

ಬೇತಮಂಗಲ: ಕರೊನಾ ಬಗ್ಗೆ ಗ್ರಾಮೀಣ ಜನರಲ್ಲೂ ಭಯದ ವಾತಾವರಣ ಉಂಟಾಗುತ್ತಿದ್ದು, ಕೆಜಿಎಫ್ ತಾಲೂಕಿನ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಒಟ್ಟು 14 ಮಂದಿ ಮೇಲೆ ನಿಗಾವಹಿಸಿದ್ದು, ಇಬ್ಬರನ್ನು ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೆಕ್ಕಾಗೆ ತೆರಳಿ ವಾಪಸಾಗಿದ್ದ ಬೇತಮಂಗಲದ 7 ಮತ್ತು ಸುಂದರಪಾಳ್ಯದ 5 ಮಂದಿ ಹಾಗೂ ದುಬೈನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬೇತಮಂಗಲದ ದಂಪತಿ ಸೇರಿ ಒಟ್ಟು 14 ಮಂದಿ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾವಹಿಸಿದ್ದಾರೆ.
ಮೆಕ್ಕಾಗೆ ತೆರಳಿದವರೆಲ್ಲ ಮಾ.1ರಂದು ವಾಪಸಾಗಿದ್ದು, ಇವರ‌್ಯಾರೂ ತಪಾಸಣೆಗೆ ಒಳಪಟ್ಟಿರಲಿಲ್ಲ ಎನ್ನಲಾಗಿದೆ. ಇದೀಗ ಸರ್ವೇಕ್ಷಣಾ ಇಲಾಖೆಯಿಂದ 12 ಮಂದಿಯ ಹೆಸರು ಮತ್ತು ವಿಳಾಸದ ಮಾಹಿತಿ ರವಾನಿಸಿದ್ದು, ಎಲ್ಲರನ್ನೂ ಪತ್ತೆ ಹಚ್ಚಲಾಗಿದೆ. 12 ಪೈಕಿ ಎಲ್ಲರೂ ಆರೋಗ್ಯವಾಗಿದ್ದಾರೆ. ಆದರೆ 70 ವರ್ಷದ ಮಹಿಳೆಯೊಬ್ಬರು ಜ್ವರದಿಂದ ಬಳಲುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಶುಕ್ರವಾರ ಕರೆದೊಯ್ಯಲಾಗಿದೆ.
ಈ ಮಧ್ಯೆ ದುಬೈನ ಹೋಟೆಲ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದ ದಂಪತಿ 2 ದಿನಗಳ ಹಿಂದೆ ನ್ಯೂಟೌನ್‌ನಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಇವರನ್ನು ದುಬೈ ಮತ್ತು ಬೆಂಗಳೂರು ನಿಲ್ದಾಣಗಳಲ್ಲಿ ತಪಾಸಣೆಗೆ ಒಳಪಡಿಸಿ ಸೋಂಕಿನ ಯಾವ ಲಕ್ಷಣಗಳಿಲ್ಲ ಎಂದು ಧೃಡೀಕರಿಸಲಾಗಿತ್ತಾದರೂ ಸರ್ವೇಕ್ಷಣಾ ಇಲಾಖೆ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ವೈದ್ಯಾಧಿಕಾರಿ ಡಾ.ರೆಡ್ಡಿ, ಆರೋಗ್ಯ ನಿರೀಕ್ಷಕ ಕುಮಾರ್, ಸಿಬ್ಬಂದಿ ದಂಪತಿ ಮನೆಗೆ ತೆರಳಿ ಮತ್ತೊಮ್ಮೆ ತಪಾಸಣೆ ನಡೆಸಿದ್ದಾರೆ. ಕನಿಷ್ಠ 14 ದಿನ ಗೃಹ ಬಂಧನದಲ್ಲಿರಬೇಕು ಎಂದು ಸೂಚಿಸಲಾಗಿದೆ.
ಕತಾರ್‌ನಿಂದ ಬಂದಿದ್ದ ವ್ಯಕ್ತಿಗೆ ರಿಲೀಫ್: 18 ದಿನಗಳ ಹಿಂದೆ ಕತಾರ್‌ನಿಂದ ಗ್ರಾಮಕ್ಕೆ ಬಂದಿದ್ದ ವ್ಯಕ್ತಿ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸ್ವತಃ ತಪಾಸಣೆಗೆ ಒಳಪಟ್ಟಿದ್ದು ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೂ 15 ದಿನ ಗೃಹ ಬಂಧನದಲ್ಲಿದ್ದಾರೆ.
ಕರೊನಾ ಎಂದು ಆಸ್ಪತ್ರೆ ಸೇರಿದ ಯುವಕ: ಬೇತಮಂಗಲದ ಸುವರ್ಣಹಳ್ಳಿಯ 25 ವರ್ಷದ ಯುವಕನೊಬ್ಬ ನನಗೆ ಕರೊನಾ ಬಂದಿದೆ ಎಂದು ಸ್ವಯಂ ಘೋಷಿಸಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ವಿಚಿತ್ರ ಘಟನೆಯೂ ನಡೆದಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಈತ ಕಳೆದ 3 ದಿನಗಳ ಹಿಂದೆ ಮನೆಗೆ ಬಂದಿದ್ದ. ನೆಗಡಿ, ಕೆಮ್ಮು ಬಂದಿದ್ದು ತಕ್ಷಣ ಗಾಬರಿಗೊಂಡು ಮುಳಬಾಗಿಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ರಕ್ತ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಫಲಿತಾಂಶ ನೀಡಲು ಆಸ್ಪತ್ರೆಯವರು ವಿಳಂಬ ಮಾಡಿದಾಗ ಅನುಮಾನಗೊಂಡ ಯುವಕ ನನಗೆ ಕರೊನಾ ಬಂದಿದೆ ಎಂದು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆರೋಗ್ಯ ಇಲಾಖೆಯ ಸರ್ವೇಕ್ಷಣಾ ವಿಭಾಗದ ಮಾಹಿತಿ ಮೇರೆಗೆ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವಿದೇಶದಿಂದ ಬಂದಿರುವ ಒಟ್ಟು 14 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಮಾಸ್ಕ್ ಸೇರಿ ಮುನ್ನೆಚ್ಚರಿಕೆಯ ಉಪಕರಣ ಕಡಿಮೆ ಪ್ರಮಾಣದಲ್ಲಿ ಸರಬರಾಜಾಗುತ್ತಿದೆ. ಸಿಬ್ಬಂದಿಗೆ ಗುಣಮಟ್ಟದ ಮಾಸ್ಕ್ ನೀಡುವಂತೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಡಾ. ವಿಶ್ವನಾಥ್‌ರೆಡ್ಡಿ, ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ ಬೇತಮಂಗಲ