

ಚಿಕ್ಕಬಳ್ಳಾಪುರ: ಸರ್ಕಾರದ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕರೊನಾ ಲಸಿಕೆ ಹಾಕುವ ಅಭಿಯಾನವು ಸೋಮವಾರ ಯಶಸ್ವಿಯಾಗಿ ನಡೆಯಿತು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕೈಗೊಂಡಿದ್ದ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ ನೀಡಿದರು.
ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 65,648 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಜ.3 ರಂದು ಒಂದೇ ದಿನ 7,100 ಮಂದಿಗೆ ಲಸಿಕೆ ಹಾಕುವ ಯೋಜನೆ ರೂಪಿಸಲಾಗಿತ್ತು. ಇದಕ್ಕೆ 65 ಶಾಲಾ ಕಾಲೇಜುಗಳಲ್ಲಿ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ಎಲ್ಲೆಡೆ ಉತ್ತಮ ಸಾಧನೆ ತೋರಲಾಗಿದೆ.
ಲಸಿಕಾ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತೆಯರು, ಶಿಕ್ಷಕರು ಮೇಲ್ತುವಾರಿಯಲ್ಲಿ ಲಸಿಕೆ ಹಾಕಲಾಯಿತು. ಇದಕ್ಕೆ ಮೊದಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದು, ಹೆಸರು ನೋಂದಣಿ ಮತ್ತು ಲಸಿಕೆ ಚುಚ್ಚಿಸಿಕೊಳ್ಳುವಿಕೆ, ಆರೋಗ್ಯದಲ್ಲಿ ಏರುಪೇರಾಗದಿರುವುದು ಖಾತ್ರಿಪಡಿಸಲು ನಿಗಾ ಸೇರಿ ಹಲವು ಪ್ರಕ್ರಿಯೆಗಳು ಸರಾಗವಾಗಿ ನಡೆಯಿತು. ಇದೇ ಮೊದಲ ಬಾರಿಗೆ ಬಹುತೇಕ ವಿದ್ಯಾರ್ಥಿಗಳು ಆತ್ಮ ವಿಶ್ವಾಸದಲ್ಲಿ ಲಸಿಕೆ ಹಾಕಿಸಿಕೊಂಡು ಸಂತಸವನ್ನು ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪರಿಹಾರ ಕ್ರಮ ಚುರುಕು: ಕರೊನಾ ಹೊಸ ತಳಿಯ ಆತಂಕದ ಹಿನ್ನೆಲೆಯಲ್ಲಿ ಪರಿಹಾರ ಕ್ರಮ ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದು ಡಿಸಿ ಆರ್.ಲತಾ ತಿಳಿಸಿದ್ದಾರೆ. ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸೋಂಕಿನ ನಿಯಂತ್ರಣಕ್ಕೆ ಹಿರಿಯರ ಜತೆಗೆ ಮಕ್ಕಳಿಗೂ ಲಸಿಕೆ ಹಾಕುವುದು ತುಂಬಾ ಅತ್ಯಗತ್ಯವಿದೆ. ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಲಸಿಕೆಯಲ್ಲಿ ಶೇ.100 ರಷ್ಟು ಮತ್ತು ಎರಡನೇ ಡೋಸ್ ಲಸಿಕೆಯಲ್ಲಿ ಶೇ.81 ರಷ್ಟು ಸಾಧನೆ ತೋರಲಾಗಿದೆ. ಇದೀಗ 15 ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕಲಾಗುತ್ತಿದೆ. ಅಭಿಯಾನದ ಪೂರ್ಣ ಗುರಿ ಸಾಧನೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದರು.
ಒಮಿಕ್ರಾನ್ ಆತಂಕ ವ್ಯಾಪಕವಾಗಿ ಕಾಡುತ್ತಿದೆ. ಇದೇ ವೇಳೆ ಚಿಕ್ಕಬಳ್ಳಾಪುರಕ್ಕೆ ಸಮೀಪದಲ್ಲಿರುವ ಬೆಂಗಳೂರಿಗೆ ಜಿಲ್ಲೆಯಿಂದ ಸಾಕಷ್ಟು ಜನ ಈ ಭಾಗದಿಂದ ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಆದ್ದರಿಂದ ಸೋಂಕಿನ ನಿಯಂತ್ರಣಕ್ಕೆ ಜನರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಗೆ ಹೊರ ಪ್ರದೇಶಗಳಿಂದ ಬರುವ ಎಲ್ಲರಿಗೂ ಕರೊನಾ ಪರೀಕ್ಷೆ ಮಾಡಿಸಲಾಗುತ್ತಿದೆ. ಇದರ ಪ್ರಮಾಣವು ಕಳೆದ 15 ದಿನಗಳಿಗೆ ಹೋಲಿಕೆ ಮಾಡಿದ ಹೆಚ್ಚಾಗಿದ್ದು, ಸರಾಸರಿ 2,800 ಮಾದರಿಗಳ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ ಕಳೆದ ಎರಡ್ಮೂರು ದಿನಗಳಿಂದಲೂ ನಿರಂತರವಾಗಿ ಕರೊನಾ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಯ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಸ್ತುತ 12 ಕರೊನಾ ಸಕ್ರಿಯ ಪ್ರಕರಣಗಳಿದ್ದು, ಕಳೆದ ಮೂರ್ನಾಲ್ಕು ನಾಲ್ಕು ದಿನಗಳಿಂದಲೂ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಇಲ್ಲಿಯವರೆಗೂ ಒಮಿಕ್ರಾನ್ ಪ್ರಕರಣ ವರದಿಯಾಗಿಲ್ಲ. ಇದರಿಂದ ಸಾರ್ವಜನಿಕರು ಯಾವುದೇ ಹೆಚ್ಚಿನ ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ, ಪ್ರತಿಯೊಬ್ಬರು ಮಾರ್ಗಸೂಚಿ ನಿಯಮ ಪಾಲಿಸಬೇಕು ಎಂದರು. ಜಿಪಂ ಸಿಇಒ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ.ಆರ್.ಕಬಾಡೆ ಮತ್ತಿತರರು ಇದ್ದರು.