

ಕೋಲಾರ: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಗುರುವಾರ ಒಬ್ಬ ಮೃತಪಟ್ಟು 32 ಪ್ರಕರಣಗಳು ದೃಢಪಟ್ಟರೆ 100 ಮಂದಿ ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆ.
ಕೋಲಾರ ತಾಲೂಕಿನಲ್ಲಿ ವ್ಯಕ್ತಿಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಕೋಲಾರದಲ್ಲೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿದರೆ, ಒಟ್ಟಾರೆ ಜಿಲ್ಲೆಯಲ್ಲಿ 25 ಮಂದಿ ಬಲಿಯಾದಂತಾಗಿದೆ.
ಕೋಲಾರದಲ್ಲಿ ಪ್ರತಿ ದಿನ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, 20 ಮಂದಿಗೆ ಸೊಂಕು ದೃಢಪಟ್ಟಿದೆ. ಉಳಿದಂತೆ ಮಾಲೂರು 1, ಬಂಗಾರಪೇಟೆ ಮತ್ತು ಮುಳಬಾಗಿಲು ತಲಾ 2, ಶ್ರೀನಿವಾಸಪುರ 3 ಮತ್ತು ಕೆಜಿಎಫ್‌ನಲ್ಲಿ 4 ಮಂದಿಗೆ ಕರೊನಾ ಬಾಧಿಸಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 192 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 128 ಮಂದಿ ಮೇಲೆ ನಿಗಾ ಇಡಲಾಗಿದೆ.
ಒಬ್ಬರಿಂದ 9 ಮಂದಿಗೆ ಸೋಂಕು: ಕೋಲಾರದಲ್ಲಿ ಸೋಂಕಿತನ ಪ್ರಥಮ ಸಂಪರ್ಕದಿಂದ 9 ಮಂದಿಗೆ ಕರೊನಾ ಬಂದಿದೆ. 7 ಸೋಂಕಿತರು ವಿಷಮ ಶೀತಜ್ವರದಿಂದ ಬಳಲುತ್ತಿದ್ದಾರೆ. ಮೂವರು ಸೋಂಕಿತರ ಸಂಪರ್ಕದಿಂದ, ಬೆಂಗಳೂರು ಪ್ರಯಾಣದ ಹಿನ್ನೆಲೆಯಲ್ಲಿ ಒಬ್ಬರಿಗೆ ಸೋಂಕು ಹರಡಿದೆ. ಮಾಲೂರಿನಲ್ಲಿ 24 ವರ್ಷದ ಮಹಿಳೆ, ಶ್ರೀನಿವಾಸಪುರ, ಕೆಜಿಎಫ್‌ನಲ್ಲಿ ವಿಷಮ ಶೀತಜ್ವರದಿಂದ ತಲಾ 3 ಮಂದಿ, ಬಂಗಾರಪೇಟೆಯಲ್ಲಿ ಇಬ್ಬರು ಸೋಂಕಿಗೆ ತುತ್ತಾಗಿದ್ದಾರೆ. ಮುಳಬಾಗಿಲಿನಲ್ಲಿ ಒಬ್ಬರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದೆ.
100 ಮಂದಿ ಗುಣಮುಖ: ಜಿಲ್ಲೆಯಲ್ಲಿ ಒಂದೇ ದಿನ 100 ಮಂದಿ ಗುಣಮುಖರಾಗಿ ಮನೆಗೆ ತೆರಳಿರುವುದು ಹೊಸ ದಾಖಲೆಯಾಗಿದೆ. ಇವರಲ್ಲಿ 50 ಮಂದಿ ಕೋಲಾರ ತಾಲೂಕಿನವರು. ಮಾಲೂರು ಮತ್ತು ಬಂಗಾರಪೇಟೆಯ ತಲಾ 13 ಮಂದಿ, ಕೆಜಿಎಫ್‌ನ 3, ಮುಳಬಾಗಿಲಿನ 12 ಮತ್ತು ಶ್ರೀನಿವಾಸಪುರದ 9 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1289ಕ್ಕೆ ಏರಿಕೆಯಾಗಿದ್ದು, 467 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 797ಕ್ಕೆ ಇಳಿದಿದೆ.
ಸಕ್ರಿಯ ಪ್ರಕರಣ ಎಲ್ಲಿ-ಎಷ್ಟು?: ಕೋಲಾರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 559 ಆಗಿದ್ದು, 220 ಮಂದಿ ಗುಣಹೊಂದಿ 330 ಸಕ್ರಿಯ ಪ್ರಕರಣಗಳಿವೆ. ಮಾಲೂರಿನಲ್ಲಿ 165 ಸೋಂಕಿತರು, 41 ಮಂದಿ ಬಿಡುಗಡೆ, 123 ಸಕ್ರಿಯ ಪ್ರಕರಣ, ಬಂಗಾರಪೇಟೆಯಲ್ಲಿ 167 ಸೋಂಕಿತರು, 56 ಮಂದಿ ಬಿಡುಗಡೆ, 107 ಸಕ್ರಿಯ ಪ್ರಕರಣ, ಕೆಜಿಎಫ್‌ನಲ್ಲಿ 134 ಸೊಂಕಿತರಲ್ಲಿ 43 ಮಂದಿ ಗುಣಹೊಂದಿ 88 ಸಕ್ರಿಯ ಪ್ರಕರಣಗಳು ಇವೆ. ಮುಳಬಾಗಿಲಿನಲ್ಲಿ 153 ಸೋಂಕಿತರಲ್ಲಿ 71 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 79. ಶ್ರೀನಿವಾಸಪುರದಲ್ಲಿ 111 ಸೋಂಕಿತರಲ್ಲಿ 36 ಜನ ಗುಣಹೊಂದಿದ್ದಾರೆ. 70 ಸಕ್ರಿಯ ಪ್ರಕರಣಗಳಿವೆ.
ಸಿಬ್ಬಂದಿಗೆ ಸೋಂಕು: ಕರೊನಾ ಸೋಂಕಿನಿಂದ ಬಾಧಿತರಾಗಿರುವ ಕೋಲಾರ ನಗರಸಭೆ ಪೌರಾಯುಕ್ತರ ಸಂಪರ್ಕದಲ್ಲಿದ್ದ ಇಬ್ಬರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರಲ್ಲಿ ಆತಂಕ ಹೆಚ್ಚಾಗಿದೆ. ಗುರುವಾರ 40ಕ್ಕೂ ಹೆಚ್ಚು ಮಂದಿ ಕರೊನಾ ಪರೀಕ್ಷೆಗೆ ಒಳಗಾಗಿದ್ದು, ವರದಿ ನಿರೀಕ್ಷೆಯಲ್ಲಿದ್ದಾರೆ.