ಸೋಂಕು ನಿಯಂತ್ರಣಕ್ಕೆ ಲ್ಯಾಬ್ ವರದಾನ

11-klr-4
Published on

ಕೋಲಾರ: ಕೋವಿಡ್-19ರ ಪರೀಕ್ಷಾ ವರದಿಗಾಗಿ ದಿನಗಟ್ಟಲೆ ಕಾಯುತ್ತಿದ್ದ ಜಿಲ್ಲೆಯ ಜನತೆಗೆ ನಗರದ ಎಸ್‌ಆರ್‌ಎನ್ ಜಿಲ್ಲಾ ಆಸ್ಪತ್ರೆಯಲ್ಲೇ ಪ್ರಯೋಗಾಲಯ ತೆರೆದಿರುವುದು ವರದಾನವಾಗಿದೆ.

ಕರೊನಾ ಹಾವಳಿಯಿಂದ ಮಾರ್ಚ್‌ನಿಂದ ಜೂನ್ 4ರವರೆಗೆ ಸೋಂಕು ಪತ್ತೆಗಾಗಿ ಸಾವಿರಾರು ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯವಿಲ್ಲದೆ ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರಿನ ಕಳುಹಿಸಿ ವರದಿ ತರಿಸಿಕೊಳ್ಳಲು ಕಷ್ಟವಾಗಿತ್ತು.

ಫಲಿತಾಂಶ ತಿಳಿಯಲು ಕನಿಷ್ಠ 2-3 ದಿನವಾಗುತ್ತಿತ್ತು. ಇದಲ್ಲದೆ ಕರೊನಾ ಶಂಕಿತರ ಪ್ರಥಮ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್ ಮಾಡಿ ಆಯಾ ಪ್ರದೇಶನವನ್ನು ಕಂಟೇನ್ಮೆಂಟ್ ಪ್ರವೇಶವಾಗಿ ಘೋಷಿಸುವಲ್ಲಿ ವಿಳಂಬವಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿತ್ತು.

ಜಿಲ್ಲೆಯಲ್ಲೇ ಕೋವಿಡ್ ಪ್ರಯೋಗಾಲಯವಿದ್ದರೆ ಸೋಂಕು ಪತ್ತೆ ಸುಲಭವಾಗುತ್ತದೆ ಎಂಬ ಜನಾಭಿಪ್ರಾಯದ ಜತೆಗೆ ಸರ್ಕಾರ ಸಹ ಸ್ಪಂದಿಸಿದ್ದರಿಂದ ಪ್ರಯೋಗಾಲಯ ತೆರೆಯಲು ನಿರ್ಧಾರ ಕೈಗೊಂಡ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಂ) 80 ಲಕ್ಷ ರೂ. ಬಿಡುಗಡೆ ಮಾಡಿ ಜೂ.4ರಂದು ಪ್ರಯೋಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆ ಮಾಡಿಸಿ ವಿಳಂಬಕ್ಕೆ ಇತಿಶ್ರೀ ಹಾಡಿದ್ದಾರೆ.

ಕಾಲಮಿತಿಯಲ್ಲಿ ಪ್ರಯೋಗಾಲಯ ತೆರೆಯಲು ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್ ಅವರಿಗೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸರ್ಕಾರಕ್ಕೆ ಕರೊನಾ ವೆಚ್ಚ ಸಹ ತಗ್ಗಿಸಿದ್ದಾರೆ.

ಪ್ರಾಯೋಗಾಲಯಕ್ಕೆ ನಿಮ್ಹಾನ್ಸ್‌ನಲ್ಲಿ ತರಬೇತಿ ಪಡೆದ ನುರಿತ ವೈದ್ಯರು ಹಾಗೂ ತಾಂತ್ರಿಕ ಸಿಬ್ಬಂದಿ ನಿಯೋಜಿಸಲಾಗಿದೆ. ದಿನಕ್ಕೆ 2 ಪಾಳಿಯಲ್ಲಿ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ 1045 ಜನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಮಾದರಿ ಪರಿಶೀಲಿಸಿ ಕೇವಲ 2 ಗಂಟೆಯೊಳಗೆ ಫಲಿತಾಂಶ ನೀಡಲಾಗುತ್ತಿದೆ.

ಗರ್ಭಿಣಿ ರಕ್ಷಣೆಗೆ ನಿಗಾ: 3 ದಿನಗಳ ಹಿಂದೆ ಕೋಲಾರ ತಾಲೂಕಿನ ಬೆಟ್ಟಹೊಸಪುರದ 8 ತಿಂಗಳ ಗರ್ಭಿಣಿಗೆ ಕರೊನಾ ಸೋಂಕಿನ ಪರಿಣಾಮ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಹಾಲಿ 10 ಸಕ್ರಿಯ ಪ್ರಕರಣಗಳಿದ್ದು ವೈದ್ಯರು ಗರ್ಭಿಣಿ ಕಡೆ ವಿಶೇಷ ಆಸಕ್ತಿ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸೂತಿ ತಜ್ಞೆ ಡಾ.ರಾಧಿಕಾ, ಕರೊನಾ ಸೋಂಕಿತರಿಗೆ ಶುಶ್ರೂಷೆ ನೀಡುತ್ತಿರುವ ಇನ್ನಿತರ ವೈದ್ಯರು ಮತ್ತು ಸಿಬ್ಬಂದಿ ವಿಶೇಷ ಗಮನ ಹರಿಸಿದ್ದಾರೆ.

ಲಾಕ್‌ಡೌನ್ ವೇಳೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಇಳಿಮುಖವಾಗಿತ್ತು. ಜೂ.1ರಿಂದ ಜನ ಮತ್ತೆ ಸರ್ಕಾರಿ ಆಸ್ಪತ್ರೆ ಸೇವೆ ಬಯಸಿ ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ದಿನಕ್ಕೆ 1000ರಿಂದ 1200 ಜನರು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದು, ಈ ಪೈಕಿ 250ರಿಂದ 300 ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೆ 15ರಿಂದ 20 ಹೆರಿಗೆ ಆಗುತ್ತಿದ್ದು ತಾಯಿ ಮತ್ತು ಮಗುವಿಗೆ ಕರೊನಾ ಸೋಂಕು ಹಬ್ಬದಂತೆ ಎಚ್ಚರ ವಹಿಸಲಾಗಿದೆ. ಡಾ.ಎಸ್.ಜಿ.ನಾರಾಯಣಸ್ವಾಮಿ, ಜಿಲ್ಲಾ ಸರ್ಜನ್, ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net