

ಕೋಲಾರ: ವಾರದ ಸಂತೆಗಳಿಗೂ ಕರೊನಾ ಭೀತಿ ತಟ್ಟಿದ್ದು, ನಿಷೇಧಿಸಿರುವ ಬಗ್ಗೆ ಆಯಾ ಪಂಚಾಯಿತಿಗಳು ಗ್ರಾಮಗಳಲ್ಲಿ ಪ್ರಚಾರದಲ್ಲಿ ತೊಡಗಿವೆ.
ಸಂತೆ ಎಂಬುದು ಗ್ರಾಮೀಣ ಸಂಸ್ಕೃತಿಯ ಹಂತದಲ್ಲಿ ಹುಟ್ಟಿಕೊಂಡ ಒಂದು ವ್ಯಾಪಾರ ವ್ಯವಸ್ಥೆ. ಗ್ರಾಮೀಣದಲ್ಲಿ ಅಂಗಡಿ-ಮುಂಗಟ್ಟುಗಳು ವಿರಳವಾಗಿದ್ದ ಕಾಲದಲ್ಲಿ ಸಂತೆಗಳು ಕೊರತೆ ನೀಗಿಸುತ್ತಿದ್ದವು. ಸಂತೆಯ ಮೂಲ ಪರಿಕಲ್ಪನೆಯಾದ ಗ್ರಾಮೀಣ ಹುಟ್ಟುವಳಿಗಳನ್ನು ವಿನಿಮಯ ಮಾಡಿಕೊಳ್ಳುವ ಕಾಲ ಹೋಗಿ ಮಾರಾಟಗಾರ ಮತ್ತು ಖರೀದಿದಾರ ನಡುವಿನ ವ್ಯಾಪಾರವಾಗಿ ಬದಲಾಗಿದ್ದರೂ ಸಂತೆ ಇಂದಿಗೂ ಜೀವಂತವಾಗಿದೆ.
ಕೋಲಾರದ ತೊಟ್ಲಿ ಗ್ರಾಪಂ ವ್ಯಾಪ್ತಿಯ ಚಿಟ್ನಹಳ್ಳಿಯಲ್ಲಿ ಪ್ರತಿ ಮಂಗಳವಾರ ಸಂತೆ ನಡೆದರೆ, ವೇಮಗಲ್‌ನಲ್ಲಿ ಬುಧವಾರ, ಸುಗಟೂರಿನಲ್ಲಿ ಶುಕ್ರವಾರ, ಮದನಹಳ್ಳಿ ಕ್ರಾಸ್, ಕ್ಯಾಲನೂರಿನಲ್ಲಿ ಶನಿವಾರ, ನರಸಾಪುರದಲ್ಲಿ ಭಾನುವಾರ ಹೀಗೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೊಂದು ದಿನ ಸಂತೆ ನಡೆಯುತ್ತದೆ.
ನಿಷೇಧದ ಆದೇಶ: ವಾರದ ಸಂತೆಯನ್ನೂ ಕೆಲ ಕಾಲ ನಿಷೇಧಿಸುವ ಹಂತಕ್ಕೆ ಕರೊನಾ ಭೀತಿ ಆವರಿಸಿದೆ. ರಾಜ್ಯ ಸರ್ಕಾರದ ಆದೇಶದಂತೆ ವಾರದ ಸಂತೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿರುವುದರಿಂದ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಸಂತೆ ರದ್ದುಪಡಿಸಿರುವ ಬಗ್ಗೆ ಗ್ರಾಪಂಗಳು ಜನರಿಗೆ ಮಾಹಿತಿ ನೀಡುವ ಕೆಲಸಕ್ಕೆ ಮುಂದಾಗಿವೆ.
ವೇಮಗಲ್‌ನಲ್ಲಿ ಭಾನುವಾರದಿಂದಲೇ ಜಾರಿಗೆ ಬರುವಂತೆ ಸಂತೆ, ಎಲ್ಲ ಬೀದಿಬದಿ ವ್ಯಾಪಾರವನ್ನು ಒಂದು ವಾರ ನಿಷೇಧಿಸಿ ಗ್ರಾಪಂ ಪಿಡಿಒ ಬಿ.ಆರ್. ರಮೇಶ್‌ಬಾಬು ಪ್ರಕಟಣೆ ಹೊರಡಿಸಿದ್ದು, ಚಿಕನ್, ಮಟನ್, ತಳ್ಳುವ ಗಾಡಿಗಳಲ್ಲಿ ಕಬಾಬ್, ಪಾನಿಪುರಿ, ಗೋಬಿ ಅಂಗಡಿ, ಟಿಫನ್ ಅಂಗಡಿ, ಬೋಂಡಾ, ಬಜ್ಜಿ ಇನ್ನಿತರ ರಸ್ತೆ ಬದಿ ಅಂಗಡಿ ಮುಚ್ಚಲು ಸೂಚಿಸಿದ್ದರಿಂದ ಜನಜಂಗುಳಿಯಿಂದ ಕೂಡಿದ್ದ ಕೇಂದ್ರ ಸ್ಥಾನ ಭಣಗುಡುತ್ತಿವೆ.
ತೊಟ್ಲಿ ಗ್ರಾಪಂನಿಂದ ಮಂಗಳವಾರ ನಡೆಯುವ ಸಂತೆ ನಿಷೇಧಿಸಿರುವ ಆದೇಶದ ಭಿತ್ತಿಫಲಕವನ್ನು ಸಂತೆ ನಡೆಯುವ ಚಿಟ್ನಹಳ್ಳಿ ಬಸ್ ತಂಗುದಾಣದ ಸುತ್ತಮುತ್ತಲ ಭಾಗದಲ್ಲಿ ತೂಗುಹಾಕುವ ಜತೆಗೆ ಡಂಗುರ ಸಾರುವ ಕೆಲಸ ಮಾಡಿದೆ. ಇದೇ ರೀತಿ ವಿವಿಧ ಪಂಚಾಯಿತಿಗಳು ವಾರದ ಸಂತೆ, ಜಾತ್ರೆ, ಉತ್ಸವಗಳನ್ನು ನಿಷೇಧಿಸಿರುವ ಬಗ್ಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿವೆ.
ಮೊದಲೇ ತಟ್ಟಿತ್ತು ಬಿಸಿ: ಸಂತೆ ನಿಷೇಧದ ಆದೇಶಕ್ಕೂ ಮುನ್ನ ಮಾಲೂರಿನ ಚಿಕ್ಕತಿರುಪತಿಯಲ್ಲಿ ಕಳೆದ ಶನಿವಾರ ನಡೆದ ವಾರದ ಸಂತೆಗೆ ಕರೊನಾ ಭೀತಿ ತಟ್ಟಿತ್ತು. ಪ್ರತಿವಾರ ಸಂತೆಗೆ 3000 ರಿಂದ 4,000 ಕುರಿ ಹಾಗೂ ಮೇಕೆಗಳು ಮಾರಾಟಕ್ಕಾಗಿ ಬರುತ್ತಿದ್ದವು. ರೋಗ ಭೀತಿಯಿಂದ ಕೇವಲ 1200 ಕುರಿ, ಮೇಕೆಗಳು ಬಂದಿದ್ದವು.