ಕೋಲಾರದಲ್ಲಿ ಶಂಕಿತನಿಗೆ ಸೋಂಕು ದೃಢ

31-klr-8
Published on

ಕೋಲಾರ: ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದ ನಗರದ ಗೌರಿಪೇಟೆಯ ನಿವಾಸಿಗೆ (ಪಿ-3007) ಕರೊನಾ ದೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದ್ದು, ಒಟ್ಟು 18 ಸಕ್ರಿಯ ಪ್ರಕರಣಗಳಿವೆ.

ಗೌರಿಪೇಟೆ ರೋಗಿ ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೂ ಮುನ್ನ ಕರೊನಾ ಪರೀಕ್ಷೆಗೆ ಒಳಗಾಗಿದ್ದು, ಕರೊನಾ ದೃಢಪಟ್ಟಿದೆ. ಸೋಂಕಿನ ಮೂಲ ಪತ್ತೆಯಾಗದಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿದೆ.

ಸೋಂಕು ದೃಢಪಡುತ್ತಿದ್ದಂತೆ ಶನಿವಾರ ರಾತ್ರಿಯೇ ಗೌರಿಪೇಟೆ ಮತ್ತು ಕುರುಬರಪೇಟೆಯ 200 ಮೀಟರ್ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಪ್ರದೇಶವಾಗಿ ಘೋಷಿಸಿ ಬ್ಯಾರಿಕೇಡ್ ಹಾಕಲಾಗಿದೆ.

ಸೋಂಕಿತ ವ್ಯಕ್ತಿಯನ್ನು ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಈತನೊಂದಿಗೆ 50ಕ್ಕೂ ಹೆಚ್ಚು ಮಂದಿ ಪ್ರಾಥಮಿಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಸೋಂಕಿತನ ಕುಟುಂಬದ ಮೂವರು ಸದಸ್ಯರು, ಕುರುಬರಪೇಟೆಯ ಇಬ್ಬರು ಸ್ನೇಹಿತರು, ಈತನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದ ಕಾರು ಚಾಲಕನನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.

55 ಮಂದಿ ಆಸ್ಪತ್ರೆಯಲ್ಲಿ: ಕರೊನಾ ಶಂಕೆ ಹಿನ್ನೆಲೆಯಲ್ಲಿ 55 ಮಂದಿ ಆಸ್ಪತ್ರೆಯ ಐಸೋಲೇಷನ್‌ನಲ್ಲಿ ನಿಗಾದಲ್ಲಿದ್ದು, 669 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಈವರೆಗೆ 342 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಮತ್ತೊಂದು ಕೇಸ್: ಬಂಗಾರಪೇಟೆ: ಮಲೇಷಿಯಾದಿಂದ ಹಿಂತಿರುಗಿರುವ ಪಟ್ಟಣ ಮೂಲದ ವ್ಯಕ್ತಿ (ರೋಗಿ ಸಂಖ್ಯೆ 3186)ಗೂ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು 7 ದಿನ ಕ್ವಾರಂಟೈನ್‌ನಲ್ಲಿ ಇರಿಸಿ ಗಂಟಲು ದ್ರವದ ಪರೀಕ್ಷೆ ಫಲಿತಾಂಶ ಬರುವ ಮುನ್ನವೇ ಮನೆಗೆ ಕಳುಹಿಸಿದ್ದು, ಈಗ ಸೋಂಕು ಪತ್ತೆಯಾಗಿದೆ. ವಿವೇಕಾನಂದ ನಗರದ ಇವರು ಮೇ 22ರಂದು ಮಲೇಷಿಯಾದಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು. ಗಂಟಲು ದ್ರವವನ್ನು ಪರೀಕ್ಷೆಗೆ ಪಡೆಯಲಾಗಿತ್ತು, 24 ಗಂಟೆಯೊಳಗೆ ಬರಬೇಕಿದ್ದ ಫಲಿತಾಂಶ 9 ದಿನಗಳನಂತರ ಪ್ರಕಟವಾಗಿದ್ದು, ಸೋಂಕು ದೃಢಪಟ್ಟಿದೆ. ವಿವೇಕಾನಂದ ನಗರವನ್ನು ಸೀಲ್‌ಡೌನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net