ಸಂಕಷ್ಟ ಗೆಲ್ಲಲು ಪ್ರತಿಯೊಬ್ಬರು ಸರ್ಕಾರದ ನಿಯಮ ಪಾಲಿಸಿ

11-klr-8
Published on

ಕೋಲಾರ: ದೇಶವನ್ನು ಪ್ಲೇಗ್ ಕಾಡಿದ ಸಮಯದಲ್ಲಿ ಎದುರಿಸಿದ ಸಂಕಷ್ಟಕ್ಕಿಂತಲೂ ಕರೊನಾ ಹೆಚ್ಚು ಸಂಕಷ್ಟ ತಂದೊಡ್ಡಿದೆ. ಇಂತಹ ಸಂಕಷ್ಟವನ್ನು ಗೆಲ್ಲಲು ಪ್ರತಿಯೊಬ್ಬರು ಸರ್ಕಾರದ ನಿಯಮ ಪಾಲಿಸಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಕರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಪತ್ರಕರ್ತರಿಗೆ ದೊಡ್ಡಬಳ್ಳಾಪುರದ ರಾಜಶ್ರೀ ಕಂಪರ್ಟಸ್ ಹಾಗೂ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಕೊಡುಗೆಯಾಗಿ ನೀಡಿದ ದಿನಸಿ ಕಿಟ್‌ಗಳನ್ನು ಶನಿವಾರ ವಿತರಿಸಿ ಮಾತನಾಡಿದರು.

ದೊಡ್ಡಬಳ್ಳಾಪುರ ರಾಜಶ್ರೀ ಕಂಪರ್ಟಸ್ ಮಾಲೀಕ ಪದ್ಮರಾಜ್ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1 ಕೋಟಿ ವೆಚ್ಚದಲ್ಲಿ 40,000 ದಿನಸಿ ಕಿಟ್ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರ ಮನವಿಗೆ ಕೋಲಾರ ಜಿಲ್ಲೆಯಲ್ಲಿನ ಎಲ್ಲ ಪತ್ರಕರ್ತರಿಗೂ ದಿನಸಿ ಕಿಟ್ ನೀಡುತ್ತಿರುವುದಾಗಿ ಹೇಳಿದರು.

ದೊಡ್ಡಬಳ್ಳಾಪುರದ ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್‌ನ ಪಿ.ಮುನಿರಾಜು, ಬಡವರ ನೆರವಿಗೆ ನಿಲ್ಲಲು ನಾವು ಸದಾ ಸಿದ್ಧರಿದ್ದು, ಮತ್ತಷ್ಟು ನೆರವು ಒದಗಿಸುವ ಆಲೋಚನೆ ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಜಿಲ್ಲಾಡಳಿತ, ಆರೋಗ್ಯ, ಪೊಲೀಸ್ ಇಲಾಖೆಗಳ ಪರಿಶ್ರಮ ಹಾಗೂ ತಾಯಿ ಕೋಲಾರಮ್ಮನ ಕೃಪೆಯಿಂದ ಜಿಲ್ಲೆಯಲ್ಲಿ ಯಾವುದೇ ಕರೊನಾ ಪ್ರಕರಣಗಳಿಲ್ಲ. ಪತ್ರಕರ್ತರಿಗೆ ನೆರವಾಗುವ ಉದಾರತೆ ತೋರಿರುವ ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಟ್ರಸ್ಟ್‌ನ ಪದಾಧಿಕಾರಿಗಳಾದ ದೀರಜ್ ಮುನಿರಾಜ್, ಪಿ.ಮುನಿರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಹಾಜರಿದ್ದರು.

ಸಂಸದರಿಂದ ದಿನಸಿ ಕಿಟ್: ಕರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಸದ ಎಸ್.ಮುನಿಸ್ವಾಮಿ ಕಡೆಯಿಂದ ಪತ್ರಕರ್ತರಿಗೆ 10 ಕೆಜಿ ಅಕ್ಕಿ, ಬೇಳೆ, ಎಣ್ಣೆ, ಸೋಪು ಇರುವ ಕಿಟ್‌ಗಳನ್ನು ಸಂಸದರ ಪರವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ನಗರಾಧ್ಯಕ್ಷ ತಿಮ್ಮರಾಯಪ್ಪ ವಿತರಿಸಿದರು. ಮುಖಂಡರಾದ ವಿಜಯಕುಮಾರ್, ಶಿವಕುಮಾರ್, ಮುನಿರಾಜು, ಅಪ್ಪಿನಾರಾಯಣಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net