ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆಗಳ ಉದ್ಘಾಟನೆ

corol
Published on

ಕುಶಾಲನಗರ:

ದೇಶದಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದ್ದು ಶಾಂತಿ, ಸಹನೆ - ಸಹಬಾಳ್ವೆ ದೂರವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಿಷಾದ ವ್ಯಕ್ತಪಡಿಸಿದರು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಹಾಗೂ ಕುಶಾಲನಗರ ಮತ್ತು ಕೂಡಿಗೆಯ ಪವಿತ್ರ ಕುಟುಂಬ ದೇವಾಲಯದ ವತಿಯಿಂದ ಸ್ಥಳೀಯ ಅಂಜೆಲಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಶಾಂತಿ, ಪ್ರೀತಿ, ಸಾಮರಸ್ಯ ಎಲ್ಲಾ ಧರ್ಮಗಳ ಧ್ಯೇಯವಾಗಿದೆ. ಆದರೆ, ಇತ್ತೀಚಿನ ದಶಕಗಳಲ್ಲಿ ಎಲ್ಲೆಡೆ ದ್ವೇಷ ಹಾಗೂ ಅಸೂಯೆ ಹೆಚ್ಚಾಗುತ್ತಿದೆ. ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಕೇವಲ ಶೇ.2.85 ರಷ್ಟು ಜನಸಂಖ್ಯೆ ಇರುವ ಕ್ರಿಶ್ಚಿಯನ್ ಸಮುದಾಯ ಶೇ.97 ರಷ್ಟಿರುವ ಇತರೆ ಎಲ್ಲಾ ಸಮುದಾಯಗಳಿಗಿಂತಾ ಹೆಚ್ಚಾಗಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಪ್ರಮಾಣದಲ್ಲಿ ಸೇವೆ ಸಲ್ಲಿಸಿದೆ. ಕಡಿಮೆ ಜನಸಂಖ್ಯೆ ಇರುವ ನಮ್ಮ ಜನರಲ್ಲಿಗೆ ತೆರಳಿ ಅವರನ್ನು ಹುರಿದುಂಬಿಸಿ ಅವರಿಗೆ ಧೈರ್ಯವನ್ನು ತುಂಬುವ ಮೂಲಕ ಅವರ ಬೆಳವಣಿಗೆಗೆ ಪೂರಕವಾಗಿ ಬೇಕಾಗುವ ಎಲ್ಲಾ ಸವಲತ್ತುಗಳನ್ನು ಒದಗಿಸುವುದು ನನ್ನ ಆದ್ಯತೆಯಾಗಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಗತ್ಯ ಇರುವ ಸೌಕರ್ಯಗಳನ್ನು ಒದಗಿಸಲಾಗುವುದು.

ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿರುವ ಹೊತ್ತಿನಲ್ಲಿ ಕೊಡಗಿನ ಸಮುದಾಯ ಬಾಂಧವರು ಒಂದೆಡೆ ಸೇರಿರುವುದು ಸಂತಸದ ವಿಚಾರ. ಯಾವುದೇ ಹಬ್ಬಗಳು ಹಾಗೂ ಆಚರಣೆಗಳು ಆಯಾಯ ಧರ್ಮಗಳ ಜನರನ್ನು ಒಂದೆಡೆ ಸೇರಿಸುವ ಹಾಗೂ ಜನಾಂಗ ಬಾಂಧವರಲ್ಲಿ ಒಗ್ಗಟ್ಟು ಮೂಡಿಸುವ ಆಚರಣೆಗಳಾಗಿವೆ. ಕ್ರಿಶ್ಚಿಯನ್ ಸಮುದಾಯ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವತ್ತ ಮುಂದಾಗಬೇಕು ಎಂದರು.

ಮೈಸೂರು ಧರ್ಮಕ್ಷೇತ್ರದ ಮಹಾ ಧರ್ಮಾಧ್ಯಕ್ಷ ಡಾ. ಬರ್ನಾಡ್ ಮೊರಸ್ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಭೂಲೋಕಕ್ಕೆ ಏಸು ಆಗಮನ ಆಗುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಧರ್ಮೀಯ ಜನರು ಒಂದೆಡೆ ಸೇರಿ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ ನಡೆಸುವ ಮೂಲಕ ದೇವರನ್ನು ಸ್ತುತಿಸುತ್ತಿರುವುದು ಸಂತಸದ ಸಂಗತಿಯಾಗಿದೆ.

ಮಹಾ ದೈವ ಏಸು ಎಲ್ಲರ ಹೃದಯಕ್ಕೂ ಆಗಮಿಸುವ ಮೂಲಕ ಸಮಾಜದಲ್ಲಿ ಶಾಂತಿ, ಪ್ರೀತಿ ಹಾಗೂ ಸಹಬಾಳ್ವೆಯ ಬದುಕು ಕಾಣಲಿ ಎಂದರು.

ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎ. ಪೀಟರ್ ಅಧ್ಯಕ್ಷತೆ ವಹಿಸಿದ್ದರು. ಕೂಡಿಗೆಯ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ಚಾರ್ಲ್ಸ್ ನೊರೋನ್ಹ, ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ಎಂ.ಮಾರ್ಟಿನ್, ಕೂಡಿಗೆ ಅಂಜೆಲಾ ವಿದ್ಯಾಸಂಸ್ಥೆಯ ಸಿಸ್ಟರ್ ರೇಖಾ, ಕುಶಾಲನಗರ ಹೋಲಿ ಸ್ಪಿರಿಟ್ ಶಾಲೆಯ ಸುಪೀರಿಯರ್ ಸ್ಪಂದನ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ, ಪ್ರಧಾನ ಕಾರ್ಯದರ್ಶಿ ಜೂಡಿವಾಸ್, ಉಪಾಧ್ಯಕ್ಷ ಪ್ರಾನ್ಸಿಸ್ ಡಿಸೋಜಾ, ಎ.ಜಿ.ಏಸುದಾಸ್, ರೋಮನ್ ಕ್ಯಾಥೋಲಿಕ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜೆ.ಫಿಲೋಮಿನಾ, ಕಾರ್ಯದರ್ಶಿ ಜಾನ್ಸಿ ಪೀಟರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ಲೋಬೋ, ಕಾರ್ಯದರ್ಶಿ ಕಿರಣ್, ಸೋಮವಾರಪೇಟೆ ಘಟಕದ ಅಧ್ಯಕ್ಷ ಡೆನ್ಜಿಲ್ ವರ್ಗೀಸ್, ಮಡಿಕೇರಿ ಘಟಕದ ಅಧ್ಯಕ್ಷ ಎ.ಜಿ.ಸೆಬಾಸ್ಟಿನ್, ವಿರಾಜಪೇಟೆ ಘಟಕದ ಅಧ್ಯಕ್ಷ ಅಂಥೋಣಿ ರಾಬಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net