ಜೋಳಕ್ಕೆ ಬಂತು ಬಂಗಾರದ ಬೆಲೆ

11 HHR (1)
ಶಿವಮೊಗ್ಗದಲ್ಲಿ ಹಸಿ ಮೆಕ್ಕೆಜೋಳ ಮಾರುತ್ತಿರುವ ವ್ಯಾಪಾರಿ.
Published on

ಹೊಳೆಹೊನ್ನೂರು: ಮಲೆನಾಡಿನಲ್ಲಿ ಹಸಿ ಮೆಕ್ಕೆಜೋಳದ ತೆನೆ (ಕುಂಡಿಗೆ) ಗಳಿಗೆ ಬಂಗಾರದ ಬೆಲೆ ಬಂದಿದೆ. ವರುಣನ ಅವಕೃಪೆಯಿಂದಾಗಿ ಸಕಾಲದಲ್ಲಿ ಮಳೆಯಾಗದೆ ಜಿಲ್ಲೆಯ ಗ್ರಾಮೀಣ ಭಾಗದ ಖುಷ್ಕಿ ಜಮೀನುಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ನೀರಿಲ್ಲದೆ ನೆಲಕಚ್ಚಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ನೀಡಿದರೂ ಬೇಕಾದಷ್ಟು ಮೆಕ್ಕೆಜೋಳದ ತೆನೆಗಳು ಸಿಗುತ್ತಿಲ್ಲ.
ಬೆಳೆಯ ಆರಂಭದಲ್ಲೇ ದಾಖಲೆ ಬೆಲೆಗೆ ಮಾರಾಟವಾಗಿ ರೈತರ ಮೊಗದಲ್ಲಿ ಸಂತಸ ತಂದಿದೆ. ಬೆಲೆ ಏರಿಕೆ ಛಾಪು ಮೂಡಿಸಿದ ನುಗ್ಗೇಕಾಯಿ, ಟಮಾಟೋವನ್ನು ದರವನ್ನು ಮೀರಿಸುವಷ್ಟರ ಮಟ್ಟಿಗೆ ಮಾರುಕಟ್ಟೆಯಲ್ಲಿ ಸ್ವೀಟ್‌ಕಾರ್ನ್ ಪೈಪೊಟಿ ಆರಂಭಿಸಿದೆ.
ಸದ್ಯ ಶಿವಮೊಗ್ಗ ಜಿಲ್ಲೆಯ ಮಾರುಕಟ್ಟೆಗೆ ಅಲ್ಲಲ್ಲಿ ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಮೆಕ್ಕೆಜೋಳದ ತೆನೆಗಳು ಪೂರೈಕೆಯಾಗುತ್ತಿವೆ. ಇನ್ನೊಂದೆರಡು ವಾರ ಪೂರೈಸುವಷ್ಟು ಮಾತ್ರ ಮೆಕ್ಕೆಜೋಳದ ಬೆಳೆ ಜಮೀನುಗಳಲ್ಲಿದೆ. ಆದರೂ ಅಗತ್ಯದಷ್ಟು ಮೆಕ್ಕೆಜೋಳದ ತೆನೆಗಳು ಪೂರೈಕೆಯಾಗುತ್ತಿಲ್ಲ. ನೀರಾವರಿಯಲ್ಲಿ ಬೆಳೆದ ಹೈಬ್ರೀಡ್ ತಳಿ ಜೋಳದ ತೆನೆಗಳನ್ನ್ನೇ ದುಬಾರಿ ಬೆಲೆ ನೀಡಿ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ಬಾರಿ 5 ರೂಪಾಯಿಗೆ ಸಿಗುತ್ತಿದ ಮೆಕ್ಕೆಜೋಳದ ತೆನೆಯೊಂದು ಈ ಬಾರಿ 10-15 ರೂಪಾಯಿಗೆ ಬೆಲೆ ಹೆಚ್ಚಿಸಿಕೊಂಡಿದೆ. ನೂರು ರೂಪಾಯಿ ನೀಡಿದರೆ 5-6 ಮೆಕ್ಕೆಜೋಳದ ತೆನೆಗಳನ್ನು ವ್ಯಾಪಾರಿಗಳು ನೀಡುತ್ತಿದ್ದಾರೆ.
ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮೆಕ್ಕೆಜೋಳದ ತೆನೆಯೊಂದಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ 10 ರೂಪಾಯಿ ದಾಟಿದೆ ಎನ್ನುತ್ತಾರೆ ಮಾರುಕಟ್ಟೆ ಸಗಟು ವ್ಯಾಪಾರಿಗಳು. ಮುಂಗಡ ಹಣ ನೀಡಿದರೂ ವ್ಯಾಪಾರಿಗಳಿಗೆ ಮೆಕ್ಕೆಜೋಳ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ತಿಂಗಳು ಮಾರುಕಟ್ಟೆಯಲ್ಲಿ ಸ್ವೀಟ್ ಕಾರ್ನ್ ಸಿಗುವುದು ಅನುಮಾನ ಎನ್ನುತ್ತಿವೆ ಮಾರುಕಟ್ಟೆ ಮೂಲಗಳು. ಮಳೆ ಕೊರತೆಯಿಂದಾಗಿ ಈ ಬಾರಿ ಮೆಕ್ಕೆಜೋಳದ ಬೆಳೆಗಳು ಭಾಗಶಃ ನಾಶವಾಗಿವೆ. ಶಿಕಾರಿಪುರ, ಭದ್ರಾವತಿಯ ಖುಷ್ಕಿ ಜಮೀನುಗಳಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಮೆಕ್ಕೆಜೋಳ ಫಸಲು ಈ ಬಾರಿ ಸಂಪೂರ್ಣವಾಗಿ ನೆಲಕಚ್ಚಿದೆ.
ಸಕಾಲದಲ್ಲಿ ಮಳೆಯಾಗದ ಕಾರಣ ಬಿತ್ತನೆ ಮಾಡಿದ ಜೋಳ ಎರಡ್ಮೂರು ಅಡಿಯಷ್ಟೇ ಬೆಳೆದು ಅಲ್ಲಲ್ಲಿ ತೆನೆ ಕಿತ್ತಿದೆ. ಕಿರುಗಣ್ಣಿಗೆ ಬಿದ್ದಿರುವ ಬೆಳೆಯಿಂದ ತೆನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲವೆಡೆ ತಡವಾಗಿ ಬಿತ್ತನೆ ಮಾಡಿದ ಜೋಳ ಸುಮಾರಾಗಿ ಬೆಳೆದಿದೆ. ಮಳೆಯಾಗದ ಕಾರಣ ಎಲೆಗಳು ಒಣಗುತ್ತಿದ್ದು ದಂಟುಗಳು ಸಣ್ಣದಾಗುತ್ತಿವೆ. ಜೋಳ ಮಾರುವುದಿರಲಿ, ಈ ಬಾರಿ ಜಾನುವಾರುಗಳಿಗೆ ಜೋಳದ ಸಪ್ಪೆಯೂ ಸಿಗುತ್ತದೆಯೋ ಇಲ್ಲವೋ ಎಂಬ ಯೋಚನೆ ಕಾಡತೊಡಗಿದೆ ಎನ್ನುತ್ತಾರೆ ಮೆಕ್ಕೆಜೋಳದ ಬೆಳೆಗಾರ ಬೇಗೂರಿನ ರಮೇಶ್.
ಮಾರುಕಟ್ಟೆಯಲ್ಲಿ 50-60 ತೆನೆಗಳಿರುವ ಚೀಲವೊಂದಕ್ಕೆ 550-600 ರೂಪಾಯಿ ನೀಡಬೇಕಾಗಿದೆ. ಕಳೆದ ಬಾರಿಗೆ ಹೊಲಿಸಿಕೊಂಡರೆ ಸ್ವೀಟ್ ಕಾರ್ನ್ ಬೆಲೆ ಈ ಬಾರಿ ಮೂರುಪಟ್ಟು ಹೆಚ್ಚಾಗಿದೆ. ಹಣ ನೀಡಿದರೂ ಬೇಡಿಕೆಗೆ ತಕಷ್ಟು ಜೋಳದ ತೆನೆಗಳು ಸಿಗುತಿಲ್ಲ. ಮಲೆನಾಡಿನ ಜೋಳದ ಪ್ರಿಯರ ಜೇಬಿಗೆ ಸ್ವೀಟ್ ಕಾರ್ನ್ ಭರ್ಜರಿ ಕತ್ತರಿ ಹಾಕುತ್ತಿದೆ. ಪ್ರತಿವರ್ಷ ಚಿತ್ರದುರ್ಗ ಭಾಗದಿಂದ ಜೋಳದ ತೆನೆ ಹಾಗೂ ಅವರೆಕಾಯಿ ಮಾರುಕಟ್ಟೆಗೆ ರವಾನೆ ಆಗುತ್ತಿತ್ತು. ಈ ಬಾರಿ ಬೆರಳೆಣಿಕೆಯಷ್ಟು ಮಾತ್ರ ಮಾರುಕಟ್ಟೆಗೆ ಬಂದಿದೆ. ನ್ಯಾಮತಿ, ಹೊನ್ನಾಳಿ ಭಾಗದಿಂದಲೂ ಜೋಳದ ತೆನೆಗಳು ಮಾರುಕಟ್ಟೆ ಪ್ರವೇಶಿಸುತ್ತಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.
ಮದುವೆ ಸೇರಿದಂತೆ ಇತ್ಯಾದಿ ಶುಭ ಸಮಾರಂಭದಲ್ಲಿ ಸ್ವೀಟ್ ಕಾರ್ನ್ ಖಾದ್ಯಗಳು ಕಣ್ಮರೆಯಾಗುತ್ತಿವೆ. ಹೋಟೆಲ್ ಮೆನುಗಳಲ್ಲಿ ಕಾರ್ನ್ ಸೂಪ್ ನಾಪತ್ತೆಯಾಗುತ್ತಿದೆ. ಕಾರ್ನ್ ಮಂಚೂರಿ ಗ್ರಾಹಕರ ಬಾಯಿ ಸುಡುತ್ತಿದೆ. ಕಲ್ಯಾಣ ಮಂಟಪದಲ್ಲಿ ಊಟದೊಟ್ಟಿಗೆ ಬಡಿಸುವ ಕೊಸಂಬರಿಗಳಲ್ಲಿ ಸ್ವೀಟ್ ಕಾರ್ನ್ ಇದ್ದರೆ ಬಾಳೆ ಎಲೆ ಊಟಕ್ಕೆ ರಾಯಲ್ ಟಚ್ ಬರುತ್ತದೆ ಎನ್ನುತ್ತಿದ್ದ ಕಾರ್ಯಕ್ರಮಗಳ ಆಯೋಜಕರು ಸ್ವೀಟ್ ಕಾರ್ನ್ ರೆಸಿಪಿ ಬೇಡವೆಂದು ಮೂಗು ಮುರಿಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net