ಐದನೇ ಬಲಿ ಪಡೆದ ಕರೊನಾ ಸೋಂಕು

Seasonal corona
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ನಾಲ್ಕನೇ ಸಾವು ದಾಖಲಿಸಿದ್ದ ಕರೊನಾ ಸೋಂಕು ಗುರುವಾರ ಇನ್ನೋರ್ವ ಮಹಿಳೆಯನ್ನು ಬಲಿ ಪಡೆಯುವುದರೊಂದಿಗೆ ಸಾವಿಗೀಡಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಮೊದಲ ಕೋವಿಡ್ ಪಾಸಿಟಿವ್ ಪ್ರಕರಣವಾಗಿ ದಾಖಲಾಗಿದ್ದ ಕುಲಶೇಖರ ನಿವಾಸಿ, 80ರ ವೃದ್ಧೆ (ಪಿ-507) ಹಲವು ದಿನಗಳಿಂದ ಪಾರ್ಶ್ವವಾಯು, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆಂತರಿಕ ರಕ್ತಸ್ರಾವದಿಂದಾಗಿ ಅವರು ಗುರುವಾರ ಮೃತರಾಗಿದ್ದಾರೆ.

ಬಂಟ್ವಾಳದ 75ರ ವೃದ್ಧೆ (ರೋಗಿ 432) ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕರೊನಾ ದೃಢಪಟ್ಟು ಏ.23ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರು ಫಸ್ಟ್ ನ್ಯೂರೋದಲ್ಲಿ ಇದ್ದ ವಾರ್ಡಿನಲ್ಲೇ ಕುಲಶೇಖರದ ವೃದ್ಧೆಯೂ ಪಾರ್ಶ್ವವಾಯು ಚಿಕಿತ್ಸೆ ಪಡೆದಿದ್ದರು. ಆಗ ಸೋಂಕು ತಗುಲಿದ್ದು, ಜತೆಗೆ ನೋಡಿಕೊಳ್ಳಲೆಂದು ಇದ್ದ ಪುತ್ರನಿಗೂ (ರೋಗಿ 506) ಬಾಧಿಸಿತ್ತು. ಏ.27ರಂದು ಬಂದ ವೈದ್ಯಕೀಯ ವರದಿಯಲ್ಲಿ ಈ ಇಬ್ಬರಿಗೂ ಸೋಂಕು ಇರುವುದು ದೃಢಪಟ್ಟಿತ್ತು.

ಹೊಸ ಪ್ರಕರಣವಿಲ್ಲ: ಜಿಲ್ಲೆಯಲ್ಲಿ 183 ಮಂದಿಯನ್ನು ತಪಾಸಣೆಗೊಳಪಡಿಸಿದ್ದು ಎನ್‌ಐಟಿಕೆಯಲ್ಲಿ 22, ಇಎಸ್‌ಐನಲ್ಲಿ 9 ಮಂದಿಯನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. ಗುರುವಾರ ಒಟ್ಟು 184 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು ಬಂದಿರುವ ಎಲ್ಲ 49 ವರದಿಗಳೂ ನೆಗೆಟಿವ್ ಆಗಿರುತ್ತವೆ. ಇನ್ನೂ 252 ಸ್ಯಾಂಪಲ್ ವರದಿ ಬರಬೇಕಿದೆ. 19 ಮಂದಿಯ ಮೇಲೆ ನಿಗಾ ಇರಿಸಲು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಪ್ಪಿನಂಗಡಿ ಮಹಿಳೆ ಬಿಡುಗಡೆ: ಉಪ್ಪಿನಂಗಡಿ ನಿವಾಸಿ 30 ವರ್ಷದ ಮಹಿಳೆ(ರೋಗಿ 389) ಗುಣಮುಖರಾಗಿದ್ದು ಗುರುವಾರ ಮನೆಗೆ ತೆರಳಿದ್ದಾರೆ. ಅವರು ಏ.18ರಂದು ಕರೊನಾ ಸೋಂಕು ದೃಢಪಟ್ಟು 19ರಂದು ವೆನ್ಲಾಕ್ ದಾಖಲಾಗಿದ್ದರು. ಮೇ 10, 13ರಂದು ಎರಡು ಬಾರಿ ಕೋವಿಡ್ ಪರೀಕ್ಷೆ ಮಾಡಿದ್ದು ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಅವರ ಪತಿ (ರೋಗಿ 325) ದೆಹಲಿಗೆ ಹೋಗಿ ವಾಪಸ್ ಬಂದ ಬಳಿಕ ಏ.17ರಂದು ಸೋಂಕು ದೃಢಪಟ್ಟು ಚಿಕಿತ್ಸೆ ಪಡೆದಿದ್ದು, ಮೇ 6ರಂದು ಬಿಡುಗಡೆಯಾಗಿದ್ದರು. ಅವರಿಂದಲೇ ಪತ್ನಿಗೂ ಸೋಂಕು ಬಂದಿತ್ತು.

ಐವರೂ ಮಹಿಳೆಯರು: ಜಿಲ್ಲೆಯಲ್ಲಿ ಕರೊನಾ ಬಾಧಿಸಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೃತಪಟ್ಟ ಎಲ್ಲ ಐವರೂ ಮಹಿಳೆಯರಾಗಿದ್ದು, ನಗರವ್ಯಾಪ್ತಿಯಲ್ಲಿ ಸಂಭವಿಸಿದ ಎರಡನೇ ಪ್ರಕರಣ ಇದು. ಬುಧವಾರ ಬೋಳೂರು ನಿವಾಸಿ ಮಹಿಳೆ ಸಾವಿಗೀಡಾಗಿದ್ದರು. ಮೃತಪಟ್ಟಿರುವ ಐವರೂ ಮಹಿಳೆಯರಾಗಿರುವುದು ಮತ್ತು ಎಲ್ಲರಿಗೂ ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕ ಇರುವುದು ಗಮನಾರ್ಹ.

ವಿಮಾನ ಪ್ರಯಾಣಿಕರ ಟೆಸ್ಟ್ ವರದಿ ಇಂದು ನಿರೀಕ್ಷೆ

ದ.ಕ ಜಿಲ್ಲೆಗೆ ದುಬೈನಿಂದ ವಿಮಾನದಲ್ಲಿ ಆಗಮಿಸಿರುವ ಪ್ರಯಾಣಿಕರ ಕರೊನಾ ಟೆಸ್ಟ್ ವರದಿ ಮೇ 15ರಂದು ಬೆಳಗ್ಗೆ ಲಭಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಮೇ 12ರಂದು ರಾತ್ರಿ ಆಗಮಿಸಿದ್ದ 179 ಮಂದಿಯಲ್ಲಿ 50 ಮಂದಿ ಉಡುಪಿ, 10 ಮಂದಿ ಉತ್ತರ ಕನ್ನಡದವರಾಗಿದ್ದು ಅವರನ್ನು ತವರು ಜಿಲ್ಲೆಗೆ ಕಳುಹಿಸಲಾಗಿದೆ. 119 ಮಂದಿ ದ.ಕ ಜಿಲ್ಲೆಯವರಾಗಿದ್ದು ಮಂಗಳೂರಿನ ವಿವಿಧ ವಸತಿ ಗೃಹಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಮೇ 12ರಂದು ತಡರಾತ್ರಿಯೇ ಅವರ ಗಂಟಲು ದ್ರವದ ಸ್ಯಾಂಪಲ್ ಪಡೆಯಲಾಗಿತ್ತು.

ದ.ಕ ಕೋವಿಡ್ ರೌಂಡಪ್

ಒಟ್ಟು ಪ್ರಕರಣ- 34

ಇತರ ಜಿಲ್ಲೆ, ರಾಜ್ಯದ್ದು- 6

ದ.ಕ. ಮಾತ್ರ-28

ಗುಣಮುಖ -16

ಸಾವು-5

ಆಸ್ಪತ್ರೆಯಲ್ಲಿರುವವರು-13

17 ಮಂದಿಯದು ನೆಗೆಟಿವ್

ಉಡುಪಿ: ಜಿಲ್ಲಾಡಳಿತ ಗುರುವಾರ ಸ್ವೀಕರಿಸಿದ 17 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 6, ಇಲ್‌ನೆಸ್ 8, ಕೋವಿಡ್-19 ಸಂಪರ್ಕ 2, ಹಾಟ್‌ಸ್ಪಾಟ್ ಜಿಲ್ಲೆಯಿಂದ ಬಂದ 77 ಸೇರಿದಂತೆ ಒಟ್ಟು 94 ಮಂದಿಯ ಮಾದರಿಯನ್ನು ಗುರುವಾರ ಸಂಗ್ರಹಿಸಲಾಗಿದೆ. 12 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 139 ಮಂದಿಯ ವರದಿ ಬರಲು ಬಾಕಿ ಇದೆ. ಗುರುವಾರ 59 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 11 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ 10 ಮಂದಿಗೆ ಸೋಂಕು

ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14ಕ್ಕೇರಿದೆ.

ಮೇ 4ರಂದು ಮಹಾರಾಷ್ಟ್ರದಿಂದ ಬಂದ ಪೈವಳಿಕೆ ನಿವಾಸಿ 35 ವರ್ಷದ ಮಹಿಳೆಗೆ, ಇವರನ್ನು ತಲಪಾಡಿಯಿಂದ ಕಾರಿನಲ್ಲಿ ಕರೆದುಕೊಂಡು ಬಂದ 50 ವರ್ಷದ ಚಾಲಕನಿಗೆ ಹಾಗೂ ಚಾಲಕನ 11 ಮತ್ತು 8 ವರ್ಷದ ಮಕ್ಕಳಿಗೆ ರೋಗವಿರುವುದು ಪತ್ತೆಯಾಗಿದೆ.

ಜಿಲ್ಲಾಸ್ಪತ್ರೆ ಮತ್ತು ಕಾಸರಗೋಡು ಜನರಲ್ ಆಸ್ಪತ್ರೆಯ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕಾಸರಗೋಡು ನಗರಸಭೆ ವ್ಯಾಪ್ತಿಯ 65 ವರ್ಷ ಪ್ರಾಯದ ವ್ಯಕ್ತಿಗೂ ರೋಗ ಬಾಧಿಸಿದೆ.

ಮಹಾರಾಷ್ಟ್ರದಿಂದ ಬಂದ ಕುಂಬಳೆಯ 58, 31 ವರ್ಷದ ಇಬ್ಬರಿಗೆ, ಬೆಂಗಳೂರಿನಿಂದ ಆಗಮಿಸಿದ 26 ವರ್ಷದ ಕಳ್ಳಾರು ಪೂಡಂಕಲ್ಲಿನ ಯುವಕನಿಗೆ ಸೋಂಕು ದೃಢಗೊಂಡಿದೆ. ಗುರುವಾರ ಕೇರಳದಲ್ಲಿ 26 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net