

ಸಿಂಧನೂರು: ಹಿಂಗಾರು ಹಂಗಾಮಿನ ಜೋಳ ಖರೀದಿ ಪ್ರಮಾಣ ಹೆಚ್ಚಿಸಬೇಕೆಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೋಳ ಕಟಾವು ಮಾಡಿ ಮೂರು ತಿಂಗಳು ಕಳೆದರೂ ಖರೀದಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಮುಂಗಾರು ಹಂಗಾಮಿನಲ್ಲೂ ಸಮಸ್ಯೆಯಾಗಿದ್ದು, ಇದೀಗ ಹಿಂಗಾರಿನ ಜೋಳ ಖರೀದಿಗೂ ಮಿತಿ ಹೇರಲಾಗಿದೆ. ಜೋಳ ಖರೀದಿ ಕೇಂದ್ರದಲ್ಲಿ ಕೇವಲ 80 ಸಾವಿರ ಕ್ವಿಂಟಾಲ್ ಜೋಳ ಖರೀದಿಗೆ ಅವಕಾಶ ನೀಡಿರುವುದರಿಂದ ಸಮಸ್ಯೆಯಾಗಿದೆ.
ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ಲಕ್ಷ ಕ್ವಿಂಟಾಲ್ ಜೋಳ ಖರೀದಿಗೆ ಅವಕಾಶ ನೀಡಲಾಗಿದೆ. ಸರ್ಕಾರ ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಜೋಳ ಖರೀದಿ ಕೇಂದ್ರಗಳ ಗೋದಾಮುಗಳ ಹತ್ತಿರ ಗ್ರೇಡರ್‌ಗಳು ವಿನಾಕಾರಣ ಕಿರಿಕಿರಿ ಮಾಡುತ್ತಿದ್ದು, ಕ್ರಮಕೈಗೊಳ್ಳಬೇಕು. ಏ.21ರೊಳಗೆ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ಗ್ರಾಪಂ ಮಾಜಿ ಅಧ್ಯಕ್ಷ ಚನ್ನನಗೌಡ ಬನ್ನಿಗನೂರು, ಅನ್ನದಾತ ರೈತ ಸಂಘದ ಅಧ್ಯಕ್ಷ ನಾಗನಗೌಡ ಪೋತ್ನಾಳ, ಚನ್ನಯ್ಯಸ್ವಾಮಿ ಬನ್ನಿಗನೂರು, ಬಸವರಾಜ ಬನ್ನಿಗನೂರು, ಹುಸೇನಪ್ಪ ನಾಯಕ ಇದ್ದರು.