

ಮಹಾಲಿಂಗಪುರ: ಬೆಳಗಾವಿ ಕೆಎಲ್‌ಇ ಸಂಸ್ಥೆಯ ಮಹಾಲಿಂಗಪುರದ ಡಿಪ್ಲೊಮಾ ಕಾಲೇಜಿನಲ್ಲಿ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ 75ನೇ ಹುಟ್ಟುಹಬ್ಬವನ್ನು ಕಾಲೇಜು ಆವರಣದಲ್ಲಿ ಪವಿತ್ರ ಬಿಲ್ವಪತ್ರೆ ಸಸಿ ನೆಡುವ ಮೂಲಕ ಮಂಗಳವಾರ ಆಚರಿಸಲಾಯಿತು.
ಪ್ರಾಚಾರ್ಯ ಎಸ್.ಐ. ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಪ್ರಭಾಕರ ಕೋರೆಯವರು ಕೆಎಲ್‌ಇ ಸಂಸ್ಥೆಗೆ ಕಲಶವಿದ್ದಂತೆ. ಸಂಸ್ಥೆಯನ್ನು ಆಧುನಿಕ ಜಗತ್ತಿಗೆ ಮುಖ ಮಾಡಿ ತೆರೆದುಕೊಳ್ಳುವಂತೆ ಸ್ಪಷ್ಟ ಮಾರ್ಗದರ್ಶನ ನೀಡಿ ಹೆಮ್ಮರವಾಗಿ ಬೆಳೆಸಿದ್ದಾರೆ. ಗಡಿಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಶಿಕ್ಷಣ ಕ್ರಾಂತಿಯ ಧ್ರುವತಾರೆ ಎಂದರು.
ನನ್ನ ಹೀರೋ ವಿಷಯ ಕುರಿತು ಮಾತನಾಡಿದ ವಿದ್ಯಾರ್ಥಿಗಳು, ಪಾಲಕರು, ಸೈನಿಕರು ಹಾಗೂ ರೈತರೇ ನಮ್ಮೆಲ್ಲರ ಪಾಲಿನ ಹೀರೋಗಳು ಎಂದು ಪ್ರತಿಪಾದಿಸಿದರು.
ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಸವಿತಾ ಗೊಂದಿ ವೇದಿಕೆ ಮೇಲಿದ್ದರು. ವಿದ್ಯಾರ್ಥಿಗಳಿಗೆ ಭಾಷಣ, ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಭಾಷಣ ಸ್ಪರ್ಧೆಯಲ್ಲಿ ಸಾವಿತ್ರಿ ಹೊಂಗಲ್ ಪ್ರಥಮ, ಶ್ವೇತಾ ಧಡೂತಿ ದ್ವಿತೀಯ ಹಾಗೂ ಪೂಜಾ ಬಸಲಿಗುಂಡಿ ತೃತೀಯ ಸ್ಥಾನ ಪಡೆದುಕೊಂಡರು. ಗಾಯನ ಸ್ಪರ್ಧೆಯಲ್ಲಿ ಸಂತೋಷ ಕವಳಿ ಪ್ರಥಮ , ಪ್ರಿಯಾ ಬಡಕಂಬಿ ದ್ವಿತೀಯ ಹಾಗೂ ರೋಹಿಣಿ ರಾವಳ ತೃತೀಯ ಸ್ಥಾನ ಪಡೆದುಕೊಂಡರು. ಪ್ರಜ್ಞಾ ಬೆಳಗಾಂವಕರ ಯೋಧರ ಮೇಲೆ ರಚಿಸಿದ ಸ್ವರಚಿತ ಕವನ ಮಂಡಿಸಿದರು. ನಂತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಉಪನ್ಯಾಸಕಿ ಲಕ್ಷ್ಮೀ ಅಂಗಡಿ ನಿರೂಪಿಸಿದರು. ಬೋರವ್ವ ಸೊಂಡಿ ಸ್ವಾಗತಿಸಿದರು. ಶಿಲ್ಪಾ ಬೀರನಗಡ್ಡಿ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಕಾಲೇಜು ಸಿಬ್ಬಂದಿ ಗೀತಾ ಉಪಾಸೆ, ಕೀರ್ತಿ ಗೊಂದಿ, ಈಶ್ವರ ಹೂಲಿ, ನಿಂಗಪ್ಪ ಸಿಂಗೆ, ಚೈತ್ರಾ ಹುದ್ದಾರ, ಲಕ್ಷ್ಮೀ ನಾಯಕ, ಸುಮನ ಖೋತ್ ಇತರರಿದ್ದರು.