ಮಂಡ್ಯ ಮೂಲದ ವ್ಯಕ್ತಿಗೆ ಕರೊನಾ ಸೋಂಕು ದೃಢ

15-klr-11
Published on

ಕೋಲಾರ: ನಗರದ ಮುನ್ಸಿಫ್ ಕೋರ್ಟ್‌ನಲ್ಲಿ ಗುಮಾಸ್ತನಾಗಿರುವ ಮಂಡ್ಯ ಮೂಲದ ವ್ಯಕ್ತಿಯಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ಮೂರು ವರ್ಷಗಳಿಂದ ಕೋರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಮದ್ದೂರು ತಾಲೂಕಿನ ವ್ಯಕ್ತಿ ಇಲ್ಲಿನ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು.

ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಹೋಗಿದ್ದ ಇವರು ನ್ಯಾಯಾಲಯ ಸಿಬ್ಬಂದಿ ಮೇ 11ರಿಂದ ಕೆಲಸಕ್ಕೆ ಹಾಜರಾಗಬೇಕೆಂದು ಹೈಕೋರ್ಟ್ ಸೂಚಿಸಿದ್ದರಿಂದ ಕೋಲಾರಕ್ಕೆ ಬಂದಿದ್ದರು. 12ರಂದು ಹೊರಗಿನಿಂದ ಬಂದಿರುವವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ನ್ಯಾಯಾಧೀಶರು ಸೂಚಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದರು. ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಏಕಾಏಕಿ ಊರಿಗೆ ವಾಪಸಾಗಲು ಕೋಲಾರದಿಂದ ದಿಢೀರ್ ನಾಪತ್ತೆಯಾಗಿದ್ದರು.

ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೇ ಇಲ್ಲಿಂದ ತಂಡವೊಂದು ಬೆಂಗಳೂರಿನತ್ತ ಸಾಗಿದಾಗ ಸೋಂಕಿತ ಬನಶಂಕರಿ ಬಳಿ ಪತ್ತೆಯಾಗಿದ್ದು, ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಕೋಲಾರದ ಗಾಂಧಿನಗರದಲ್ಲಿ ಬಾಡಿಗೆಗೆ ಇದ್ದ ಮನೆ ಮಾಲೀಕ ಸೇರಿ ಐದು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಅಕ್ಕಪಕ್ಕದ ಮನೆಯವರನ್ನೂ ನಿರ್ಬಂಧಿಸಲಾಗಿದೆ. ಈತ ಕೋಲಾರಕ್ಕೆ ಬಂದಿದ್ದಾಗ ಊಟಕ್ಕಾಗಿ ಮೆಸ್‌ಗಳಿಗೆ ಓಡಾಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಗಾಂಧಿನಗರ ಸೀಲ್‌ಡೌನ್: ಗುಮಾಸ್ತ ಮಂಡ್ಯದಿಂದ ಬಂದ ನಂತರ ಕೋಲಾರದ ಗಾಂಧಿನಗರದಲ್ಲಿರುವ ಬಾಡಿಗೆ ಮನೆಗೆ ಬಂದಿದ್ದರಲ್ಲದೆ, ಸ್ನೇಹಿತರನ್ನು ಭೇಟಿಯಾಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಅವರು ವಾಸವಾಗಿದ್ದ ಪ್ರದೇಶವನ್ನು ಪೊಲೀಸರು ಸೀಲ್‌ಡೌನ್ ಮಾಡಿದ್ದಾರೆ.

ಸ್ವಚ್ಛತಾ ಕಾರ್ಯ ಆರಂಭ: ಕೋಲಾರ ನಗರಕ್ಕೂ ಕರೊನಾ ಪ್ರವೇಶವಾಗಿರುವುದರಿಂದ ಜನ ಭಯಭೀತರಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರಸಭೆಯಿಂದ ಸೋಂಕು ಹರಡದಂತೆ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ, ಗಾಂಧಿನಗರ, ಟಮಕ, ಕೋರ್ಟ್ ಸರ್ಕಲ್, ಮಣಿಘಟ್ಟ ರಸ್ತೆಯಲ್ಲಿ ಜನ ಜಂಗುಳಿ ತಡೆಯಲು ಹಾಗೂ ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವವರನ್ನು ನಿಯಂತ್ರಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net