ಕರೊನಾ ವೈರಸ್ ಹಿನ್ನೆಲೆಯಲ್ಲಿ ಅಂತರಾಜ್ಯಕ್ಕೆ ಬಸ್‌ಗಳ ಸೇವೆ ಕಡಿತ

14-klr-12 KSRTC
Published on

ಕೋಲಾರ: ಕರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ನಿಬಂಧನೆಗಳನ್ನು ವಿಧಿಸಿರುವುದರಿಂದ ಜಿಲ್ಲೆಯಾದ್ಯಂತ ಸಾರ್ವಜನಿಕರು ಸ್ವಯಂ ಎಚ್ಚರಿಕೆಗೆ ಒಳಪಡುತ್ತಿದ್ದಾರೆ.

ಆಟೋ, ಸಾರಿಗೆ, ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸುತ್ತಿದ್ದು, ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ತಿರುಪತಿ, ಚಿತ್ತೂರು, ಹೊಸೂರು, ಚೆನ್ನೈ ಇನ್ನಿತರ ಅಂತರಾಜ್ಯಗಳಿಗೆ ಕೋಲಾರ ಡಿಪೋದಿಂದ ಹೊರಡುವ ಬಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆ ಆಗಬಾರದೆಂದು ಶನಿವಾರ ಮುಂಜಾನೆ ಡಿಪೋದಿಂದ ಕೆಲ ಬಸ್‌ಗಳು ಹೊರಟವಾದರೂ ಸೋಮವಾರದಿಂದ ಹೊರರಾಜ್ಯಗಳಿಗೆ ಬಸ್ ಲಭಿಸುವುದು ಅನುಮಾನ ಎಂದು ಹೆಸರು ಹೇಳಲು ಇಚ್ಛಿಸದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ತಿಳಿಸಿದರು.

ಸಾರಿಗೆ ಬಸ್ ಚಾಲಕ ಮತ್ತು ನಿರ್ವಹಕರು ಸಹ ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರಲ್ಲದೆ, ರಾಜ್ಯ ಸರ್ಕಾರ ಜನರ ಆರೋಗ್ಯ ದೃಷಿಯಿಂದ ನೀಡಿರುವ ಸೂಚನೆಗಳನ್ನು ಪಾಲಿಸಬೇಕೆಂದು ಪ್ರಚಾರ ಮಾಡುತ್ತಿದೆ.

ಮಾಂಸಕ್ಕಿಲ್ಲ ಬೇಡಿಕೆ: ನಗರದಲ್ಲಿ ನೂರಾರು ಮಾಂಸದ ಅಂಗಡಿಗಳಿವೆ. ಹಬ್ಬ ಹರಿದಿನ ಬಿಟ್ಟು ಎಲ್ಲ ಅಂಗಡಿಗಳಲ್ಲಿ ಜೋರು ವ್ಯಾಪಾರ ನಡೆಯುತ್ತದೆ. ಆದರೆ ಕಳೆದ 4 ದಿನಗಳಿಂದ ವ್ಯಾಪಾರ ಕುಸಿದಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಅಂಗಡಿ ತೆರೆಯುವ ನಾವು ವ್ಯಾಪಾರವಿಲ್ಲದೆ ಮಧ್ಯಾಹ್ನದ ನಂತರ ಅಂಗಡಿ ಬಂದ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ನಗರದಲ್ಲಿ ಹೋಟೆಲ್‌ಗಳು ತೆರೆದಿವೆಯಾದರೂ ವ್ಯಾಪಾರ ಕುಸಿದಿದೆ, ಪಾನಿಪುರಿ ಅಂಗಡಿಗಳಲ್ಲಿ ಗಿರಾಕಿಗಳ ಸಂಖ್ಯೆ ಕಡಿಮೆಯಾಗಿದೆ. ದೊಡ್ಡ ಹೋಟೆಲ್‌ಗಳಲ್ಲಿ ವಹಿವಾಟು ಶೇ.30ರಿಂದ 40 ಕಡಿಮೆಯಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಾಲ ಹೆಚ್ಚಾಗುತ್ತದೆ. ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ತೆರೆಯಲಾಗಿದ್ದು ಈವರಗೆ ಯಾವೊಬ್ಬ ರೋಗಿಯೂ ದಾಖಲಾಗಿಲ್ಲ.

ನಗರದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯಕ್ಕೆ ಶನಿವಾರ ನೂರಾರು ಭಕ್ತರು ಬರುತ್ತಾರೆ. ಆದರೆ ಕರೊನಾ ಭಯದಿಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮುಳಬಾಗಿಲು ಪ್ರಸನ್ನ ಆಂಜನೇಯ ದೇವಾಲಯದಲ್ಲೂ ಇದೇ ಸ್ಥಿತಿ ಇತ್ತು.

ದೇವಾಲಯಗಳಲ್ಲಿ ಅನ್ನಪ್ರಸಾದ ರದ್ದು: ಕರೊನಾ ತಡೆಯುವ ಉದ್ದೇಶದಿಂದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾ.13ರಿಂದ ಜಾರಿಗೆ ಬರುವಂತೆ ಚಿಕ್ಕತಿರುಪತಿ ದೇವಾಲಯದಲ್ಲಿ ಭಕ್ತರಿಗೆ ವಿತರಿಸಲಾಗುತ್ತಿದ್ದ ಅನ್ನ ದಾಸೋಹವನ್ನು ವಾರದ ಅವಧಿಗೆ ರದ್ದುಪಡಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶದ ನಡುವೆಯೂ ಶನಿವಾರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net