ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕರೊನಾ ಮಣಿಸಲು ಸಹಕರಿಸಿ

28-klr-8
Published on

ಕೋಲಾರ: ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕರೊನಾ ವಿರುದ್ಧ ಹೋರಾಟದಲ್ಲಿ ಸಹಕರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಶನಿವಾರ ಕರೆದಿದ್ದ ಕರೊನಾ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆ, ಕೆಜಿಎಫ್ ಆಸ್ಪತ್ರೆ, ಬಂಗಾರಪೇಟೆ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆಗಳಲ್ಲಿ ಒಟ್ಟು 450 ಐಸೋಲೇಷನ್ ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಇನ್ನೂ ಹೆಚ್ಚಿನ ಬೆಡ್‌ಗಳನ್ನು ಕಾಯ್ದಿರಿಸುವ ವ್ಯವಸ್ಥೆ ಮಾಡಲಾಗುವುದು. ಜನರು ಅನಾವಶ್ಯಕವಾಗಿ ಹೊರಗೆ ಬರಬಾರದು ಎಂದು ಮನವಿ ಮಾಡಿದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ರಜೆ ಪಡೆಯುವಂತಿಲ್ಲ. ಜಿಲ್ಲೆಗೆ ಅಗತ್ಯವಿರುವ ತಜ್ನ ವೈದ್ಯರ ಪಟ್ಟಿ ತಯಾರಿಸಿಕೊಳ್ಳಿ. ಅಗತ್ಯ ಬಿದ್ದಾಗ ತಜ್ನ ವೈದ್ಯರನ್ನು ಕರೆಸಿಕೊಳ್ಳಲು ಸಹಕಾರಿಯಾಗುತ್ತದೆ. ಮಾವಿನ ತೋಟಗಳಲ್ಲಿ ಔಷಧ ಸಿಂಪಡಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ತಾಲೂಕಿಗೆ ಎರಡರಂತೆ ಪಡೆದು ಗ್ರಾಮೀಣ ಮಟ್ಟದಲ್ಲೂ ವೈರಸ್ ನಾಶಕ ಔಷಧ ಸಿಂಪಡಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಇರುವ 38 ಅಂಬ್ಯುಲೆನ್ಸ್‌ಗಳಲ್ಲಿ ಕರೊನಾ ವೈರಸ್ ನಿಯಂತ್ರಣ ಕುರಿತ ಜಾಗೃತಿ ಮೂಡಿಸುವ ಸಂದೇಶಗಳನ್ನು ಬಿತ್ತರಿಸಬೇಕು. ಜಿಲ್ಲೆಯಲ್ಲಿ 166 ಹೊಮ್ ಕ್ವಾರಂಟೈನ್‌ಗಳಿದ್ದು, ಇವರು ಯಾರ ಯಾರ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿಯನ್ನು ಇಟ್ಟುಕೊಂಡಿರಿ. ಇದರಿಂದ ಮುಂದೆ ಇವರಲ್ಲಿ ಯಾರಿಗಾದರೂ ಪಾಸಿಟಿವ್ ಕಂಡುಬಂದರೆ ಇವರ ಸಂಪರ್ಕದಲ್ಲಿದ್ದವರನ್ನು ಗುರುತಿಸಲು ಅನುಕೂಲವಾಗುತ್ತದೆ ಎಂದು ಡಿಎಚ್‌ಒ ಡಾ.ಎಸ್.ಎನ್. ವಿಜಯ್‌ಕುಮಾರ್‌ಗೆ ಸೂಚಿಸಿದರು.

ಡಿಸಿ ಸಿ.ಸತ್ಯಭಾಮ ಮಾತನಾಡಿ, ಬೆಂಗಳೂರಿನಿಂದ ಪ್ರಯಾಣ ಮಾಡುತ್ತಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಜಿಲ್ಲೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಿ ಅವರು ಜಿಲ್ಲೆಯಲ್ಲಿಯೇ ಇದ್ದು ಸೇವೆ ನೀಡುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಎಸ್ಪಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ. ನಾರಾಯಣಸ್ವಾಮಿ, ಅಬಕಾರಿ ಉಪ ಆಯುಕ್ತೆ ಕೆ.ಕೆ. ಸುಮಿತಾ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net