ಭಾನುವಾರ ಜಾರಿಗೆ ತಂದ ಕರ್ಫ್ಯೂಗೆ ಜಿಲ್ಲಾದ್ಯಂತ ಜನ ಸ್ಪಂದನೆ

24-klr-5 Alternative
Published on

ಕೋಲಾರ: ಕರೊನಾ ಸೋಂಕು ತಹಬದಿಗೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಭಾನುವಾರ ಜಾರಿಗೆ ತಂದ ಲಾಕ್‌ಡೌನ್ ಕರ್ಫ್ಯೂಗೆ ಜಿಲ್ಲೆಯಾದ್ಯಂತ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಹಾಲು, ತರಕಾರಿ, ದಿನಸಿ, ಔಷಧ, ಆಸ್ಪತ್ರೆ ವ್ಯವಸ್ಥೆ ಇದ್ದುದ್ದರಿಂದ ಸಾರ್ವಜನಿಕರ ಜೀವನಕ್ಕೆ ಯಾವುದೇ ಸಮಸ್ಯೆಯಾಗಲಿಲ್ಲ, ನಗರ ಸೇರಿ ಜಿಲ್ಲೆಯ ಇನ್ನಿತರೆಡೆ ಅಲ್ಲೊಂದು ಇಲ್ಲೊಂದು ದ್ವಿಚಕ್ರ ವಾಹನ ಸಂಚಾರ ಹೊರತುಪಡಿಸಿ ಸಾರಿಗೆ ಬಸ್, ಆಟೋ, ಲಾರಿ, ಟೆಂಪೋ ಸೇವೆ ಸ್ತಬ್ಧವಾಗಿತ್ತು.

ಕರೊನಾ ಉಲ್ಬಣದಿಂದಾಗಿ ಕಳೆದ ಮಾರ್ಚ್ 24ರಂದು ಲಾಡ್‌ಡೌನ್ ಘೋಷಣೆ ಮಾಡಲಾಗಿತ್ತು. ಅಂದಿನಿಂದ ಈವರೆಗೆ ಯುಗಾದಿ, ಶ್ರೀರಾಮ ನವಮಿ ಹಬ್ಬವನ್ನೂ ಆಚರಿಸಿದೆ, 8 ಭಾನುವಾರಗಳ ಸಂಭ್ರಮ ಮರೆತು ಲಾಕ್‌ಡೌನ್ ನಡುವೆ ಬದುಕುವುದನ್ನು ಅಭ್ಯಾಸ ಮಾಡಿಕೊಂಡ ಜಿಲ್ಲೆಯ ಜನತೆಗೆ ಹೊಸ ಕರ್ಫ್ಯೂದಿಂದ ದೊಡ್ಡ ನಷ್ಟವೇನು ಉಂಟಾಗಲಿಲ್ಲ. ಆದರೂ ಕಡುಬಡವರು, ನಿರ್ಗತಿಕರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಕೊಂಚ ಮಟ್ಟಿಗೆ ತೊಂದರೆ ಆಗಿದ್ದು ನಿಜ.

ರಂಜಾನ್ ತಯಾರಿಗೆ ಕಡಿವಾಣ: ಸರ್ಕಾರದ ಮಾರ್ಗಸೂಚಿಯನ್ವಯ ರಂಜಾನ್ ಹಬ್ಬವನ್ನು ಮನೆಗಳಲ್ಲಿ ಆಚರಿಸಲು ತಯಾರಿ ಮಾಡಿಕೊಳ್ಳುತ್ತಿದ್ದ ಮುಸ್ಲಿಮರಿಗೆ ಕರೊನಾ ಕರ್ಫ್ಯೂನಿಂದ ನಿರಾಸೆ ಉಂಟಾಯಿತು.

ಹಬ್ಬಕ್ಕಾಗಿ ಹೊಸ ಬಟ್ಟೆ ಹಾಗೂ ವಸ್ತು ಖರೀದಿಸಲು ಜನ ಮೂರ‌್ನಾಲ್ಕು ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದರು. ನಗರದ ಬಹುತೇಕ ಅಂಗಡಿ-ಮುಂಗಟ್ಟು ತುಂಬಿ ತುಳುಕುತ್ತಿದ್ದವು. ಈಗ ಕರ್ಫ್ಯೂನಿಂದ ಆದಾಯ ಹೆಚ್ಚು ಮಾಡಿಕೊಳ್ಳಲಾಗಲಿಲ್ಲ.

ಹಣ್ಣಿನ ವ್ಯಾಪಾರ ಕುಸಿತ:: ಕರೊನಾ ಭೀತಿಯಿಂದ ಹಣ್ಣು ಖರೀದಿಗೆ ಜನ ಮುಂದಾಗಲಿಲ್ಲವಾದ್ದರಿಂದ ವ್ಯಾಪಾರಿಗಳು ನಿರಾಸರಾದರು. ಹೂವಿನ ಬೆಲೆ ಕುಸಿತದಿಂದ ಗ್ರಾಹಕರು ಖುಷಿಯಿಂದ ತಮಗೆ ಬೇಕಾದಷ್ಟು ಹೂವು ಖರೀದಿ ಮಾಡಿದರೆ, ತರಕಾರಿ ಬೆಲೆ ಗಗನಕ್ಕೇರಿತ್ತು. ಕೋಲಾರ ಸೇರಿ ಜಿಲ್ಲೆಯ ಎಲ್ಲ ಎಪಿಎಂಸಿ ಬಂದ್ ಮಾಡಲಾಗಿತ್ತು.

ಮಾಂಸದಂಗಡಿಗಳಲ್ಲಿ ಶನಿವಾರ ಸಂಜೆ 5ಗಂಟೆಯೊಳಗೆ ಮಾಂಸ ಖಾಲಿಯಾಗಿದ್ದರಿಂದ ಭಾನುವಾರ ಬೆಳಗ್ಗೆ 6 ಗಂಟೆಗೆ ಮಾರುಕಟ್ಟೆಯಲ್ಲಿ ಜನಜಂಗುಳಿ ಇತ್ತಾದರೂ ನಗರಸಭೆ ಅಧಿಕಾರಿಗಳು ದಾಳಿ ನಡೆಸುವ ಭಯದಿಂದ ವ್ಯಾಪಾರಿಗಳು 9ಗಂಟೆಯೊಳಗೆ ವ್ಯಾಪಾರ ಮುಗಿಸಿ ಅಂಗಡಿ ಮುಚ್ಚಿ ಮನೆ ಸೇರಿದರು.

ಮಾರುಕಟ್ಟೆ ಬಂದ್: ಕರ್ಫ್ಯೂ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾದ್ಯಂತ ಎಲ್ಲ ಎಪಿಎಂಸಿ ಸಂಪೂರ್ಣ ಬಂದ್ ಆಗಿತ್ತು. ಮಾರುಕಟ್ಟೆ ಬಂದ್ ಬಗ್ಗೆ ಆಡಳಿತ ಮಂಡಳಿ ಮೂರು ದಿನಗಳ ಹಿಂದೆಯೇ ರಜೆ ಘೋಷಿಸಿ ಪ್ರಚಾರ ಮಾಡಿದ್ದರಿಂದ ರೈತರು ತರಕಾರಿ ತಂದಿರಲಿಲ್ಲ. ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯನ್ನೂ ಮುಚ್ಚಲಾಗಿತ್ತು.

ಬಂದೋ ಬಸ್ತ್: ನಗರದ ದೊಡ್ಡಪೇಟೆ, ಕಾಳಮ್ಮಗುಡಿ ಬೀದಿ, ಎಂಜಿ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ದಿನಸಿ ಅಂಗಡಿಗಳನ್ನು ತೆರೆಯಲಾಗಿತ್ತಾದರೂ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳ ಒಪಿಡಿಯಲ್ಲಿ ರೋಗಿಗಳ ಸಂಖ್ಯೆ ಅತ್ಯಂತ ಕಡಿಮೆ ಇತ್ತು. ಮುಂಜಾಗ್ರತಾ ಕ್ರಮವಾಗಿ ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net