ಮೂಲೆ ಸೇರಿದ ಇ-ಟಾಯ್ಲೆಟ್, ಆಧುನಿಕ ಟಾಯ್ಲೆಟ್‌ನ ನಿರ್ವಹಣೆಯೂ ಇಲ್ಲ-ತೆರವೂ ಮಾಡಿಲ್ಲ

mng-june2-e toilet
ಸಮರ್ಪಕ ನಿರ್ವಹಣೆಯಾಗದೆ ಪಾಳುಬಿದ್ದ ಸ್ಥಿತಿಯಲ್ಲಿ ಮಂಗಳೂರು ಕೇಂದ್ರಭಾಗವಾದ ಲಾಲ್‌ಬಾಗ್ ಸಮೀಪದ ಇ-ಟಾಯ್ಲೆಟ್.
Published on

ಶ್ರವಣ್‌ಕುಮಾರ್ ನಾಳ, ಮಂಗಳೂರು

ದ.ಕ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಜಾರಿಗೆ ಬಂದ ಇ-ಟಾಯ್ಲೆಟ್ ವ್ಯವಸ್ಥೆಯು ನಿರ್ವಹಣೆಯ ಕೊರತೆಯಿಂದ ಸಂಪೂರ್ಣವಾಗಿ ಈಗ ಮೂಲೆ ಸೇರಿದೆ. ನಗರದ ಎಲ್ಲಾ ಇ ಟಾಯ್ಲೆಟ್ ಬಳಕೆಯಾಗದೆ ಕೆಲವು ವರ್ಷಗಳೇ ಕಳೆದಿದೆ. ನಿಂತ ಜಾಗದಲ್ಲಿ ಹಾಗೆಯೇ ಇದೆ. ಬಳಕೆಯೂ ಇಲ್ಲ-ನಿರ್ವಹಣೆಯೂ ಇಲ್ಲ-ತೆರವೂ ಮಾಡಿಲ್ಲ!

ಸ್ವಚ್ಚ ಹಾಗೂ ಸುಂದರ ಮಂಗಳೂರು ಯೋಜನೆಯಡಿಯಲ್ಲಿ ಮಂಗಳೂರಿಗೆ ಪರಿಚಯಿಸಲಾದ ಇ ಟಾಯ್ಲೆಟ್‌ನ ಬಳಕೆ-ನಿರ್ವಹಣೆ ಆಗದೆ ನಿಷ್ಪ್ರಯೋಜಕವಾಗಿ ಈಗ ನಿಂತ ಸ್ಥಿತಿಯಲ್ಲಿದೆ. ಈ ಹಿಂದೆ ಮಂಗಳೂರಿನಲ್ಲಿದ್ದ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವ ಸಂದರ್ಭ ರಿಪೇರಿ ಮಾಡುವುದೇ ಕಷ್ಟ ಎಂಬ ಸ್ಥಿತಿಗೆ ತಲುಪಿದಾಗ ಮಂಗಳೂರಿನಲ್ಲಿ ಇ-ಟಾಯ್ಲೆಟ್ ಎಂಬ ಪರಿಕಲ್ಪನೆ ಜಾರಿಗೆ ಬಂದಿತ್ತು. ಲಾಲ್‌ಬಾಗ್ ಸಮೀಪ 2, ಕದ್ರಿ ಪಾರ್ಕ್‌ನ ಮುಂಭಾಗ 2, ಎಕ್ಕೂರಿನಲ್ಲಿ 2, ಸುರತ್ಕಲ್‌ನಲ್ಲಿ 2, ಹಂಪನಕಟ್ಟೆಯಲ್ಲಿ 1 ಇ ಟಾಯ್ಲೆಟ್ ಸ್ಥಾಪನೆ ಆಗಿ ಕೆಲವು ತಿಂಗಳು ಬಳಕೆಯೂ ಆಗಿತ್ತು. ಬಳಿಕ ಒಂದೊಂದೇ ತಾಂತ್ರಿಕ ಸಮಸ್ಯೆ ಎದುರಾಗಿ, ಜನರ ಬಳಕೆಯೂ ಕಡಿಮೆಯಾಗಿ, ನಿರ್ವಹಣೆಯೂ ಇಲ್ಲದಾಗಿ ಸದ್ಯ ಇ ಟಾಯ್ಲೆಟ್ ಗಬ್ಬೆದ್ದು ಹೋಗುವ ಸ್ಥಿತಿಗೆ ಬಂದಿದೆ.

*ಅಪರಿಚಿತ ಶೌಚಾಲಯ

ಇ-ಟಾಯ್ಲೆಟ್‌ಗಳ ಬಳಕೆ ಬಗ್ಗೆ ಸಾರ್ವಜನಿಕರಿಗೆ ಪೂರ್ಣ ಮಾಹಿತಿ ಇಲ್ಲದ ಕಾರಣದಿಂದ ಇದರ ಪೂರ್ಣ ಉಪಯೋಗ ಆಗಿಲ್ಲ. ಇವು ಅಪರಿಚಿತ ಶೌಚಾಲಯ ಮಾದರಿಯಂತೆ ಕಂಡುಬಂತು. ನಾಣ್ಯವನ್ನು ಹಾಕಿ ಶೌಚಾಲಯ ಬಳಕೆ ಮಾಡುವ ತಾಂತ್ರಿಕ ಮಾಹಿತಿ ಜನರಿಗೆ ಸರಿಯಾಗಿ ಲಭ್ಯವಾಗಿಲ್ಲ. ನಾಣ್ಯ ಹಾಕದಿದ್ದರೆ ಇದರ ಬಾಗಿಲು ಕೂಡ ತೆರೆಯಲು ಆಗುವುದಿಲ್ಲ. ಇದು ಗೊತ್ತಾಗದೆ ಕೆಲವರು ಬಾಗಿಲನ್ನು ಹಿಡಿದು ಎಳೆದಾಡಿದ್ದೂ ಇದೆ. ಸಾಮಾನ್ಯ ಶೌಚಾಲಯ ಮಾದರಿಯಲ್ಲಿ ಇವು ಇಲ್ಲದ ಕಾರಣದಿಂದ ಅವುಗಳ ಬಳಕೆ ಬಗ್ಗೆ ಜನರು ಆಸಕ್ತಿ ತೋರಿಸಿಲ್ಲ.

-----------------------

ಶೌಚಾಲಯ ಬಹುದೊಡ್ಡ ಸಮಸ್ಯೆ

ಮಂಗಳೂರಿನಲ್ಲಿ ಶೌಚಾಲಯ ಎಂಬುದು ಬಹುದೊಡ್ಡ ಸಮಸ್ಯೆ. ಬೇಕಾದಲ್ಲಿ ಇಲ್ಲ-ಇರುವಲ್ಲಿ ಅದು ಸರಿಯಿರಲ್ಲ. ಸ್ಟೇಟ್‌ಬ್ಯಾಂಕ್, ಜ್ಯೋತಿ ಸಹಿತ ವಿವಿಧ ಕಡೆಯಲ್ಲಿರುವ ಶೌಚಾಲಯ ನಿರ್ವಹಣೆಯೇ ಆಗುತ್ತಿಲ್ಲ. ಇನ್ನೊಂದೆಡೆ ನಂತೂರು, ಮಾರ್ಕೆಟ್ ರಸ್ತೆ, ಕೆಪಿಟಿ ಜಂಕ್ಷನ್, ಕೊಟ್ಟಾರ ಚೌಕಿ, ಪಿ.ವಿ.ಎಸ್, ಕದ್ರಿ ಮಲ್ಲಿಕಟ್ಟೆ, ಹಂಪನಕಟ್ಟೆ, ಅತ್ತಾವರ, ಕಂಕನಾಡಿ, ಲಾಲ್‌ಬಾಗ್ ಹೀಗೆ ಹಲವು ಜಾಗದಲ್ಲಿ ಶೌಚಾಲಯವೇ ಇಲ್ಲ. ಈಭಾಗದಲ್ಲಿ ಹಲವಡೆ ಸಾರ್ವಜನಿಕವಾಗಿ ಮಲಮೂತ್ರ ವಿಸರ್ಜನೆಯಾಗುತ್ತಿದ್ದರೂ ಸ್ಥಳಿಯಾಡಳಿತ ಇಲ್ಲಿ ಇಂದೇ ಒಂದು ಶೌಚಾಲಯವನ್ನೂ ನಿರ್ಮಸಿಲ್ಲ. ಈ ಕಾರಣಕ್ಕಾಗಿ ಹಲವು ಭಾಗದ ಪರಿಸರಗಳು ದುರ್ನಾಥ ಬೀರುತ್ತಿವೆ.

------------------------

ಇ-ಟಾಯ್ಲೆಟ್‌ನ ಬಳಕೆ ಹೇಗೆ ಎಂಬುವುದೇ ಹಲವು ಸಾರ್ವಜನಿಕರಿಗೆ ತಿಳಿದಿಲ್ಲದ ಕಾರಣ ಹಲವಡೆ ಇದರ ಬಾಗಿಲು, ನೀರಾವರಿ ವ್ಯವಸ್ಥೆ ಹಾಳಾಗಿದೆ. ಇದರ ನಿರ್ವಹಣೆಗೆ ಪಾಲಿಕೆ ಈ ಹಿಂದೆ ಅಲ್ಪ ಮೊತ್ತ ವಿನಿಯೋಗಿಸಿದರೂ ನಂತರ ಸಾರ್ವಜನಿಕರು ಇ-ಟಾಯ್ಲೆಟ್ ಬಳಕೆ ಕಡಿಮೆ ಮಾಡಿದ್ದರು. ಪ್ರಸ್ತುತ ಇ-ಟಾಯ್ಲೆಟ್ ಬಳಕೆ ಕಡಿಮೆಯಾಗಿದ್ದರಿಂದ ಪಾಳುಬಿದ್ದ ಸ್ಥಿತಿಯಲ್ಲಿದೆ. ನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು.

ಆನಂದ್, ಕಮಿಷನರ್, ಮನಪಾ ಮಂಗಳೂರು

----------------------------

ಮಂಗಳೂರಿನಲ್ಲಿ ಶೌಚಾಲಯ ಎಂಬುದು ಬಹುದೊಡ್ಡ ಸಮಸ್ಯೆ ಹೋಗಲಾಡಿಸಲು ಜಿಲ್ಲೆಯಲ್ಲೇ ಮೊದಲಬಾರಿಗೆ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆಧುನಿಕ ಟಾಯ್ಲೆಟ್ ಆದ ಇ-ಟಾಯ್ಲೆಟ್ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ ಇದರ ನಿರ್ವಹಣೆಯಾಗುತ್ತಿಲ್ಲ. ಪಾಲಿಕೆ ಸಭೆಯಲ್ಲಿ ಈಬಗ್ಗೆ ಹಲವು ಬಾರಿ ಚರ್ಚೆ ಆಗಿದೆ. ಈಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net