6 ದಿನವಾದರೂ ಬಂದಿಲ್ಲ ವರದಿ, ವೈದ್ಯರು, ನರ್ಸ್, ಸಿಬ್ಬಂದಿ ಧರಣಿ

17 Srinivaspur-1
Published on

ಶ್ರೀನಿವಾಸಪುರ: ಪಟ್ಟಣದ ಜೆ.ಸಿ.ರಸ್ತೆಯಲ್ಲಿರುವ ವೆಂಕಟೇಶ್ವರ ನರ್ಸಿಂಗ್ ಹೋಂ ವೈದ್ಯರು, ನರ್ಸ್ ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಿ ಗಂಟಲು ದ್ರವವನ್ನು ಪರೀಕ್ಷೆಗೆ ಪಡೆದು 6 ದಿನಗಳಾದರೂ ವರದಿ ಬರದಿರುವುದರಿಂದ ವೈದ್ಯರು ಮತ್ತು ಸಿಬ್ಬಂದಿ ಬುಧವಾರ ತಾಲೂಕು ಆಡಳಿತ ವಿರುದ್ಧ ಆಸ್ಪತ್ರೆ ಮುಂಭಾಗ ಧರಣಿ ನಡೆಸಿದರು.

ಆಸ್ಪತ್ರೆ ವೈದ್ಯ ಡಾ.ವೆಂಕಟಾಚಲ ಮಾತನಾಡಿ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಜೂ.11ರಂದು ಸೋಂಕು ಕಾಣಿಸಿಕೊಂಡಿತ್ತು. ಸ್ಥಳೀಯ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ಜೂ.12ರಿಂದ ಆಸ್ಪತ್ರೆ ಸಿಬ್ಬಂದಿ ಹಾಗೂ ನಾನು ಕ್ವಾರಂಟೈನ್‌ಗೆ ಒಳಗಾಗಿ ಗಂಟಲು ದ್ರವವನ್ನು ಪರೀಕ್ಷೆಗೆ ನೀಡಿ 6 ದಿನಗಳಾಗಿವೆ. ಇನ್ನೂ ವರದಿ ಬಂದಿಲ್ಲ. ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕರೊನಾ ಬಂದಿದೆಯೆಂದು ಇಡೀ ತಾಲೂಕಿಗೆ ಸುಳ್ಳು ಸುದ್ದಿ ಹಬ್ಬಿರುವುದರಿಂದ ಸಿಬ್ಬಂದಿ ಪಾಲಕರು ಆತಂಕದಿಂದ ಆಸ್ಪತ್ರೆ ಬಳಿ ಬರುತ್ತಿದ್ದಾರೆ. ಸೋಂಕು ಪತ್ತೆಯಾದರೆ ಕರೊನಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು ಎಂದರು.

ವರದಿ 24 ಗಂಟೆಯೊಳಗೆ ಬರಬೇಕು. ಆದರೆ ತಾಲೂಕಿನಲ್ಲಿ ಹಾಗಾಗುತ್ತಿಲ್ಲ. ಇದಕ್ಕೆಲ್ಲ ಜಿಲ್ಲಾಡಳಿತದ ವೈಲ್ಯವೇ ಕಾರಣ. ಕ್ವಾರಂಟೈನ್‌ಗೆ ಒಳಗಾಗಿರುವವರನ್ನು ಕೈದಿಗಳಂತೆ ಕಾಣುತ್ತಿದ್ದಾರೆ. ಸರ್ಕಾರ ನಿಯಮ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ಟಿಎಚ್‌ಒ ಡಾ.ಶ್ರೀನಿವಾಸ್ ಮಾತನಾಡಿ, ನಮಗೆ ಮಾಹಿತಿಯಿಲ್ಲದೆ ನೀವು ಪ್ರತಿಭಟನೆ ನಡೆಸುವುದು ಸರಿಯಲ್ಲ. ನೀವು ಒಬ್ಬ ವೈದ್ಯಾಧಿಕಾರಿಯಾಗಿ ಸರ್ಕಾರದ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದಾಗ ಸಾರ್ವಜನಿಕರು ಧರಣಿ ನಿರತ ವೈದ್ಯರ ಬೆಂಬಲಕ್ಕೆ ಬಂದರು.

ವೈದ್ಯರು ನಡೆಸುತ್ತಿರುವ ಧರಣಿ ಸರಿಯಿದೆ. ಸ್ಥಳೀಯ ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮಾವು ಮಾರುಕಟ್ಟೆಯಲ್ಲಿ ಸರ್ಕಾರದ ನಿಯಮ ಪಾಲನೆಯಾಗುತ್ತಿಲ್ಲ. ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ. ಹೊರ ರಾಜ್ಯಗಳಿಂದ ಬಂದಿರುವ ಕೂಲಿ ಕಾರ್ಮಿಕರು ಹಾಗೂ ಲಾರಿ ಚಾಲಕರಿಂದ ಕಾಟಾಚಾರಕ್ಕೆ ಎಂಬಂತೆ ಗಂಟಲು ದ್ರವ ಪಡೆದಿದ್ದೀರಿ. ಇದುವರೆಗೆ ವರದಿ ಬಂದಿಲ್ಲ. ಮಂಡಿ ಮಾಲೀಕರಿಂದ ಕಮಿಷನ್ ಪಡೆದಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿವೆ ಎಂದು ಸ್ಥಳೀಯರಾದ ವೆಂಕಟೇಶ್, ಕೆ.ಎಂ. ಚೌಡಪ್ಪ ಮತ್ತು ಪಿ.ಆರ್.ಸೂರ‌್ಯನಾರಾಯಣ ತರಾಟೆಗೆ ತೆಗೆದುಕೊಂಡರು.

ಕೋಲಾರದಲ್ಲಿ ಹೊಸದಾಗಿ ಕರೊನಾ ಸೋಂಕು ಪರೀಕ್ಷೆಯ ಲ್ಯಾಬ್ ಪ್ರಾರಂಭವಾಗಿರುವುದರಿಂದ ಪರೀಕ್ಷೆ ನಡೆಸುವುದು ನಿಧಾನವಾಗಿದೆ. ಬುಧವಾರ ಸಂಜೆ ಅಥವಾ ಗುರುವಾರದೊಳಗೆ ವರದಿ ಬರಲಿದೆ. ಶ್ರೀನಿವಾಸ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net