೆಂಗೇರಿಗೆ ತಂದು ಬಿಐಎಸ್ ಮಾರ್ಗಸೂಚಿ ಅನ್ವಯ 9 ಅಳತೆಗಳ ಧ್ವಜ ತಯಾರಿಸಿ ಅಶೋಕ ಚಕ್ರ ಮುದ್ರಿಸಲಾಗುತ್ತದೆ.
3 ಕೋಟಿ ರೂ. ಪ್ರೋತ್ಸಾಹಧನ ಬಾಕಿ: ಖಾದಿ ಗ್ರಾಮೋದ್ಯೋಗ ಸಂಘಕ್ಕೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನ 3 ಕೋಟಿ ರೂ. ಬಾಕಿ ಇದೆ. ರಾಜ್ಯದ ಎಲ್ಲ ಸಂಸ್ಥೆಗಳಿಗೆ ಬರಬೇಕಾದ 105 ಕೋಟಿ ರೂ. ಸಹಾಯಧನದಲ್ಲಿ ಸರ್ಕಾರ ಈಗಾಗಲೇ ಖಾದಿ ಬೋರ್ಡ್ಗೆ 75 ಕೋಟಿ ರೂ. ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಬಾಕಿ ಹಣ ಸಂಘದ ಕೈ ಸೇರಲಿದೆ ಎಂದು ಮೂಲಗಳು ತಿಳಿಸಿವೆ.
ಹಸಿವಿನಲ್ಲೇ ರಾಷ್ಟ್ರಸೇವೆ!: ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದಲ್ಲಿರುವ ಖಾದಿ ಗ್ರಾಮದ್ಯೋಗ ಕೇಂದ್ರದ ರಾಷ್ಟ್ರಧ್ವಜ ಬಟ್ಟೆ ತಯಾರಿಕೆ ಘಟಕದ ಮಹಿಳಾ ಕಾರ್ವಿುಕರು ರಟ್ಟೆ ಸೋತರೂ ಹೊಟ್ಟೆಯಲ್ಲಿ ನೋವು ಅದುಮಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇಲ್ಲಿನ 60 ಮಹಿಳಾ ಕಾರ್ವಿುಕರು ಭಕ್ತಿಯಿಂದ ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರು ಮಾಡುತ್ತ ಬಂದಿದ್ದಾರೆ. ಇಲ್ಲಿ ನೂಲುವವರು ಹಾಗೂ ಬಟ್ಟೆ ನೇಯ್ಗೆ ಮಾಡುವವರು ತಲಾ 25ಕಾರ್ವಿುಕರಿದ್ದು, ಇತರರು ಹತ್ತು ಜನ ಇದ್ದಾರೆ.
ನೂಲು ತೆಗೆಯುವವರಿಗೆ ಒಂದು ಲಡಿಗೆ 8 ರೂ.ಕೂಲಿ ಸಿಗುತ್ತಿದ್ದು, ಪ್ರತಿ ದಿನ ಅಬ್ಬಬ್ಬ ಅಂದರೆ 150 ರೂ. ಸಿಗುತ್ತಿದೆ. ಹಾಗೆಯೇ ಬಟ್ಟೆ ನೇಯುವವರಿಗೆ ಒಂದು ಮೀಟರ್ಗೆ 20 ರೂ.ಕೂಲಿ ಕೊಡುತ್ತಿದ್ದು, ದಿನಕ್ಕೆ 200 ರಿಂದ 250 ರೂ. ವರೆಗೂ ಸಿಗುತ್ತಿದೆ. ಇವತ್ತಿನ ದುಬಾರಿ ಕಾಲದಲ್ಲಿ ಇಷ್ಟು ಕಡಿಮೆ ಪಗಾರದಲ್ಲಿ ಕುಟುಂಬ ನಿರ್ವಹಣೆ ಕಷ್ಟ ಕಷ್ಟ ಆಗುತ್ತಿದೆ ಎನ್ನುವುದು ಮಹಿಳಾ ಕಾರ್ವಿುಕರ ನೋವು.
ಈ ಬಾರಿ 75ನೇ ಸ್ವಾತಂತ್ರ್ಯೊತ್ಸವದ ಸಂಭ್ರಮ ಇದ್ದರೂ ರಾಷ್ಟ್ರಧ್ವಜಕ್ಕೆ ಹೆಚ್ಚು ಬೇಡಿಕೆ ಬಂದಿಲ್ಲ. ಕಳೆದ ವರ್ಷಕ್ಕಿಂತ ಈ ವರ್ಷ ಶೇ. 10 ಮಾತ್ರ ಬೇಡಿಕೆ ಹೆಚ್ಚಾಗಿದೆ.
| ಶಿವಾನಂದ ಮಠಪತಿ ಕಾರ್ಯದರ್ಶಿ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ