ಜಿಲ್ಲೆಯಲ್ಲಿ 13 ಕರೊನಾ ಪ್ರಕರಣ ದೃಢ

5-klr-10
Published on

ಕೋಲಾರ: ಜಿಲ್ಲೆಯಲ್ಲಿ ಭಾನುವಾರ 13 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಒಂದೇ ದಿನ 7 ಮಂದಿ ಗುಣಮುಖರಾಗಿ ಮನೆಗೆ ತೆರಳಿದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಶತಕ ಬಾರಿಸಿದೆ.

ಭಾನುವಾರ ಪರೀಕ್ಷಿಸಿದ 550 ಮಾದರಿಯಲ್ಲಿ 213 ಮಂದಿಯ ವರದಿ ನೆಗೆಟಿವ್ ಬಂದರೆ 13 ಪಾಸಿಟಿವ್ ಆಗಿದೆ. ಈ ಪೈಕಿ ಕೋಲಾರದಲ್ಲಿ ಅತಿ ಹೆಚ್ಚು 9 ಪ್ರಕರಣಗಳು, ಕೆಜಿಎಫ್, ಶ್ರೀನಿವಾಸಪುರ ತಲಾ 1 ಹಾಗೂ ಮುಳಬಾಗಿಲು 2 ಪ್ರಕರಣ ದೃಢಪಟ್ಟಿದೆ. ಸೊಂಕಿತರ ಪ್ರಥಮ ಸಂಪರ್ಕದಲ್ಲಿದ್ದ 58 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 42 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಸೋಂಕಿತರ ವಿವರ: ನಗರದ ದರ್ಗಾ ಮೊಹಲ್ಲಾದಲ್ಲಿ ಸೋಂಕಿನಿಂದ ಜೂನ್ 29ರಂದು ಮೃತಪಟ್ಟಿದ್ದ ವೃದ್ಧ ವ್ಯಕ್ತಿಯ ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರೂ ಸೇರಿ ಒಂದೇ ದಿನ 5 ಮಂದಿಗೆ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯ ಸಂಪರ್ಕ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿರುವ ಸುಮಾರು 10 ಮಂದಿಗೆ ಈಗಾಗಲೆ ಸೋಂಕು ತಗುಲಿದೆ.

30 ವರ್ಷದ ಪುರುಷ, 35 ವರ್ಷದ ಮಹಿಳೆ, 59 ವರ್ಷದ ಮಹಿಳೆ, 5 ವರ್ಷದ ಬಾಲಕ, 3 ವರ್ಷದ ಬಾಲಕನಿಗೆ ಸೋಂಕು ತಗಲಿದ್ದು, ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರದ ಕಂಟೇನ್ಮೆಂಟ್ ಪ್ರದೇಶವಾಗಿದ್ದ ಕೋಟೆಯ 50 ವರ್ಷದ ವ್ಯಕ್ತಿಗೆ ಸೋಂಕು ಹರಡಿದೆ.

ಮುಳಬಾಗಲಿನ ಪಿ-18095ರ ಸಂಪರ್ಕದಿಂದ 43 ವರ್ಷದ ಪುರುಷ, ವಿಷಮಶೀತ ಜ್ವರದಿಂದ 65 ವರ್ಷದ ಮಹಿಳೆ, ಬೆಂಗಳೂರು ಪ್ರಯಾಣ ಹಿನ್ನೆಲೆ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಕೆಜಿಎಫ್‌ನ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಶ್ರೀನಿವಾಸಪುರದ 34 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಿ-9545 ವ್ಯಕ್ತಿಯಿಂದ ಆರೋಗ್ಯ ಕಾರ್ಯಕರ್ತರಾಗಿರುವ ಪುರುಷ (28 ವರ್ಷ ) ಹಾಗೂಪಿ-8487 ವ್ಯಕ್ತಿಯಿಂದ ಆರೋಗ್ಯ ಕಾರ್ಯರ್ತೆಗೆ (33 ವರ್ಷ) ಕರೊನಾ ತಗುಲಿದ್ದು, ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

7 ಜನ ಗುಣಮುಖ: ಕೋಲಾರದ ಪಿ-10838, ಪಿ-11195, ಹಾಗೂ ಪಿ-11194, ಬಂಗಾರಪೇಟೆಯ ಪಿ-12007, ಕೆಜಿಎಫ್‌ನ ಪಿ-10444, ಮುಳಬಾಗಿಲಿನ ಪಿ-11185 ಮತ್ತು ಪಿ-11190 ರೋಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 174 ಆಗಿದ್ದು, ಒಟ್ಟು 72 ಮಂದಿ ಗುಣಮುಖರಾಗುವುದರೊಂದಿಗೆ ಸಕ್ರೀಯ ಪ್ರಕರಣಗಳ ಸಂಖ್ಯೆ 100ಕ್ಕೆ ಬಂದು ನಿಂತಿದೆ. ಇಬ್ಬರು ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net