

ಕೋಲಾರ: ಕರೊನಾ ಸೋಂಕಿನ ವಿರುದ್ಧ ಹೋರಾಡಲು ಜಿಲ್ಲಾಸ್ಪತ್ರೆ ಸಜ್ಜುಗೊಳ್ಳುತ್ತಿದ್ದು, ಸರ್ಕಾರದ ಅನುದಾನ ಹಾಗೂ ಸಿಎಸ್‌ಆರ್ ನಿಧಿಯಡಿ ಆಸ್ಪತ್ರೆಯಲ್ಲಿ 40 ಐಸಿಯು ಹಾಸಿಗೆ ಹಾಗೂ 35 ವೆಂಟಿಲೇಟರ್ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಗೆ ಶನಿವಾರ ಟಾಟಾ ಗ್ರೂಪ್ ಅಧಿಕಾರಿಗಳ ತಂಡದೊಂದಿಗೆ ಆಸ್ಪತ್ರೆ ವ್ಯವಸ್ಥೆ ಹಾಗೂ ಸಿದ್ಧತೆ ವೀಕ್ಷಿಸಿ ಮಾತನಾಡಿ, ಜಿಲ್ಲಾಸ್ಪತ್ರೆಯು 200 ಹಾಸಿಗೆಗಳ ಕೋವಿಡ್ -19 ಆಸ್ಪತ್ರೆಯಾಗಿ ಸಿದ್ಧಗೊಳ್ಳುತ್ತಿದ್ದು, 40 ಐಸಿಯು ಬೆಡ್‌ಗಳನ್ನು ಒದಗಿಸಲಾಗುವುದು. ಉಳಿದಂತೆ ಅಗತ್ಯವಿರುವ ಸಲಕರಣೆ, ಸೌಲಭ್ಯಗಳನ್ನು ಎರಡ್ಮೂರು ದಿನಗಳಲ್ಲಿ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ಆಸ್ಪತ್ರೆಯನ್ನು ಸುಸೂತ್ರವಾಗಿ ನಿರ್ವಹಿಸಲು ಹೊರಗುತ್ತಿಗೆಯಲ್ಲಿ ವೈದ್ಯ, ಸಿಬ್ಬಂದಿ ನೇಮಿಸಲು ಅವಕಾಶವಿದ್ದರೆ ನೇಮಕ ಮಾಡಿಕೊಳ್ಳಲಾಗುವುದು. ಇಲ್ಲವಾದಲ್ಲಿ ಜಿಲ್ಲೆಯಲ್ಲಿರುವ 81 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಹಾಗೂ ಟಾಟಾ ಗ್ರೂಪ್‌ನ ಅಧಿಕಾರಿಗಳ ತಂಡಕ್ಕೆ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಎಸ್.ಜಿ. ನಾರಾಯಣಸ್ವಾಮಿ ಕೋವಿಡ್ ವಾರ್ಡ್‌ಗಳ ಸಿದ್ಧತೆ, ಇರುವ ಸೌಲಭ್ಯಗಳನ್ನು ಪರಿಚಯಿಸಿದರಲ್ಲದೆ ಕೋವಿಡ್ ಆಸ್ಪತ್ರೆಯಾಗಿ 200 ಹಾಸಿಗೆ ಸಿದ್ಧಗೊಂಡರೆ ಆಸ್ಪತ್ರೆಗೆ ಹೆಚ್ಚುವರಿಯಾಗಿ ಅಗತ್ಯವಿರುವ ಸೌಲಭ್ಯಗಳ ಕುರಿತು ತಂಡದ ಗಮನಕ್ಕೆ ತಂದರು.
ಜತೆಗೆ 200 ಹಾಸಿಗೆಗಳಿರುವ ಕೊಠಡಿಗಳನ್ನು ಪ್ರತ್ಯೇಕಿಸಿ ಅವುಗಳಿಗೆ ಸುಣ್ಣ, ಬಣ್ಣ ಬಳಿಯುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ಸಮರ್ಥವಾಗಿ ನಿಭಾಯಿಸುವ ಮೂಲಕ ಖಾಸಗಿ ಆಸ್ಪತ್ರೆಗಳ ಅಸಹಾಕಾರಕ್ಕೆ ತಕ್ಕ ಉತ್ತರ ನೀಡಲು ಸಿದ್ಧತೆೆ ನಡೆಸಲಾಗಿದೆ ಎಂದು ವಿವರಿಸಿದರು.
ಡಿಎಚ್‌ಒ ಡಾ.ಎಸ್.ವಿ.ವಿಜಯಕುಮಾರ್, ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ಅಗತ್ಯವಸ್ತು ಲಭ್ಯ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಭಾನುವಾರ ಸಂಪೂರ್ಣ ಲಾಕ್‌ಡೌನ್ ಸಂಬಂಧ ಕ್ರಮವಹಿಸಲಾಗಿದೆ. ಈಗಾಗಲೇ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಯಾಗಿದೆ. ಈ ಲಾಕ್‌ಡೌನ್ ಮೊದಲಿನಂತೆಯೇ ಇರಲಿದ್ದು, ತರಕಾರಿ, ಹಾಲು, ಮಾಂಸ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಸ್ವಷ್ಟಪಡಿಸಿದರು.
ಮಾವು ವಹಿವಾಟು ಬಗ್ಗೆ ಸರ್ಕಾರಕ್ಕೆ ಮಾಹಿತಿ: ಮಾವು ಮಾರುಕಟ್ಟೆಗೆ ಶ್ರೀನಿವಾಸಪುರ ಎಪಿಎಂಸಿಯಲ್ಲಿ ಅವಕಾಶ ಕಲ್ಪಿಸುವ ಸಂಬಂಧ ಡಿಸಿ ಸತ್ಯಭಾಮ ಮಾತನಾಡಿ, ಮಾವು ವಹಿವಾಟಿಗೆ ಅವಕಾಶ ನೀಡಬಾರದೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್ ಸೂಚಿಸಿದ್ದಾರೆ. ವಹಿವಾಟಿನಿಂದ ಆಗುವ ಅನಾಹುತದ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಉಸ್ತುವಾರಿ ಕಾರ್ಯದರ್ಶಿಗಳ ನಿರ್ದೇಶನದಂತೆ ಜಿಲ್ಲಾಡಳಿತ ಕ್ರಮವಹಿಸಲಿದೆ ಎಂದು ತಿಳಿಸಿದರು.