

ಕೋಲಾರ: ಕರೊನಾ ಹಾವಳಿ ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ದೇಶವ್ಯಾಪಿ ಲಾಕ್‌ಡೌನ್‌ಗೆ ಸಂಪೂರ್ಣ ಬೆಂಬಲ ನೀಡಿರುವ ಜಿಲ್ಲೆಯ ಜನತೆ ಸಮಯ ಸಾಧಕರ ದುರಾಸೆಯಿಂದ ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಪದಾರ್ಥಗಳನ್ನು ಖರೀದಿಸಲು ಭಯಪಡುತ್ತಿದ್ದಾರೆ.
ದಿನಸಿ, ತರಕಾರಿ ಕೊಳ್ಳುವುದಕ್ಕೆ ಯಾವುದೇ ನಿರ್ಬಂಧವಿಲ್ಲ, ಕಾಳಸಂತೆಕೋರರು ಪರಿಸ್ಥಿತಿಯ ಲಾಭಕ್ಕೆ ಯತ್ನಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದ್ದರೂ ಜಿಲ್ಲಾದ್ಯಂತ ಬಹುತೇಕ ವ್ಯಾಪಾರಿಗಳು ದಿನಸಿ, ತರಕಾರಿ, ಕೃಷಿ ಪರಿಕರಗಳ ಕೃತಕ ಅಭಾವ ಸೃಷ್ಟಿಸಿ ದುಪ್ಪಟ್ಟು ಬೆಲೆೆಗೆ ಮಾರಾಟ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆಂಬ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಕರೊನಾ ತಡೆಗೆ ಆರೋಗ್ಯ ಇಲಾಖೆ ಕ್ರಿಯಾಶೀಲತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರೆ, ಆಹಾರ, ಕೃಷಿ ಸೇರಿ ಇನ್ನಿತರ ಇಲಾಖೆಗಳು ಜಾಣ ನಿದ್ರೆಗೆ ಜಾರಿರುವುದರಿಂದ ಸಾರ್ವಜನಿಕರು ಕರೊನಾಕ್ಕಿಂತ ಹಗಲು ದರೋಡೆಕೋರರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ,
ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ, ಚಿಕನ್, ಮಟನ್ ಬೆಲೆ ಏರಿಕೆಯಾಗಿದೆ, ಮದ್ಯ ನಿಷೇಧವಾಗಿದ್ದರೂ ಅನೇಕ ಕಡೆ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಕೃಷಿ ಕೆಲಸಕ್ಕೆ ಬಳಸುವ ಔಷಧಗಳ ಬೆಲೆ ಹೆಚ್ಚಿಸಿರುವುದರಿಂದ ಬಡ ರೈತರು ಸಂಕಟಕ್ಕೆ ಒಳಗಾಗಿದ್ದಾರೆಂದು ರೈತ ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ಎಪಿಎಂಸಿಗಳಲ್ಲಿ ರೈತರಿಂದ ಕಡಿಮೆ ಬೆಲೆಗೆ ತರಕಾರಿ ಹಾಗೂ ಕೃಷಿ ಉತ್ಪನ್ನ ಕೊಂಡು ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಕರೊನಾ ತಡೆಗಾಗಿ ಕೋಲಾರ ಎಪಿಎಂಸಿಗೆ ಸ್ಥಳೀಯ ರೈತರನ್ನು ಹೊರತುಪಡಿಸಿ ಬೇರೆ ಜಿಲ್ಲೆಯವರಿಗೆ ಪ್ರವೇಶ ನೀಡಬಾರದು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟೈಸರ್, ಮಾಸ್ಕ್ ಸಿಗುತ್ತಿಲ್ಲ, ಕೆಲವೆಡೆ ಸ್ಟಾಕ್ ಇಲ್ಲವೆಂದು ಹೇಳುವ ವ್ಯಾಪಾರಿಗಳು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ವಾಹನ ಪಾಸ್ ವಿತರಣೆಯಲ್ಲೂ ಭ್ರಷ್ಟಾಚಾರದ ವಾಸನೆ ಹರಡಿದ್ದು, ಸಾರ್ವಜನಿಕರು ಪ್ರತಿಭಟಿಸುವ ಮುನ್ನ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕರೊನಾ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಜನ ಬೆಂಬಲ ನೀಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳಲು ಯತ್ನಿಸುತ್ತಿರುವ ಕೆಲವರು ಅಗತ್ಯ ಪದಾರ್ಥಗಳ ಬೆಲೆ ಏರಿಕೆ ಮಾಡಿ ಜನರನ್ನು ದೋಚುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಕರೊನಾ ಸಂಬಂಧ ರಚಿಸಿರುವ ಟಾಸ್ಕ್ ಪೋರ್ಸ್‌ಗೆ ಹೆಚ್ಚಿನ ಅಧಿಕಾರ ನೀಡಿ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಬೇಕು, ಕೆ.ಶ್ರೀನಿವಾಸಗೌಡ, ರೈತ ಸಂಘದ ಜಿಲ್ಲಾ ಸಂಚಾಲಕ, ಕೋಲಾರ ಪರಿಸ್ಥಿತಿಯನ್ನು ಯಾರೇ ದುರ್ಬಳಕೆ ಮಾಡಿಕೊಂಡರೂ ಕಾನೂನು ಕ್ರಮ ಕೈಗೊಳ್ಳುತೇವೆ, ಜನರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಕಿರಾಣಿ ಅಂಗಡಿಗಳನ್ನು ನಿಗದಿತ ವೇಳೆಯಲ್ಲಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ವ್ಯಾಪಾರಿಗಳು ದುಬಾರಿ ಬೆಲೆಗೆ ದಿನಸಿ ಪದಾರ್ಥ ಮಾರಾಟ ಮಾಡಿದಾಗ ಗ್ರಾಹಕರು ದೂರು ನೀಡಿದರೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ರದ್ದು ಮಾಡಲಾಗುವುದು. ಸಿ.ಸತ್ಯಭಾಮಾ, ಜಿಲ್ಲಾಧಿಕಾರಿ, ಕೋಲಾರ