

ಕೊಪ್ಪಳ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಜೆಡಿಎಸ್ ಬಲವರ್ಧನೆಗೆ ಪಕ್ಷ ಮುಂದಾಗಿದೆ. ಪದಾಧಿಕಾರಿಗಳ ಬದಲಾವಣೆಯಾಗಲಿದ್ದು, ನನ್ನನ್ನು ಕೋರ್ ಕಮಿಟಿ ಸದಸ್ಯನನ್ನಾಗಿ ನೇಮಿಸಿದೆ. ಜಿಲ್ಲೆ ಸೇರಿ ರಾಜ್ಯಾದ್ಯಂತ ಪಕ್ಷ ಕಟ್ಟುವ ಕೆಲಸ ಮಾಡಲಾಗುವುದೆಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಆರು ಜನರಿಗೆ ಕೋರ್ ಕಮಿಟಿಯಲ್ಲಿ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿಭಾಗವಾರು ಸಭೆಗಳಾಗಲಿವೆ. ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳು ಬದಲಾಗಲಿದ್ದು, ಯುವ ಉತ್ಸಾಹಿಗಳಿಗೆ ಅವಕಾಶ ನೀಡಲಾಗುವುದು. ಸೆ.27ರಿಂದ ರಾಜ್ಯ ಪ್ರವಾಸ ಆರಂಭವಾಗಲಿದೆ. ಜಿಲ್ಲೆಯಲ್ಲೂ ಸಂಘಟನೆ ಬಲಗೊಳ್ಳಲಿದ್ದು, ಸರ್ಕಾರದ ಲೋಪದೋಷಗಳನ್ನು ಎತ್ತಿಹಿಡಿದು ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಮಂಗಳವಾರ ಸುದ್ದಿಗೋಷ್ಠಿ ತಿಳಿಸಿದರು.
ರಾಜ್ಯದಲ್ಲಿ ವರ್ಗಾವಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ ರಾಯರಡ್ಡಿಯೇ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮಾಡಿದ ತಪ್ಪಿನಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುವಂತಾಗಿದೆ. ಜನ ಬಯಸಿ ಗೆಲ್ಲಿಸಿಲ್ಲ.
ಸಿದ್ದರಾಮಯ್ಯ ಕಾಲ್ಗುಣದಿಂದ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಶಾಸಕರ ವಿಶ್ವಾಸ ಗೆಲ್ಲಲಾಗದೆ ಅನ್ಯ ಪಕ್ಷದ ಶಾಸಕರನ್ನು ಸೆಳೆವ ಕಾರ್ಯತಂತ್ರಗಳು ಶುರುವಾಗಿವೆ ಎಂದು ಛೇಡಿಸಿದರು. ಪ್ರಮುಖರಾದ ವೀರೇಶ ಮಹಾಂತಯ್ಯನಮಠ, ಡಾ.ಮಹೇಶ ಗೋವನಕೊಪ್ಪ, ಚನ್ನಪ್ಪ, ಮಲ್ಲನಗೌಡ ಕೋನನಗೌಡ ಇತರರಿದ್ದರು.
ಬ್ಲಾಕ್‌ಮೇಲ್ ರಾಜಕಾರಣ: ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಬ್ಲಾಕ್‌ಮೇಲ್ ರಾಜಕಾರಣದಿಂದ ಎರಡು ಅವಧಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಅನಾಯಾಸವಾಗಿ ಗೆಲ್ಲುವಂತಾಗಿದೆ. ನಾನು ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬೇಕಿದ್ದರೆ ರಕ್ತದಲ್ಲಿ ಬರೆದು ಕೊಡುವೆ ಎಂದು ಹೇಳುವವರ ಬ್ಲಾಕ್‌ಮೇಲ್ ಆಟಗಳು ಕ್ಷೇತ್ರದ ಎಲ್ಲರಿಗೂ ಗೊತ್ತಿವೆ ಎಂದು ಪರೋಕ್ಷವಾಗಿ ಸಂಸದ ಸಂಗಣ್ಣ ಕರಡಿ ವಿರುದ್ಧ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಇವರ ತಂತ್ರದಿಂದ ಶಾಸಕ ರಾಘವೇಂದ್ರ ಹಿಟ್ನಾಳ್ ಶಾಸಕರಾಗುವ ಹಾದಿ ಸುಲಭವಾಗಿದೆ. ಮೂರು ಭಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ರಸ್ತೆ ಸೇರಿ ಮೂಲ ಸೌಕರ್ಯಗಳಿಲ್ಲ. ಜನರ ಆಶೀರ್ವಾದಿಂದ ಅಧಿಕಾರ ಸಿಕ್ಕಿದ್ದು, ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳಲಿ. ನಾವು ಜನರ ಬೇಡಿಕೆಗಾಗಿ ಹೋರಾಟ ಮಾಡುತ್ತೇವೆಂದು ತಿಳಿಸಿದರು.