ಪೊಲೀಸರು ಒತ್ತಡಕ್ಕೆ ಮಣಿಯದಿರಲಿ

ಪೊಲೀಸರು ಒತ್ತಡಕ್ಕೆ ಮಣಿಯದಿರಲಿ
ಉಡುಪಿ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದವರನ್ನು ಶಿಕ್ಷೆಗೆ ಗುರಿಪಡಿಸಲು ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಶುಕ್ರವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಸಂಚಾಲಕರಾದ ಅಕ್ಷತಾ ಹಿರೇಮಠ, ಶೋಭಿತಾ, ಹಮ್ಮಿಗೇಶ, ಪ್ರಸಾದ್, ವಿರೂಪಾಕ್ಷಯ್ಯ, ಕೃಷ್ಣ, ಅನಿಕೇತ, ಶಿವಾನಂದ ಇತರರಿದ್ದರು.
Published on

ಕೊಪ್ಪಳ: ಉಡುಪಿ ನೇತ್ರಜ್ಯೋತಿ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿಗಳನ್ನು ಶಿಕ್ಷಿಸುವಂತೆ ಒತ್ತಾಯಿಸಿ ಎಬಿವಿಪಿ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೊಲೀಸರು ಒತ್ತಡಕ್ಕೆ ಮಣಿದು ತನಿಖೆ ಚುರುಕುಗೊಳಿಸುತ್ತಿಲ್ಲ. ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಘಟನೆ ಹಿಂದೆ ದುರುಳರ ಷಡ್ಯಂತ್ರವಿದ್ದು ಸೂಕ್ತ ತನಿಖೆ ಕೈಗೊಂಡಲ್ಲಿ ಸತ್ಯಾಂಶ ಹೊರಬರಲಿದೆ ಆದರೆ, ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ವಿಡಿಯೋ ಚಿತ್ರೀಕರಿಸಿದ ವಿದ್ಯಾರ್ಥಿನಿಯರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಘಟನೆ ಹಿಂದಿನ ಕಾಣದ ಕೈಗಳನ್ನು ಬಯಲು ಮಾಡಬೇಕು. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸಬೇಕು.

ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ಜಿಲ್ಲಾ ಸಂಚಾಲಕರಾದ ಅಕ್ಷತಾ ಹಿರೇಮಠ, ಶೋಭಿತಾ, ಹಮ್ಮಿಗೇಶ, ಪ್ರಸಾದ್, ವಿರೂಪಾಕ್ಷಯ್ಯ, ಕೃಷ್ಣ, ಅನಿಕೇತ, ಶಿವಾನಂದ, ಅರುಣ, ಶಿವಕುಮಾರ್, ಲಕ್ಷ್ಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net