

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ನಾಲ್ವರು ಮಹಿಳೆಯರಿಗೆ ಕರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 52ಕ್ಕೇರಿದೆ.
ಕೋಲಾರದ ಪಿ.6907 ಪ್ರಾಥಮಿಕ ಸಂಪರ್ಕ ಹೊಂದಿದ್ದ ನರ್ಸ್‌ಗೆ (26) ಸೋಂಕು ದೃಢಪಟ್ಟಿದೆ. ಈಕೆ ಶ್ರೀನಿವಾಸಪುರ ತಾಲೂಕಿನ ಗೊಟ್ಟುಕುಂಟೆ ಗ್ರಾಮದ ನಿವಾಸಿಯಾಗಿದ್ದು, ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಲ್ಕು ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದರು. ಗುರುವಾರ ರಾತ್ರಿ ಸೋಂಕು ದೃಢಪಟ್ಟಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನರ್ಸ್ ಗೊಟ್ಟುಕುಂಟೆ ಗ್ರಾಮಕ್ಕೆ ಒಮ್ಮೆ ಬಂದು ಹೋಗಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.
ನಗರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಕ್ಯಾನ್ಸರ್ ಪೀಡಿತೆಗೆ (50) ಕರೊನಾ ದೃಢಪಟ್ಟಿದ್ದು, ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಕೆಗೆ ಸೋಂಕು ಎಲ್ಲಿಂದ ಹರಡಿತು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.
ಬಂಗಾರಪೇಟೆ ತಾಲೂಕಿನ ಬನಹಳ್ಳಿಯ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಚೆನೈಗೆ ಹೋಗಿ ಬಂದಿದ್ದರು.
ಮತ್ತೊಂದು ಪ್ರಕರಣದಲ್ಲಿ ಬಂಗಾರಪೇಟೆಯ ರೋಗಿ ಪಿ-6908ರ ಸಂಪರ್ಕದಿಂದ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರು ಸೋಂಕಿತ ಮಹಿಳೆಯರ ಪ್ರಥಮ ಸಂಪರ್ಕದಲ್ಲಿದ್ದ 24 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 22 ಮಂದಿ ಸೇರಿ ಒಟ್ಟು 46 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 52ಕ್ಕೆ ಏರಿದೆ. 29 ಮಂದಿ ಗುಣವಾಗಿ ಬಿಡುಗಡೆ ಹೊಂದಿದ್ದು, 23 ಸಕ್ರಿಯ ಪ್ರಕರಣಗಳಿವೆ. ಒಟ್ಟು 1012 ಮಂದಿ ನಿಗಾದಲ್ಲಿದ್ದಾರೆ. 9340 ಮಾದರಿ ಪರೀಕ್ಷಿಸಲಾಗಿದ್ದು, 8987 ಪ್ರಕರಣಗಳು ನೆಗೆಟಿವ್ ಆಗಿವೆ.
ವೈದ್ಯ ಸಿಬ್ಬಂದಿ ಕ್ವಾರಂಟೈನ್: ಕೋಲಾರ ನಗರದ ಹೊರ ವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದ ಕ್ಯಾನ್ಸರ್ ಪೀಡಿತ ರೋಗಿಯಲ್ಲಿ ಕರೊನಾ ಪತ್ತೆಯಾಗಿದ್ದು ಈಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಕೋಲಾರ ತಾಲೂಕಿನ ಜಂಗಮ ಗುರ್ಜೇನಹಳ್ಳಿಯ ಮಹಿಳೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿ ಸರ್ಜರಿಗೆ ಒಳಪಟ್ಟಿದ್ದರು. ಸರ್ಜರಿ ನಂತರ ಸೋಂಕು ದೃಢಪಟ್ಟಿರುವುದರಿಂದ ಅದೇ ಆಸ್ಪತ್ರೆಯ ಕೋವಿಡ್ ವಾರ್ಡಿಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ, ಜತೆಗೆ ಸರ್ಜರಿ ಮಾಡಿದ ಆಪರೇಷನ್ ಥಿಯೇಟರ್ ಅನ್ನು 48 ಗಂಟೆ ಸೀಲ್‌ಡೌನ್ ಮಾಡಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗಿದೆ.
ನಮ್ಮ ಆಸ್ಪತ್ರೆಯಲ್ಲಿ 15 ಆಪರೇಷನ್ ಥಿಯೇಟರ್‌ಗಳಿದ್ದು, ರೋಗಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಗೆ ಸರ್ಜರಿ ನಂತರ ಸೋಂಕು ಪತ್ತೆಯಾಗಿದ್ದು ಕೋವಿಡ್ ವಾರ್ಡಿನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜನರಲ್ಲಿ ಅನಗತ್ಯ ಗೊಂದಲ, ಭಯ ಬೇಡ.
ಡಾ.ಲಕ್ಷ್ಮಯ್ಯ, ವೈದ್ಯಕೀಯ ಆಧೀಕ್ಷಕ, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಕೋಲಾರ
ಅನಾರೋಗ್ಯದಿಂದ ಬಸ್ ಚಾಲಕ ಸಾವು: ಮಾಲೂರು ಪಟ್ಟಣದ ಆರ್.ಎಫ್. ರಸ್ತೆಯ ನಿವಾಸಿ, ಕೆಎಸ್‌ಆರ್‌ಟಿಸಿಯ ಕೋಲಾರ ವಿಭಾಗದಲ್ಲಿ ಚಾಲಕ ಕಂ ನಿರ್ವಾಹಕ ಅನಾರೋಗ್ಯದಿಂದ ಮನೆಯಲ್ಲಿ ಮೃತಪಟ್ಟಿದ್ದು, ಆರೋಗ್ಯ ಇಲಾಖೆಯಿಂದ ಗಂಟಲು ದ್ರವ ಸಂಗ್ರಹಿಸಿ ಕರೊನಾ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಗದಗ ಮೂಲದ ಯಲ್ಲಪ್ಪ ಶೆಟ್ಟಿವಾಡಿ (38) ಮೃತ. ಇವರು ಆರ್.ಎಫ್ ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯದ ಬಳಿ ಮನೆಯೊಂದರಲ್ಲಿ ವಾಸವಿದ್ದರು. ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲೇ ಇದ್ದರು. ಶುಕ್ರವಾರ ಬೆಳಗ್ಗೆ ಜ್ವರ, ಎದೆನೋವು ಕಾಣಿಸಿಕೊಂಡು ನಿಧನರಾಗಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಮೃತರ ಮನೆಗೆ ಧಾವಿಸಿ ಶವವನ್ನು ಪಟ್ಟಣದ ಶವಾಗಾರದಲ್ಲಿರಿಸಿದ್ದು, ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ಪರೀಕ್ಷೆಗೆ ಕಳುಹಿಸಿದ್ದಾರೆ.