ಕರೊನಾ ಶಂಕಿತರ ಗೋಳು ಕೇಳುವವರ‌್ಯಾರು?

26-klr-20
Published on

ಶ್ರೀನಿವಾಸಪುರ: ತಾಲೂಕಿನ ಚಲ್ದಿಗಾನಹಳ್ಳಿಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿರುವ ಕರೊನಾ ಶಂಕಿತರಿಗೆ ಸೂಕ್ತ ಭದ್ರತೆ ಹಾಗೂ ಸೌಕರ್ಯ ಕೊರತೆಯಿಂದ ಭಯಭೀತರಾಗಿದ್ದಾರೆನ್ನಲಾಗಿದೆ.

ತಾಲೂಕಿನ ಸನ್‌ಸಿಪ್ ಕಾರ್ಖಾನೆ ನೌಕರನಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೋಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ 23 ಜನರನ್ನು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದೆ.

ಈ ಪೈಕಿ ಕೆಲ ಲಾರಿ ಚಾಲಕರು ಬೀಡಿ, ಸಿಗರೇಟ್, ಪಾನ್ ಬೀಡಾ, ಗುಟ್ಖಾ, ಮದ್ಯ ತರಿಸಿಕೊಂಡು ವಸತಿ ಶಾಲೆಯ ವಾತಾವರಣ ಕಲುಷಿತಗೊಳಿಸುತ್ತಿರುವುದರಿಂದ ಇತರರಿಗೆ ಇರುಸು ಮುರುಸು ಆಗುತ್ತಿದೆ. ಈ ನರಕದಿಂದ ನಮ್ಮನ್ನು ಪಾರು ಮಾಡಿ ಮನೆಗಳಲ್ಲೇ ಕ್ವಾರಂಟೈನ್ ಮಾಡಿ ಎಂದು ಕೆಲವರು ಒತ್ತಾಯಿಸಿದ್ದಾರೆನ್ನಲಾಗಿದೆ.

ಪ್ರಾಥಮಿಕ ಸಂಪರ್ಕ ಹೊಂದಿರುವವರ ಜತೆ ದ್ವಿತೀಯ ಸಂಪರ್ಕದವರನ್ನು ಇಲ್ಲಿಗೆ ಸೇರಿಸಿದಲ್ಲಿ ಅಪಾಯ ಉಂಟಾಗುವ ಸಾಧ್ಯತೆ ಇದೆ. ಜತೆಗೆ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳಿಲ್ಲದೆ ತೊಂದರೆ ಅನುಭವಿಸುವಂತಾಗಿರುವುದರಿಂದ ಕೂಡಲೇ ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆನ್ನಲಾಗಿದೆ.

ಸನ್‌ಸಿಪ್ ಕಾರ್ಖಾನೆಯ ನೌಕರನಿಗೆ ಪಾಸಿಟಿವ್ ದೃಢಪಟ್ಟ ನಂತರ ಆತನ ಹೆಂಡತಿ ಮತ್ತು ಮಗನನ್ನು ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಹೆಂಗಸರಿಗೆ ಶೌಚಗೃಹ ವ್ಯವಸ್ಥೆ ಇಲ್ಲದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಬುಧವಾರದಿಂದ ಪರ್ಯಾಯ ವ್ಯವಸ್ಥೆ ಜತೆಗೆ ಸೂಕ್ತ ಭದ್ರತೆ ಕಲ್ಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆನ್ನಲಾಗಿದೆ.

ಈ ನಡುವೆ ತಾಯಿ, ಮಗ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ತೆರಳಿದಾಗ ವಸತಿ ಶಾಲೆಯಲ್ಲಿ ಶೌಚಗೃಹವಿಲ್ಲ ಎಂಬ ದೂರಿನ ಮೇರೆಗೆ ಅವರಿಬ್ಬರನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ.

ಗಾಬರಿ ಬೇಡ: ಶಾಲೆಯಲ್ಲಿ ಕ್ವಾರಂಟೈನ್ ಆಗಿರುವವರು ಗಾಬರಿ ಪಡಬೇಕಿಲ್ಲ. ವಸತಿ ಶಾಲೆಯಲ್ಲಿ ಬೀಡಿ, ಸಿಗರೇಟ್ ಸೇವನೆಗೆ ಅವಕಾಶವಿಲ್ಲ. ಒಂದು ವೇಳೆ ಅಕ್ರಮ ಚಟುವಟಿಕೆ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು, ಮಹಿಳೆಯರಿಗೆ ಪ್ರತ್ಯೇಕ ಶೌಚಗೃಹ ಹಾಗೂ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವಿರುವ ಜನರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net