ಇಂದಿರಾ ಕ್ಯಾಂಟೀನ್‌ಗೂ ಕರೊನಾ ಬಿಸಿ

17-klr-6 Alternative
Published on

ಕೋಲಾರ: ಕರೊನಾ ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮ ಜಿಲ್ಲೆಯ ಬಡವರು, ಮಧ್ಯಮ ವರ್ಗ ಹಾಗೂ ದಿನಗೂಲಿ ಕಾರ್ಮಿಕರ ಬದುಕಿನಲ್ಲಿ ಆಲ್ಲೋಲ ಕಲ್ಲೋಲ ಉಂಟು ಮಾಡಿದೆ.

ಕರೊನಾ ಭೀತಿಗೆ ಮೂರು ದಿನಗಳಿಂದ ವ್ಯಾಪಾರ-ವಹಿವಾಟು ಶೇ.50 ಕುಸಿದಿದೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳು, ಮಾಂಸದಂಗಡಿ, ಹೋಟೆಲ್, ಬೇಕರಿ, ಹಣ್ಣಿನಂಗಡಿ, ಟೀ ಸ್ಟಾಲ್‌ಗಳು ಬಿಕೋ ಎನ್ನುತ್ತಿವೆ. ವ್ಯಾಪಾರವಿಲ್ಲದೆ ಮಳಿಗೆ ಬಾಡಿಗೆ ಕಟ್ಟುವುದು ಹೇಗೆಂಬ ಚಿಂತೆಯಲ್ಲಿ ಮಾಲೀಕರಿದ್ದಾರೆ.

ಚಲನಚಿತ್ರ ಮಂದಿರ, ಡಾಬಾ, ಬಾರ್, ಸಂತೆ, ಜಾತ್ರೆ, ದೊಡ್ಡ ಮಟ್ಟದ ಸಭೆ-ಸಮಾರಂಭಕ್ಕೆ ಬ್ರೇಕ್ ಹಾಕಲಾಗಿದೆ. ಜನರಿಗೆ ಗೃಹ ಬಂಧನ ವಿಧಿಸಿರುವುದರಿಂದ ದೈನಂದಿನ ಜೀವನದ ಮೇಲೆ ಬರೆ ಎಳೆದಂತಾಗಿದೆ.

ಇಂದಿರಾ ಕ್ಯಾಂಟೀನ್‌ಗೂ ತಟ್ಟಿದ ಬಿಸಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ತೆರೆದಿರುವ ಇಂದಿರಾ ಕ್ಯಾಂಟೀನ್ ಭಣಗುಡುತ್ತಿದೆ. ತಿಂಡಿ-ಊಟ ಸವಿಯಲು ದಿನಕ್ಕೆ ಕನಿಷ್ಠ 500ರಿಂದ 600 ಜನ ಕ್ಯಾಂಟೀನ್‌ಗೆ ಬರುತ್ತಿದ್ದರು. ಮೂರು ದಿನಗಳಿಂದ 200ರಿಂದ 250 ಮಂದಿ ಕಡಿಮೆಯಾಗಿದ್ದಾರೆ.

ನಗರಸಭೆ ಆದೇಶಕ್ಕೆ ಕಳವಳ: ಡಿಸಿ ಆದೇಶದಂತೆ ನಗರಸಭೆ ನಗರದ ಎಲ್ಲ ಚಲನಚಿತ್ರ ಮಂದಿರ, ಹೋಟೆಲ್, ಹಣ್ಣಿನಂಗಡಿ, ಮಾಂಸದಂಗಡಿ, ಬಾರ್, ಬೇಕರಿ, ಬೀದಿಬದಿ ಅಂಗಡಿ ಹಾಗೂ ಸಂತೆಯನ್ನು ಬಂದ್ ಮಾಡಲು ಹೊರಡಿಸಿರುವ ಆದೇಶಕ್ಕೆ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕರೊನಾ ಸೋಂಕಿತರಿಲ್ಲವೆಂದು ಆರೋಗ್ಯ ಇಲಾಖೆ ದೃಢಪಡಿಸಿದೆ. ಜನರ ಸುರಕ್ಷತೆಗೆ ಎಲ್ಲ ಕ್ರಮ ಕೈಗೊಂಡಿರುವಾಗ ವ್ಯಾಪಾರ ಬಂದ್ ಮಾಡಿಸಿದಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುವುದರಿಂದ ಆದೇಶ ಹಿಂದಕ್ಕೆ ಪಡೆಯಬೇಕೆಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ನಗರದಲ್ಲಿ ಸ್ವಚ್ಛತೆ ಕಾಪಾಡಲು, ಕರೊನಾ ಹರಡದಂತೆ ಜಾಗೃತಿ ವಹಿಸಲು ಸಿದ್ಧರಿದ್ದೇವೆ, ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ, ಆದರೆ ಒಂದು ವಾರ ವ್ಯಾಪಾರ ಬಂದ್ ಮಾಡುವುದು ಕಷ್ಟವಾಗಬಹುದಾದ್ದರಿಂದ ಆದೇಶ ಮರುಪರಿಶೀಲಿಸಬೇಕೆಂದು ಮನವಿ ಮಾಡಿದ್ದಾರೆ.

ಇಂದಿರಾ ಕ್ಯಾಂಟಿನ್ ಚೆನ್ನಾಗಿಯೇ ನಡೆಯುತ್ತಿತ್ತು. ಕರೊನಾ ಭೀತಿ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ಗ್ರಾಹಕರು ಕಡಿಮೆಯಾಗಿದ್ದಾರೆ. ಕ್ಯಾಂಟಿನ್ ಬಂದ್ ಮಾಡುವಂತೆ ನಗರಸಭೆಯಿಂದ ನೋಟಿಸ್ ಬಂದಿಲ್ಲ. ಅನಿವಾರ್ಯವಾದಲ್ಲಿ ಜಿಲ್ಲಾಡಳಿತದ ಆದೇಶ ಪಾಲಿಸಲೇಬೇಕಾಗುತ್ತದೆ. ಶ್ರೀಕಾಂತ್, ಅಸಿಸ್ಟೆಂಟ್ ಮ್ಯಾನೇಜರ್, ಇಂದಿರಾ ಕ್ಯಾಂಟೀನ್, ಕೋಲಾರ ನಗರಸಭೆ ಜನತೆಯಲ್ಲಿ ಆತಂಕ ಮೂಡಿಸುವ ಬದಲು ಕಾಯಿಲೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದಾರೆ. ಈಗ ವ್ಯಾಪಾರ ಬಂದ್ ಮಾಡಿದರೆ ಇನ್ನಷ್ಟು ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಜಿಲ್ಲಾಧಿಕಾರಿ ನಗರದ ವ್ಯಾಪಾರಸ್ಥರ ಸಭೆ ಕರೆದು ಅಭಿಪ್ರಾಯ ಸ್ವೀಕರಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಹರೀಶ್ ಹೊಳ್ಳ, ಮಾಲೀಕರು, ಫಲಾಮೃತ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net