ಕೋಲಾರ ಜಿಲ್ಲೆಯಲ್ಲಿ 49 ಹೊಸ ಪ್ರಕರಣ, ಒಂದೇ ದಿನ 135 ಮಂದಿ ಗುಣಮುಖ

01 MANDIKAL -1
Published on

ಕೋಲಾರ: ಜಿಲ್ಲೆಯಲ್ಲಿ ಭಾನುವಾರ 49 ಕರೊನಾ ಪ್ರಕರಣಗಳು ದೃಢಪಟ್ಟಿದ್ದು, ಒಂದೇ ದಿನ 135 ಮಂದಿ ಗುಣವಾಗಿ ಮನೆಗೆ ತೆರಳಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 683ಕ್ಕೆ ಇಳಿದಿದೆ.

ಕೋಲಾರದಲ್ಲಿ 18 ಮಂದಿಗೆ ಸೋಂಕು ದೃಢಪಟ್ಟರೆ ಮಾಲೂರಿನಲ್ಲಿ 19, ಬಂಗಾರಪೇಟೆ 3, ಕೆಜಿಎಫ್ 1, ಮಾಲೂರು ಮತ್ತು ಶ್ರೀನಿವಾಸಪುರದಲ್ಲಿ ತಲಾ 4 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1409ಕ್ಕೆ ಏರಿಕೆಯಾಗಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿರುವ 294 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 196 ಜನರ ಮೇಲೆ ನಿಗಾ ಇಡಲಾಗಿದೆ.

ಶ್ರೀನಿವಾಸಪುರದಲ್ಲಿ ವಿಷಮ ಶೀತಜ್ವರದಿಂದ 78 ವರ್ಷದ ವೃದ್ಧೆ, 31, 42 ಹಾಗೂ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಮಾಲೂರಿನಲ್ಲಿ ಪ್ರಥಮ ಸಂಪರ್ಕದಿಂದ 8 ಮಂದಿಗೆ ಸೋಂಕು ಹರಡಿದರೆ, ವಿಷಮ ಶೀತಜ್ವರದಿಂದ 5 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 90 ವರ್ಷದ ವೃದ್ಧರೊಬ್ಬರು ವಿಷಮ ಶೀತಜ್ವರ ಮತ್ತು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿವಿಧ ಕಾರಣಗಳಿಂದ 5 ಜನರಿಗೆ ಸೋಂಕು ಹರಡಿದೆ.

ಕೋಲಾರ ತಾಲೂಕಿನಲ್ಲಿ 48 ವರ್ಷದ ಪೊಲೀಸರೊಬ್ಬರಿಗೆ ಸೋಂಕು ಹರಡಿದೆ. 22 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ವಿಷಮ ಶೀತಜ್ವರದಿಂದ 8 ಮಂದಿ ಬಳಲುತ್ತಿದ್ದಾರೆ. ಇತರ ಕಾರಣಗಳಿಂದ 8 ಮಂದಿ ಬಳಲುತ್ತಿದ್ದಾರೆ. ಬಂಗಾರಪೇಟೆಯಲ್ಲಿ ಉಸಿರಾಟ ಸಮಸ್ಯೆಯಿಂದ 31 ವರ್ಷದ ಪುರುಷ ಬಳಲುತ್ತಿದ್ದು, ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ಷಯ ಮತ್ತು ಶೀತಜ್ವರಕ್ಕೆ ತುತ್ತಾಗಿರುವ 65 ವರ್ಷದ ವೃದ್ಧೆಗೆ ಸೋಂಕು ಕಾಣಿಸಿಕೊಂಡಿದೆ. ಕೆಜಿಎಫ್‌ನಲ್ಲಿ 33 ವರ್ಷದ ಪುರುಷ ಶೀತಜ್ವರದಿಂದ ಬಳಲುತ್ತಿದ್ದಾನೆ.

135 ಮಂದಿ ಬಿಡುಗಡೆ: ಜಿಲ್ಲೆಯಲ್ಲಿ ಇದೇ ಪ್ರಥಮ ಎಂಬಂತೆ ಸೋಂಕಿತರಲ್ಲಿ ಕೋಲಾರದಲ್ಲಿ 53 ಮಂದಿ, ಮಾಲೂರಿನಲ್ಲಿ 24, ಬಂಗಾರಪೇಟೆಯಲ್ಲಿ 15, ಕೆಜಿಎಫ್‌ನಲ್ಲಿ 20, ಮುಳಬಾಗಿಲು 10 ಹಾಗೂ ಶ್ರೀನಿವಾಸಪುರದ 13 ಮಂದಿ ಗುಣವಾಗಿದ್ದು, ಒಂದೇ ದಿನ 135 ಮಂದಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 1409 ಸೋಂಕಿತರ ಪೈಕಿ 701 ಮಂದಿ ಗುಣಹೊಂದಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 683ಕ್ಕೆ ಇಳಿದಿದೆ. ಕೋಲಾರದಲ್ಲಿ 601 ಸೋಂಕಿತರಲ್ಲಿ ಈವರೆಗೆ 308 ಮಂದಿ ಗುಣಹೊಂದಿದ್ದು, 284 ಸಕ್ರಿಯ ಪ್ರಕರಣಗಳಿವೆ. 9 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ.

ಮಾಲೂರಿನಲ್ಲಿ 191 ಸೋಂಕಿತರಲ್ಲಿ 70 ಮಂದಿ ಗುಣ ಹೊಂದಿ 120 ಸಕ್ರಿಯ ಪ್ರಕರಣವಿದೆ. ಒಬ್ಬರು ಮೃತಪಟ್ಟಿದ್ದಾರೆ. ಬಂಗಾರಪೇಟೆಯಲ್ಲಿ 185 ಸೋಂಕಿತರಲ್ಲಿ 75 ಮಂದಿ ಗುಣ ಹೊಂದಿ 106 ಸಕ್ರಿಯ ಪ್ರಕರಣಗಳಿವೆ. 4 ಮಂದಿ ಸಾವನ್ನಪ್ಪಿದ್ದಾರೆ.

ಕೆಜಿಎಫ್‌ನಲ್ಲಿ 143 ಸೋಂಕಿತರಲ್ಲಿ 71 ಮಂದಿ ಗುಣಹೊಂದಿ 69 ಸಕ್ರಿಯ ಪ್ರಕರಣಗಳಿವೆ. 3 ಮಂದಿ ಮೃತಪಟ್ಟಿದ್ದಾರೆ. ಮುಳಬಾಗಿಲಿನಲ್ಲಿ 170 ಪ್ರಕರಣಗಳಲ್ಲಿ 124 ಮಂದಿ ಗುಣಹೊಂದಿ 43 ಸಕ್ರಿಯ ಪ್ರಕರಣಗಳಿವೆ. 3 ಮಂದಿ ಮೃತಪಟ್ಟಿದ್ದಾರೆ. ಶ್ರೀನಿವಾಸಪುರದಲ್ಲಿ 119 ಸೋಂಕಿತರಲ್ಲಿ 53 ಮಂದಿ ಗುಣಹೊಂದಿ 61 ಸಕ್ರಿಯ ಪ್ರಕರಣವಿದೆ. 5 ಮಂದಿ ಮೃತಪಟ್ಟಿದ್ದಾರೆ.

ಇದರೊಂದಿಗೆ ದೃಢಪಟ್ಟ ಪ್ರಕರಣಗಳಲ್ಲಿ ಶೇ.50 ಮಂದಿ ಗುಣವಾಗುವುದರೊಂದಿಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಿಟ್ಟಿಸಿರು ಬಿಡುವಂತಾಗಿದೆ. 24 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಡೀ ದಿನ ವಹಿವಾಟಿಗೆ ಅವಕಾಶ ನೀಡಿ: ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಗ್ರಾಮದಲ್ಲಿ ಈವರೆಗೆ 11 ಮಂದಿಗೆ ಸೋಂಕು ದೃಢಪಟಿದೆ. ಕಳೆದೊಂದು ವಾರದ ಹಿಂದೆಯೇ ಎಲ್ಲರೂ ಗುಣವಾಗಿದ್ದಾರೆಂದು ಗುಟ್ಟಹಳ್ಳಿ ವೈದ್ಯಾಧಿಕಾರಿ ಡಾ. ಯಾಮಿನಿ ತಿಳಿಸಿದ್ದಾರೆ. ಗ್ರಾಮದಲ್ಲಿ ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಪ್ರತಿದಿನ ಮಧ್ಯಾಹ್ನ 2 ಗಂಟೆಯೊಳಗೆ ಅಂಗಡಿ ಮುಂಗಟ್ಟು ಮುಚ್ಚಲಾಗುತ್ತಿತ್ತು. ಇದೀಗ ಗ್ರಾಮದಲ್ಲಿ ಸೋಂಕಿತರು ಇಲ್ಲದಿರುವುದರಿಂದ ಜಿಲ್ಲೆಯ ಇತರ ಕಡೆ ಅನುವು ಮಾಡಿಕೊಟ್ಟಿರುವಂತೆ ಇಡೀ ದಿನ ವ್ಯಾವಾರ ವಹಿವಾಟಿಗೆ ಅವಕಾಶ ನೀಡಬೇಕೆಂದು ಕೆಲ ಅಂಗಡಿ ಮಾಲೀಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net