

ಕೋಲಾರ: ಜಿಲ್ಲೆಯ ಕೈಗಾರಿಕೆಗಳಿಗೆ ಹೊರಗಿನಿಂದ ಕಾರ್ಮಿಕರನ್ನು ಕರೆ ತರುವ ವಾಹನಗಳಲ್ಲಿ ಕರೊನಾ ನಿಯಮ ಉಲ್ಲಂಘಿಸಲಾಗುತ್ತಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಪಂ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಡಿಎಚ್‌ಒ ಎನ್.ಎನ್ ವಿಜಯಕುಮಾರ್ ಅವರಿಗೆ ಸೂಚಿಸಿತು.
ಜಿಪಂನಲ್ಲಿ ಗುರುವಾರ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರು ಕೈಗಾರಿಕೆಗಳ ಮಾಲೀಕರಿಗೆ ಕೆಲಸಕ್ಕಾಗಿ ಕಾರ್ಮಿಕರು ಬೇಕು. ಆದರೆ ಇವರ ಆರೋಗ್ಯದ ಬಗ್ಗೆ ಕಾಳಜಿಯಿಲ್ಲ. ಕಾರ್ಮಿಕರನ್ನು ಬಸ್ ಇನ್ನಿತರ ವಾಹನಗಳಲ್ಲಿ ಕರೆ ತರುವಾಗ ಮಾರ್ಗಸೂಚಿ ಪಾಲಿಸದೆ ಸೋಂಕು ಹರಡಲು ದಾರಿ ಮಾಡಿಕೊಡುತ್ತಿದ್ದಾರೆಂದು ದೂರಿದರು.
ವಾಹನಗಳಲ್ಲಿ 25ಕ್ಕಿಂತ ಹೆಚ್ಚು ಕಾರ್ಮಿಕರನ್ನು ಸಾಗಿಸುವಂತಿಲ್ಲ, ಮಾಸ್ಕ್, ಸ್ಯಾನಿಟೈಸರ್ ಬಳಸಬೇಕೆಂಬ ನಿಯಮ ಹೇರಿ ಕೈಗಾರಿಕೆಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಮಾಲೀಕರು ನಿಯಮ ಪಾಲಿಸದಿರುವುದರಿಂದ ಅಂತಹ ಕೈಗಾರಿಕೆಗಳ ಮೇಲೆ ಎಫ್‌ಐಆರ್ ದಾಖಲಿಸಿ ಶಿಕ್ಷೆಗೆ ಒಳಪಡಿಸಿದಲ್ಲಿ ಇತರರಿಗೆ ಪಾಠವಾಗುತ್ತದೆ ಎಂದು ಸಮಿತಿ ಸದಸ್ಯರಾದ ಎಚ್.ವಿ.ಶ್ರೀನಿವಾಸ್ ಮತ್ತು ವಿ.ಎಸ್.ಅರವಿಂದ್ ಕುಮಾರ್ ಒತ್ತಾಯಿಸಿದರು.
ನಿಮಗೆ ನೇರವಾಗಿ ಕ್ರಮ ಕೈಗೊಳ್ಳಲು ಆಗದಿದ್ದರೆ ಆರ್‌ಟಿಒ, ಪೊಲೀಸ್ ಹಾಗೂ ತಹಸೀಲ್ದಾರ್ ನೆರವು ಪಡೆದು ಕ್ರಮಕೈಗೊಳ್ಳುವಂತೆ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಡಿಎಚ್‌ಒಗೆ ಸಲಹೆ ನೀಡಿದರು.
ಹೊರ ರೋಗಿಗಳಿಗೆ ತೊಂದರೆ: ಕರೊನಾದಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ, ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಚಿನ್ನಸ್ವಾಮಿಗೌಡ ಆರೋಪಿಸಿದರು.
ಇತ್ತೀಚೆಗೆ ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ಬಂದಾಗ ಕರೊನಾ ಇರುವುದರಿಂದ ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ನಂತರ ವೈದ್ಯಾಧಿಕಾರಿ ಜತೆ ಮಾತನಾಡಿ ವ್ಯವಸ್ಥೆ ಮಾಡಿಸಲಾಯಿತು. ಹಳ್ಳಿಗಳಿಂದ ಅನೇಕ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ, ಕರೊನಾ ನೆಪದಲ್ಲಿ ಚಿಕಿತ್ಸೆ ನೀಡದೆ ವಾಪಸ್ ಕಳುಹಿಸಿದರೆ ಇವರ ಪಾಡೇನು ಎಂದು ಪ್ರಶ್ನಿಸಿದರು.
ಕೋವಿಡ್ ಟಾಸ್ಕ್ ಫೋರ್ಸ್‌ಗೆ ನಿಯೋಜನೆಗೊಂಡಿರುವ ಆಹಾರ ಇಲಾಖೆಯ ನಿರೀಕ್ಷಕ ನಾಗರಾಜು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಖಾಸಗಿ ಔಷಧ ಅಂಗಡಿಗಳಲ್ಲಿ ಅಕ್ರಮ ನಡೆಯುತ್ತಿರುವ ವಿಷಯ ತಿಳಿಸಿದರೂ ದಾಳಿ ಮಾಡಿ ಪ್ರಕರಣ ದಾಖಲು ಮಾಡುತ್ತಿಲ್ಲ ಎಂದು ಸದಸ್ಯ ಎಚ್.ವಿ.ಶ್ರೀನಿವಾಸ್ ಅಸಹಾಯಕತೆ ವ್ಯಕ್ತಪಡಿಸಿದರು.
ಕರೊನಾಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಮತ್ತು ಖರ್ಚಿನ ಮಾಹಿತಿ ನೀಡುವಂತೆ ಸಭೆಗೆ ಸದಸ್ಯ ಅರವಿಂದ್ ತಿಳಿಸಿದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಪಾಠ-ಪ್ರವಚನದಿಂದ ವಂಚಿತರಾಗದಂತೆ ಇಂಟಲಿಜೆಂಟ್, ಬ್ರಿಲಿಯಂಟ್ ಮತ್ತು ಜಿನಿಯಸ್ ಎಂಬ ಮೂರು ವರ್ಗ ರಚಿಸಿ ಬೋಧನೆ ನೀಡಲು ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು. ಸ್ಥಾಯಿ ಸಮಿತಿ ಸದಸ್ಯ ಕಾರ್ಯದರ್ಶಿ ಸಿಎಂ.ಮುನಿಕೃಷ್ಣಪ್ಪ, ರೂಪಶ್ರೀ ಮಂಜು ಉಪಸ್ಥಿತರಿದ್ದರು.