ದರೋಡೆಕಾರರ ಕಾಲಿಗೆ ಪೊಲೀಸರ ಗುಂಡು

h4-firing
Published on

ಹುಬ್ಬಳ್ಳಿ: ನಗರ ಹೊರವಲಯದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್‌ನ ಇಬ್ಬರ ಕಾಲಿಗೆ ಪೊಲೀಸರು ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿದ್ದಾರೆ.

ಬೆಂಡಿಗೇರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಿಕ ನೇತೃತ್ವದ ತಂಡದಲ್ಲಿದ್ದ ಪಿಎಸ್‌ಐ ಅಶೋಕ ಆರೋಪಿಗಳಾದ ಗುಜರಾತ್ ಮೂಲದ ನಿಲೇಶ, ದಿಲೀಪ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಸೋಮವಾರ ತಡರಾತ್ರಿ ಬೈಕ್ ಮೇಲೆ ಹೊರಟ್ಟಿದ್ದ ಕುಂದಗೋಳ ಮೂಲದ ವ್ಯಕ್ತಿಗೆ ನಾಲ್ಕೈದು ಜನರ ಗುಂಪು ಅಡ್ಡಗಟ್ಟಿ ಬೈಕ್, ನಗದು, ಮೊಬೈಲ್ ಫೋನ್ ಸುಲಿಗೆ ಮಾಡಿ ಹಲ್ಲೆ ನಡೆಸಿ ಪರಾರಿಯಾಗಿತ್ತು. ಇದಾದ ಸ್ವಲ್ಪ ಸಮಯದಲ್ಲಿ ರವಿಚಂದ್ರ ಎಂಬುವವರನ್ನು ಅಡ್ಡಗಟ್ಟಿ ಈ ತಂಡ ಸುಲಿಗೆ ಮಾಡಿತ್ತು. ನಂತರ ಮಂಟೂರ ರಸ್ತೆಯಲ್ಲಿನ ಶಾರುಖ್ ಎಂಬುವವರ ಮನೆಗೆ ಕನ್ನ ಹಾಕಲು ಯತ್ನಿಸಿ ಮನೆಗೆ ಕಲ್ಲು ತೂರಾಟ ನಡೆಸಿತ್ತು.

ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಅಶೋಕ ಹಾಗೂ ಪೇದೆಗಳಾದ ಶರಣು, ಸೋಮಣ್ಣ ಮೇಟಿ ಸೇರಿ ನಗರ ಹೊರವಲಯದ ಬಿಡನಾಳ ಸಮೀಪ ತಪಾಸಣೆ ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಗುಂಡೇಟು ತಿಂದಿರುವ ದಿಲೀಪ ಹಾಗೂ ನಿಲೇಶ ಹಾಗೂ ಪೊಲೀಸ್ ಸಿಬ್ಬಂದಿಗೆ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ಶಶಿಕುಮಾರ, ಆರೋಪಿಗಳಾದ ನಿಲೇಶ ಹಾಗೂ ದಿಲೀಪ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಹುಬ್ಬಳ್ಳಿಯ ಜೈನ್ ಮಂದಿರದ ಹುಂಡಿಯಲ್ಲಿದ್ದ ಹಣ ಕದ್ದಿದ್ದರು. ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದರು. ಇವರ ಮೇಲೆ ಗದಗ, ಬಳ್ಳಾರಿ, ಚಿತ್ರದುರ್ಗ ಸೇರಿ ಹಲವು ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಉಳಿದ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net