ಮುಳಬಾಗಿಲಿನಲ್ಲಿ ಒಂದೇ ದಿನ 5 ಮಂದಿಗೆ ಸೋಂಕು, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು

12 mbl ph 1a
Published on

ಮುಳಬಾಗಿಲು: ಲಾಕ್‌ಡೌನ್ ಸಡಿಲಿಕೆ ನಡುವೆಯೂ ಹಸಿರು ವಲಯವಾಗಿಯೇ ಉಳಿದಿದ್ದ ಕೋಲಾರಕ್ಕೂ ಕರೊನಾ ಲಗ್ಗೆ ಇಟ್ಟಿದೆ. ಮುಳಬಾಗಿಲಿನ 5 ಮಂದಿಗೆ ಸೋಂಕು ದೃಢಪಟ್ಟಿದ್ದು, ನೆಮ್ಮದಿಯಲ್ಲಿದ್ದ ಜನರಲ್ಲಿ ಆತಂಕ ಹೆಚ್ಚಾಗಿದೆ.

ಮುಳಬಾಗಿಲು ನಗರದ ಬುಸಾಲಕುಂಟೆಯ 70 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಇವರು ಬೆಂಗಳೂರಿನ ಜೆ.ಪಿ.ನಗರದ ಮನೆಯೊಂದರಲ್ಲಿ ಇದ್ದರು. ಲಾಕ್‌ಡೌನ್ ಸಡಿಲಗೊಂಡ ನಂತರ ಇತ್ತೀಚೆಗೆ ಮುಳಬಾಗಿಲಿಗೆ ಆಗಮಿಸಿದ್ದರು. ಮೇ 7ರಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಈಗ ಸೋಂಕು ದೃಢಪಟ್ಟಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರೋಗಿಯ ಮನೆ ಸುತ್ತಮುತ್ತ 100 ಮೀಟರ್ ಅಂತರದ ಮನೆಗಳನ್ನು ಖಾಲಿ ಮಾಡಿಸಿ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ.

ಎಚ್.ಗೊಲ್ಲಹಳ್ಳಿ ಪಂಚಾಯಿತಿಯ (ಆಂಧ್ರ ಗಡಿಗೆ ಹೊಂದಿಕೊಂಡಿರುವ ರಾಮಸಮುದ್ರ ರಸ್ತೆ) ವಿ.ಹೊಸಹಳ್ಳಿಯ 25 ವರ್ಷದ ವಿದ್ಯಾರ್ಥಿನಿಗೆ ಸೋಂಕು ದೃಢಪಟ್ಟಿದೆ. ಈಕೆ ಬೀದರ್ ಜಿಲ್ಲೆಯ ಹುಮ್ನಾಬಾದ್‌ನಿಂದ ಇತ್ತೀಚೆಗೆ ಆಗಮಿಸಿದ್ದಳು. ಚಾಲಕರಾದ ತಾಯಲೂರು ಹೋಬಳಿಯ ಬೆಳಗಾನಹಳ್ಳಿ ಗ್ರಾಮದ 45 ಮತ್ತು 43 ವರ್ಷದ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಇವರು ಒರಿಸ್ಸಾದಿಂದ ಇತ್ತೀಚೆಗೆ ಆಗಮಿಸಿದ್ದರು. ಪಕ್ಕದ ಬೈರಸಂದ್ರದ 42 ವರ್ಷದ ವ್ಯಕ್ತಿ ಚೆನ್ನೈನ ಟಿ.ನಗರದಿಂದ ಸ್ವಗ್ರಾಮಕ್ಕೆ ಆಗಮಿಸಿದ್ದು, ಇವರಿಗೂ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನೂ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಭೇಟಿ: ಆರೋಗ್ಯ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಕರೊನಾ ಸೇನಾನಿಗಳೊಂದಿಗೆ ತೆರಳಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ರೋಗಿಗಳನ್ನು ಜಾಲಪ್ಪ ಆಸ್ಪತ್ರೆಗೆ ಸಾಗಿಸಿದರು.

ತಹಸೀಲ್ದಾರ್ ಕೆ.ಎನ್.ರಾಜಶೇಖರ್, ಸಿಪಿಐ ಎಸ್.ಟಿ.ಮಾರ್ಕೊಂಡಯ್ಯ, ಡಿಎಚ್‌ಒ ಡಾ.ಎಸ್.ಎನ್. ವಿಜಯಕುಮಾರ್ ಕರೊನಾ ನೋಡಲ್ ಅಧಿಕಾರಿ ಡಾ.ಚಾರಿಣಿ, ಟಿಎಚ್‌ಒ ಡಾ.ಕೆ.ಎಂ.ವರ್ಣಶ್ರೀ, ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಜಿ.ಎಸ್.ವೇಣುಗೋಪಾಲ್, ಪೌರಾಯುಕ್ತ ಜಿ.ಶ್ರೀನಿವಾಸಮೂರ್ತಿ, ತಾಪಂ ಇಒ ಕೆ.ಎಂ.ಬಾಬು ಮತ್ತಿತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net