

ಕೋಲಾರ: ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ ನಾಲ್ವರು ಬಲಿಯಾಗಿದ್ದು, ಒಟ್ಟು 40 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 405ಕ್ಕೆ ಏರಿಕೆಯಾಗಿದೆ. ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದ ಸೋಂಕಿತ ವೃದ್ಧ, ಪಟ್ಟಣದ ಸೋಂಕಿತ, ಮಾಲೂರು ತಾಲೂಕಿನ ನೆಲ್ಲಹಳ್ಳಿಯ ಸೋಂಕಿತ ವ್ಯಕ್ತಿ ಬುಧವಾರ ರಾತ್ರಿ ಹಾಗೂ ಕೋಲಾರದ ಒಬ್ಬ ಸೇರಿ ಒಟ್ಟು 4 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ.
ಮಾಲೂರಿನ ಟೇಕಲ್ ಹೋಬಳಿಯ ನೆಲ್ಲಹಳ್ಳಿಯಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದ 35 ವರ್ಷದ ವ್ಯಕ್ತಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಹೋದ ವೇಳೆ ಗಂಟಲು ದ್ರವ ಪರೀಕ್ಷೆಯಿಂದ ಸೋಂಕು ದೃಢಪಟ್ಟಿತ್ತು. ಸೋಂಕಿತ ವ್ಯಕ್ತಿಗೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ 8 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ರಾತ್ರಿ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಮೃತನ ದೇಹವನ್ನು ಗ್ರಾಮದ ಬಳಿ ಆರೋಗ್ಯ ಇಲಾಖೆ ಸೂಚನೆಯಂತೆ ಅಂತ್ಯಸಂಸ್ಕಾರ ಮಾಡಲಾಗಿದೆ.
40 ಸೋಂಕಿತರು: ಕೋಲಾರದಲ್ಲಿ ಪಿಸಿ ಬಡಾವಣೆ, ಕೀಲುಕೋಟೆ 2, ಕುರುಬರಪೇಟೆ 2, ಗಾಂಧಿನಗರ, ಜಯನಗರ, ಹವೇಲಿ ಮೊಹಲ್ಲಾ, ಗಲ್‌ಪೇಟೆ, ಗ್ರಾಮೀಣ ಭಾಗದ ಚಾಕರಸನಹಳ್ಳಿ, ಮತ್ತಿಕುಂಟೆ, ಗಾಜಲದಿನ್ನೆಗಳಲ್ಲಿ ತಲಾ 1 ಸೇರಿ ಒಟ್ಟು 19 ಮಂದಿಗೆ ಕರೊನಾ ದೃಢಪಟ್ಟಿದೆ. ಮಾಲೂರು, ಬಂಗಾರಪೇಟೆಯಲ್ಲಿ ತಲಾ 2, ಕೆಜಿಎಫ್‌ನಲ್ಲಿ 10, ಮುಳಬಾಗಿಲು 6 ಹಾಗೂ ಶ್ರೀನಿವಾಸಪುರದಲ್ಲಿ 1 ಪ್ರಕರಣ ದೃಢಪಟ್ಟಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 241 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 162 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಕೋಲಾರದಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 13 ಮಂದಿಗೆ ಸೋಂಕು ಹರಡಿದೆ. 59 ವರ್ಷದ ಆರೋಗ್ಯ ಕಾರ್ಯಕರ್ತ, ತೀವ್ರ ಉಸಿರಾಟದ ಸಮಸ್ಯೆಯಿಂದ 24 ವರ್ಷದ ಯುವತಿ, ಪಿ-47676 ಸಂಪರ್ಕದಿಂದ 1ವರ್ಷದ ಬಾಲಕನಿಗೆ ಸೋಂಕು ಅಂಟಿದೆ. ಕಂಟೇನ್ಮೆಂಟ್ ಪ್ರದೇಶದಲ್ಲಿದ್ದ 80 ವರ್ಷದ ವೃದ್ಧನಿಗೆ ಸೋಂಕು ಹರಡಿದೆ. 45ರ ಪುರುಷ, 53ರ ಮಹಿಳೆಗೆ ಸೋಂಕು ಯಾವ ಮೂಲದಿಂದ ಬಂತು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬಂಗಾರಪೇಟೆಯ 30 ವರ್ಷದ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟರೆ 28 ವರ್ಷದ ಪುರುಷನಿಗೆ ದೃಢಪಟ್ಟ ಸೋಂಕಿನ ಮೂಲ ತನಿಖೆಯಲ್ಲಿದೆ. ಮಾಲೂರಿನಲ್ಲಿ 69 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತ, ಪಿ-42740 ದ್ವಿತೀಯ ಸಂಪರ್ಕದಿಂದ 63 ವರ್ಷದ ವೃದ್ಧೆ, ಮುಳಬಾಗಿಲಿನಲ್ಲಿ 32 ವರ್ಷದ ಪುರುಷ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ವಕ್ಕರಿಸಿದೆ. ಕಂಟೇನ್ಮೆಂಟ್ ಪ್ರದೇಶದ 5 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಕೆಜಿಎಫ್‌ನಲ್ಲಿ ಪಿ-18096 ವ್ಯಕ್ತಿಯಿಂದ ಮೂವರು ಮಹಿಳೆ ಮತ್ತು ಒಬ್ಬ ಪುರುಷನಿಗೆ ಸೋಂಕು ಹರಡಿದೆ. 49 ವರ್ಷದ ಪುರುಷನಿಗೆ ಸೋಂಕು ಹರಡಿದ ಮೂಲ ತನಿಖೆಯಲ್ಲಿದೆ. ಪಿ- 29169ರ ಸಂಪರ್ಕದಿಂದ 61ರ ವೃದ್ಧ, 17ರ ಬಾಲಕಿ, ಅಂತರ ಜಿಲ್ಲಾ ಪ್ರಯಾಣದಿಂದ 50ರ ಪುರುಷ, 30 ವರ್ಷದ ಪುರುಷ ವಿಷಮ ಶೀತಜ್ವರದಿಂದ ಪಿ-18096 ಸಂಪರ್ಕದಿಂದ 20 ವರ್ಷದ ಯುವಕನಿಗೆ ಸೋಂಕು ಪತ್ತೆಯಾಗಿದೆ.
1000 ಕಿಟ್ ಸರಬರಾಜು: ಗರ್ಭಿಣಿಯರಿಗೆ ಕರೊನಾ ತಪಾಸಣೆ ಮಾಡುವ ಸಲುವಾಗಿ ಜಿಲ್ಲೆಗೆ ಆರೋಗ್ಯ ಇಲಾಖೆಯಿಂದ 1000 ರ‌್ಯಾಪಿಡ್ ಆ್ಯಂಟಿಜನ್ ಕಿಟ್ ಸರಬರಾಜಾಗಿದೆ. ಪ್ರತಿ ತಾಲೂಕಿಗೂ ತಲಾ 100 ಕಿಟ್ ಕಳುಹಿಸಲಾಗಿದ್ದು, ಶುಕ್ರವಾರದಿಂದ ಪರೀಕ್ಷೆ ಆರಂಭವಾಗಲಿದೆ. ಗರ್ಭಿಣಿಯರಿಗೂ ಕರೊನಾ ಪರೀಕ್ಷೆ ಅತ್ಯವಶ್ಯಕವಾಗಿರುವುದರಿಂದ ರ‌್ಯಾಪಿಡ್ ಕಿಟ್‌ನಿಂದ ಶೀಘ್ರ ಫಲಿತಾಂಶ ಪಡೆಯಲು ಸಾಧ್ಯ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.