ಜೋಳದ ಸಬ್ಬೆ, ಹುಲ್ಲಿನ ಬಣವೆ ಭಸ್ಮ

IMG20250310144219
ಸೊಂಪುರ ಗ್ರಾಮದಲ್ಲಿ ದನಕರುಗಳ ಮೇವಿಗೆಂದು ಸಂಗ್ರಹಿಸಿಟ್ಟಿದ್ದ ಜೋಳದ ಸಬ್ಬೆ ಹಾಗೂ ಭತ್ತದ ಹುಲ್ಲಿನ ಮೆದೆಗೆ ಬೆಂಕಿ ತಗುಲಿ ಹಾನಿಯಾಗಿರುವುದು.
Published on

ಆಲೂರು: ಸೊಂಪುರ ಗ್ರಾಮದಲ್ಲಿ ದನಕರುಗಳ ಮೇವಿಗೆಂದು ಸಂಗ್ರಹಿಸಿಟ್ಟಿದ್ದ ಜೋಳದ ಸಬ್ಬೆ ಹಾಗೂ ಭತ್ತದ ಹುಲ್ಲಿನ ಬಣವೆಗೆ ಸೋಮವಾರ ಬೆಂಕಿ ತಗುಲಿ ಭಸ್ಮವಾಗಿದೆ.

ಆಲೂರು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆ ಸೇರಿದ ಸೋಂಪುರ ಗ್ರಾಮದ ಸಮೀಪದಲ್ಲಿರುವ ನಂಜದೇವರ ಕಾವಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸಮೀಪದಲ್ಲಿದ್ದ ಸೊಂಪುರ ಗ್ರಾಮದ ಕೃಷಿಕರಾದ ನಟರಾಜ್, ಪುಟ್ಟರಾಜು, ಉಮೇಶ್ ಎಂಬುವರು ತಮ್ಮ ಜಮೀನಿನಲ್ಲಿ ಕಟಾವು ಮಾಡಿ ದನಕರುಗಳಿಗೆಂದು ಸಂಗ್ರಹಿಸಿಟ್ಟಿದ್ದ ಜೋಳದ ಸೆಬ್ಬೆಗೆ ಹಾಗೂ ಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಮೊದಲು ನಂಜದೇವರ ಕಾವಲಿನಲ್ಲಿ ಕಾಣಿಸಿಕೊಂಡ ಬೆಂಕಿ ಸೋಂಪುರದ ನಟರಾಜು ಅವರ ಜೋಳದ ಸೆಬ್ಬೆಗೆ ಆವರಿಸಿತು. ನಂತರ ಪುಟ್ಟರಾಜು ಅವರಿಗೆ ಸೇರಿದ ಜೋಳದ ಸಬ್ಬೆಗೆ ಹಾಗೂ ಅವರ ಹೊಲಕ್ಕೂ ವ್ಯಾಪಿಸಿ ಬೆಂಕಿಗೆ ಆಹುತಿಯಾಗುತ್ತಿದ್ದಂತೆಯೇ ಸಮೀಪದಲ್ಲೇ ಉಮೇಶ್ ಅವರು ಭತ್ತದ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಮೇದೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಯಿತು. ಅಲ್ಲದೆ ನೀರಿನ ಪೈಪ್‌ಗಳು ಬೆಂಕಿಗಾಹುತಿಯಾದವು.

ಬಿಸಿಲಿನ ತಾಪಕ್ಕೆ ನಂಜದೇವರು ಕಾವಲಿನಲ್ಲಿ ಬೆಳೆದಿದ್ದ ಸುಮಾರು 50ಕ್ಕೂ ಹೆಚ್ಚು ಗಿಡ-ಮರಗಳು ಸುಟ್ಟು ಕರುಕಲಾಗಿವೆ.

ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ಇಲ್ಲದಿರುವುದರಿಂದ ಸೊಂಪುರ ಗ್ರಾಮದ ಸಮೀಪದ ನಂಜದೇವರ ಕಾವಲಿನಲ್ಲಿ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಾಗ ಅಕ್ಕಪಕ್ಕದ ಜಮೀನಿನವರು ಹಾಸನದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ 25ಕ್ಕೂ ಹೆಚ್ಚು ಮರಗಳು, ಜೋಳದ ಸೊಪ್ಪು ಪತ್ರದ ಹುಲ್ಲು ನಾಶವಾಗಿದ್ದು, ಬೆಂಕಿಯನ್ನು ನಂದಿಸುವುದರ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕೆಂದು ನೊಂದ ಕೃಷಿಕ ನಟರಾಜ್, ಪುಟ್ಟರಾಜು ಹಾಗೂ ಉಮೇಶ್ ಕಂದಾಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net