ಲಸಿಕೆ ನೀಡುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ, ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ

11-klr-1-1
Published on

ಕೋಲಾರ: ಕರೊನಾ ಲಸಿಕೆ ನೀಡುವ ವಿಚಾರದಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರಿಗೆ ಸ್ಪಷ್ಟತೆಯಿಲ್ಲ, ಪ್ರಚಾರಕ್ಕೆ ದಿನಕ್ಕೊಂದು ರೀತಿಯ ಹೇಳಿಕೆ ನೀಡುತ್ತಿದ್ದು, ಗಂಭೀರತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಟೀಕಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗ ಜಿಲ್ಲಾ ಕಾಂಗ್ರೆಸ್‌ನಿಂದ ಕರೊನಾ ಸೋಂಕಿತರಿಗಾಗಿ ನಾಲ್ಕು ಆಂಬುಲೆನ್ಸ್ ಸೇವೆೆಗೆ ಮಂಗಳವಾರ ಹಸಿರು ನಿಶಾನೆ ತೋರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

45 ವರ್ಷ ಮೇಲ್ಪಟ್ಟವರಿಗೆ ಕರೊನಾ ಲಸಿಕೆ ವಿತರಣೆ ಆರಂಭಿಸಿ ಪ್ರಥಮ ಡೋಸ್ 37 ಲಕ್ಷ ಜನರಿಗೆ ನೀಡಿದರೆ, 2ನೇ ಡೋಸ್ 17-18 ಲಕ್ಷ ಮಂದಿಗೆ ನೀಡಿ ಉಳಿದವರಿಗೆ ಈಗ ನೀಡಲಾರಂಭಿಸಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಾಗಿ ಪ್ರಚಾರ ಪಡೆದು ಈಗ 15 ದಿನ ನೀಡಲಾಗದು ಎಂದು ಸುಧಾಕರ್ ಹೇಳುತ್ತಾರೆ. ಸಚಿವರಿಗೆ ಯಾವುದರಲ್ಲೂ ಸ್ಪಷ್ಟತೆ, ಜವಾಬ್ದಾರಿ ಇಲ್ಲ, ಯಾವ ಸಚಿವರಿಗೂ ಜವಾಬ್ದಾರಿಯಿಲ್ಲ ಎಂದು ಟೀಕಿಸಿದರು.

ಕಾಳಸಂತೆ ಮಾರಾಟ: ರೆಮ್‌ಡೆಸಿವಿರ್ ಅನ್ನು ಸರ್ಕಾರ ನೇರವಾಗಿ ಕಂಪನಿಗಳಿಂದ ಖರೀದಿಸಿ ಹಂಚುತ್ತಿದ್ದರೂ ಅವಶ್ಯವಿರುವ ಸೋಂಕಿತರಿಗೆ ಸಿಗುತ್ತಿಲ್ಲ. ಬ್ಲಾಕ್ ಮಾರ್ಕೆಟ್‌ನಲ್ಲಿ 35,000 ರೂ.ವರೆಗೆ ಮಾರಾಟವಾಗಲು ರಾಜ್ಯ ಸರ್ಕಾರವೇ ಕಾರಣ. ಸಚಿವ ಸುಧಾಕರ್ ಚಿಕ್ಕಬಳ್ಳಾಪುರಕ್ಕೆ 4,500 ರೆಮ್‌ಡೆಸಿವಿರ್ ನೀಡಿ ಬೆಂಗಳೂರು ನಗರಕ್ಕೆ 1,500 ಹಂಚಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಕೊಡಲಿ, ಬೇರೆ ಜಿಲ್ಲೆಯ ಸೋಂಕಿತರ ಬಗ್ಗೆಯೂ ಗಮನ ಹರಿಸಬೇಕಲ್ಲವೇ ಎಂದರು.

ಸಾವಿನಲ್ಲಿ ಸುಳ್ಳು ಲೆಕ್ಕ: ಆಕ್ಸಿಜನ್, ಐಸಿಯು, ವೆಂಟಿಲೇಟರ್ ಇಲ್ಲದೆ ಸೊಂಕಿತರು ಆಸ್ಪತ್ರೆ, ಮನೆಯಲ್ಲೇ ಸಾಯುತ್ತಿದ್ದಾರೆ. ಎಲ್ಲವನ್ನೂ ಲೆಕ್ಕ ಹಾಕಿದರೆ ಸಾವಿನ ಸಂಖ್ಯೆ ಮೂರ್ನಾಲ್ಕು ಪಟ್ಟು ಜಾಸ್ತಿಯಿದೆ. ಸರ್ಕಾರ ಸಾವಿನಲ್ಲೂ ಸುಳ್ಳು ಲೆಕ್ಕ ಹೇಳುತ್ತಿದೆ ಎಂದು ಆಪಾದಿಸಿದರು.

ನಿಯಂತ್ರಣದಲ್ಲೂ ವಿಫಲ: ಕರೊನಾ 2ನೇ ಅಲೆಯ ತೀವ್ರತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿತ್ತು. ನೆರೆ ರಾಜ್ಯಗಳಲ್ಲಿ 2ನೇ ಅಲೆ ಪ್ರಾರಂಭವಾಗಿದ್ದನ್ನು ನೋಡಿ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೆ ಅನಾಹುತಕ್ಕೆ ಕಾರಣವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ಹೊಣೆ ಹೊರಬೇಕು ಎಂದರು.

ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕೋವಿಡ್ ನಿಯಂತ್ರಣದಲ್ಲಿ ಪ್ರಧಾನಿ ಮೋದಿ ವಿಫಲರಾಗಿರುವುದರಿಂದ ಜನತೆಗೆ ಕಾಂಗ್ರೆಸ್ ಸ್ಪಂದಿಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸೂಚಿಸಿದ್ದಾರೆ. ಕೆಪಿಸಿಸಿ ಹಿರಿಯ ನಾಯಕರು ಸಭೆ ಮಾಡಿ ಆಂಬುಲೆನ್ಸ್, ಔಷಧ, ಸೇವೆ ಒದಗಿಸಲು ಸಲಹೆ ನೀಡಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕೋಲಾರ 2, ಬಂಗಾರಪೇಟೆ 1, ಕೆಜಿಎಫ್ 1 ಸೇರಿ 4 ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಶ್ರೀನಿವಾಸಪುರ ಮತ್ತು ಮುಳಬಾಗಿಲಿಗೆ ಕೆಎಚ್ ಜತೆ ಚರ್ಚಿಸಿ ವಾಹನ ವ್ಯವಸ್ಥೆ ಮಾಡುತ್ತೇವೆ. ಮಾಲೂರಿಗೆ ನಂಜೇಗೌಡ, ಕೆಜಿಎಫ್‌ನಲ್ಲಿ ರೂಪಕಲಾ ಉಸ್ತುವಾರಿ ವಹಿಸಿ ಕರೊನಾ ರೋಗಿಗಳಿಗೆ ತಮ್ಮಿಂದಾದ ಸೌಲಭ್ಯ ಕಲ್ಪಿಸಲಿದ್ದಾರೆ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್, ಜಿಲ್ಲಾ ಕಾಂಗ್ರೆಸ್ ಕಿಸಾನ್ ಖೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫ್ರಾನ್ಸಿಜ್ ಜೇಕಬ್, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಎಸ್.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಸ್ಸಿ ಘಟಕದ ಪದಾಧಿಕಾರಿ ಕುಮಾರ್ ಇದ್ದರು.

ಯಾರಿಗೂ ಧೈರ್ಯ ಇಲ್ಲ: ಪ್ರಧಾನಿ ಮೋದಿ ಆದಿಯಾಗಿ ಯಾರಿಗೂ ಅಧಿಕಾರ ನಡೆಸುವ ಚಾಣಾಕ್ಷತನ, ಧೈರ್ಯ ಇಲ್ಲ, ಅಧಿಕಾರ ಬೇಕು, ಅಧಿಕಾರ ನಡೆಸಲು ಬರುವುದಿಲ್ಲ, ಪ್ರತಿಪಕ್ಷದಲ್ಲಿರಲು ಲಾಯಕ್. ಬಿಜೆಪಿ ಅಪಪ್ರಚಾರವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತದೆ. ಒಬ್ಬರ ಮೇಲೊಬ್ಬರು ಚಾಡಿ, ಸುಳ್ಳು ಹೇಳಿಕೊಂಡು ಬೆಳೆದ ಪಕ್ಷ. ಮುಂದೆ ಒಂದೇ ದಿನ ಕುಸಿದು ಬೀಳುತ್ತದೆ ಎಂದು ರಾಮಲಿಂಗಾರೆಡ್ಡಿ ಛೇಡಿಸಿದರು.

ತಮಿಳುನಾಡು ಸರ್ಕಾರ ಲಾಕ್‌ಡೌನ್ ಹೇರಿ ಪ್ರತಿ ಕುಟುಂಬಕ್ಕೆ 4,000 ರೂ, ಕೇರಳ ಸರ್ಕಾರ 5000 ರೂ. ಮೌಲ್ಯದ ಪಡಿತರ ಕಿಟ್ ನೀಡಿದೆ. ರಾಜ್ಯದಲ್ಲಿ ಲಾಕ್‌ಡೌನ್ ವೇಳೆ ಮನೆಯಿಂದ ಆಚೆ ಬರಬಾರದೆಂದರೆ ಜೀವನ ಮಾಡೋದು ಹೇಗೆ? 2 ಕೆಜಿ ಅಕ್ಕಿ, 3 ಕೆಜಿ ರಾಗಿ ನೀಡಿ ಊಟ ಮಾಡಿ ಎಂದರೆ? ಸಚಿವರು, ಶಾಸಕರಿಗೆ ಇಷ್ಟೇ ಕೊಡಿ, ಯಾವ ರೀತಿ ಜೀವನ ಮಾಡ್ತಾರೆ ನೋಡೋಣ. ಮನೆಯಲ್ಲಿ ಕುಳಿತು ಊಟ ಮಾಡಲು ಅನುಕೂಲ ಮಾಡಿಕೊಟ್ಟರೆ ಈ ಲಾಕ್‌ಡೌನ್ ಒಪ್ಪಬಹುದು. ಇಲ್ಲವಾದರೆ ಯಶಸ್ವಿ ಅಲ್ಲ. ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net