

ಕೋಲಾರ: ಎರಡು ತಿಂಗಳು ಕೋಲಾರ ಎಪಿಎಂಸಿಗೆ ಟೊಮ್ಯಾಟೊ ಅವಕ ಹೆಚ್ಚಾಗುವುದರಿಂದ ಕರೊನಾ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗಬೇಕು ಎಂದು ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್ ಅವರು ಸಾರಿಗೆ ಏಜೆನ್ಸಿಗಳ ಮಾಲೀಕರಿಗೆ ಸೂಚಿಸಿದರು.
ಎಪಿಎಂಸಿಗೆ ಹೊಸ ಅಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರದಿಂದ ನಿರ್ಗಮಿಸಲಿರುವ ಅವರು ಶುಕ್ರವಾರ ಎಪಿಎಂಸಿಯಲ್ಲಿ ಸಾರಿಗೆ ಮತ್ತು ತರಕಾರಿ ಮಂಡಿ ಮಾಲೀಕರೊಂದಿಗೆ ಸಭೆ ನಡೆಸಿ ಲಾಕ್‌ಡೌನ್ ಪರಿಣಾಮ ದೇಶದ ಪ್ರಮುಖ ಎಪಿಎಂಸಿಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ನಮ್ಮಲ್ಲಿ ಕೆಲ ಪ್ರಕರಣ ಹೊರತಾಗಿಯು ಮಾರುಕಟ್ಟೆ ಬಂದ್ ಆಗಲು ಅವಕಾಶ ನೀಡಲಿಲ್ಲ ಎಂದರು.
ಈ ಬಾರಿ ಉತ್ತರಭಾರತದಲ್ಲಿ ನೆರೆ ಹಾವಳಿಯಿಂದಾಗಿ ಟೊಮ್ಯಾಟೊ ಅವಕ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದ ಹಾಗೂ ಕೋಲಾರ ಸೇರಿ ನಮ್ಮ ರಾಜ್ಯದ ಇನ್ನಿತರ ಕಡೆಯಿಂದ ಸರಕು ಬರುವುದರಿಂದ ವಾಹನ ದಟ್ಟಣೆ ನಿಯಂತ್ರಿಸದಿದ್ದರೆ ಕರೊನಾ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.
ಕರೊನಾ ಸದ್ಯಕ್ಕೆ ನಿವಾರಣೆಯಾಗುವ ಲಕ್ಷಣ ಕಾಣುತ್ತಿಲ್ಲ, ಜೂನ್‌ನಿಂದ ಆಗಸ್ಟ್ ವರೆಗೂ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುವುದರಿಂದ ಹೊರಗಿನಿಂದ ಬರುವ ಲಾರಿಗಳ ಕಡೆ ಗಮನ ಹರಿಸಬೇಕು, ಲಾರಿ ಚಾಲಕರು, ಕ್ಲಿನರ್‌ಗಳಿಗೆ ಸಾರಿಗೆ ಏಜೆನ್ಸಿಯವರು ಸೂಕ್ತ ಭದ್ರತೆ ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.
ಲಾರಿಗಳ ನಿಲುಗಡೆ ಪ್ರದೇಶದಲ್ಲೇ ಚಾಲಕರು ಮತ್ತು ಕ್ಲಿನರ್‌ಗಳಿಗೆ ಮೊಬೈಲ್ ಶೌಚಗೃಹಗಳನ್ನು ಬಾಡಿಗೆಗೆ ಪಡೆದು ಪರಿಸರಕ್ಕೆ ಹಾನಿಯಾಗದ ಪ್ರದೇಶದಲ್ಲಿ ಇಡಬೇಕು, ಇದಕ್ಕೆ ಬೇಕಾದರೆ ಎಪಿಎಂಸಿಯಿಂದ ತಿಂಗಳಿಗೆ 7500 ರೂ. ಬಾಡಿಗೆ ನೀಡಲು ಬದ್ಧ, ಆದರೆ ನೀರಿನ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಬಳಸಿ ಎಸೆಯುವ ಮಾಸ್ಕ ಬದಲು ಬಟ್ಟೆ ಮಾಸ್ಕ್‌ಗಳನ್ನು ಲಾರಿ ಚಾಲಕರಿಗೆ ಮತ್ತು ಸಿಬ್ಬಂದಿಗೆ ಒದಗಿಸಬೇಕು, ಅವರು ಇರುವಷ್ಟು ದಿನ ಆರೋಗ್ಯ ತಪಾಸಣೆ ಮಾಡಿಸಬೇಕು ಹಾಗೂ ಸ್ಯಾನಿಟೈಸರ್ ನೀಡಬೇಕೆಂದು ಸೂಚಿಸಿದರು.
ಕಳೆದ ಎರಡು ತಿಂಗಳಲ್ಲಿ ಲಾಕ್‌ಡೌನ್ ಪರಿಣಾಮವಾಗಿ ಎಪಿಎಂಸಿಗೆ 1.50 ಕೋಟಿ ರೂ. ನಷ್ಟ ಉಂಟಾಗಿದ್ದರೂ ರೈತರಿಗೆ ತೊಂದರೆ ಉಂಟು ಮಾಡಿಲ್ಲ, ಮೇ ಮತ್ತು ಜೂನ್ ತಿಂಗಳ ತೆರಿಗೆಯಲ್ಲಿ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಇದೇ ವೇಳೆ ಅವರು ಲಾಕ್‌ಡೌನ್ ವೇಳೆ ಎಪಿಎಂಸಿಯಲ್ಲಿ ಯಾವುದೇ ಸಮಸ್ಯೆ ಬರದಂತೆ ನೋಡಿಕೊಂಡ ತಾಲೂಕು ವೈದ್ಯಾಧಿಕಾರಿ ಡಾ.ರಮ್ಯದೀಪಿಕಾ, ನಗರಸಭೆ ಆಯುಕ್ತ ಶ್ರೀಕಾಂತ್, ಸಿಪಿಐ ರಂಗಶಾಮಯ್ಯ, ಪಿಎಸ್‌ಐ ಅಣ್ಣಯ್ಯಪ್ಪ ಅವರನ್ನು ಸ್ಮಾನಿಸಲಾಯಿತು.
ತಾಲೂಕು ವೈದ್ಯಾಧಿಕಾರಿ ಡಾ.ರಮ್ಯ ದೀಪಿಕಾ ಮಾತನಾಡಿ, ಈವರೆಗೆ ಕಟ್ಟುನಿಟ್ಟಾಗಿ ಕರೊನಾ ಮಾರ್ಗಸೂಚಿಯನ್ನು ಪಾಲಿಸಲಾಗಿದೆ, ಮುಂದಿನ 2-3 ತಿಂಗಳು ಗಂಭೀರ ಪರಿಸ್ಥಿತಿ ಎದುರಿಸಬೇಕಾಗಿರುವುದರಿಂದ ಸಾರಿಗೆ ಏಜೆನ್ಸಿಗಳ ಮಾಲೀಕರು ಹೊರಗಿನಿಂದ ಬರುವ ಲಾರಿ ಮಾಲೀಕರು, ಚಾಲಕರು ಹಾಗೂ ಕ್ಲಿನರ್‌ಗಳ ಮೇಲೆ ಹೆಚ್ಚಿನ ನಿಗಾವಹಿಸಿ ಸೋಂಕು ಹರಡದಂತೆ ಎಚ್ಚರವಹಿಸಬೇಕೆಂದರು.
ಸಾರಿಗೆ ಏಜೆನ್ಸಿಯ ಮಾಲೀಕ ಮೋಹನ್ ಕುಮಾರ್, ತರಕಾರಿ ಮಂಡಿ ಮಾಲೀಕರ ಸಂಘದ ಅಧ್ಯಕ್ಷ ಆರ್‌ಎಪಿ ನಾರಾಯಣಸ್ವಾಮಿ, ಸಿಪಿಐ ರಂಗಶಾಮಯ್ಯ, ಎಪಿಎಂಸಿ ಸದಸ್ಯರಾದ ದೇವರಾಜ್,ಅಪ್ಪಯ್ಯಪ್ಪ, ಕಾರ್ಯದರ್ಶಿ ಟಿ.ಎಸ್.ರವಿಕುಮಾರ್, ಕಚೇರಿ ಆಧೀಕ್ಷಕಿ ವಿಜಯಲಕ್ಷ್ಮೀ ಇನ್ನಿತರರು ಹಾಜರಿದ್ದರು.