ನಫೆಡ್‌ಗೆ ಕೊಬ್ಬರಿ ಮಾರಲು ರೈತರಿಗೆ ನಿರಾಸಕ್ತಿ

Tiptur APMC Office
Published on

ತುಮಕೂರು: ಸತತವಾಗಿ ಕುಸಿಯುತ್ತಿರುವ ಕೊಬ್ಬರಿ ಬೆಲೆಯಿಂದ ಕಂಗೆಟ್ಟಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಆರಂಭಿಸಲಾಗಿರುವ ನಫೆಡ್ ಕೊಬ್ಬರಿ ಖರೀದಿ ಕೇಂದ್ರದ ಬಗ್ಗೆ ರೈತರಿಗೆ ನಿರಾಸಕ್ತಿ ಮೂಡಿದೆ. ರಾಜ್ಯದ ಪ್ರೋತ್ಸಾಹಧನ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಕನಿಷ್ಠ ಬೆಂಬಲ ಬೆಲೆ 10,300ರೂ. ನೀಡಿ ಕೊಬ್ಬರಿ ಕೊಂಡು ಕೊಳ್ಳಲು ನಫೆಡ್ ಖರೀದಿ ಕೇಂದ್ರದಲ್ಲಿ ನೋಂದಣಿ ಆರಂಭವಾಗಿದ್ದರೂ ರಾಜ್ಯ ಸರ್ಕಾರ ಕನಿಷ್ಠ 2000 ರೂ.ಪ್ರೋತ್ಸಾಹಧನ ನೀಡಲಿದೆ ಎಂದು ಕಾದು ಸುಸ್ತಾಗಿರುವ ರೈತರು ಮಾರುಕಟ್ಟೆಯಲ್ಲೇ 9,900 ರೂ, ಮಾರಾಟ ಮಾಡುತ್ತಿದ್ದಾರೆ.ಕ್ವಿಂಟಾಲ್ ಕೊಬ್ಬರಿ ಉತ್ಪಾದನಾ ವೆಚ್ಚ 11,529 ರೂ. ಆಗುತ್ತದೆ ಎಂದು ಕೃಷಿ ಬೆಲೆ ಆಯೋಗ ಈಗಾಗಲೇ ವರದಿ ನೀಡಿದೆ. ಅದಕ್ಕೆ ಹೋಲಿಸಿದರೆ 10,300 ರೂ. ಬೆಂಬಲ ಬೆಲೆಯೂ 1229ರೂ.ನಷ್ಟದಲ್ಲಿದೆ. ಕೇಂದ್ರ ಸರ್ಕಾರದ ಬೆಂಬಲ ಬೆಲೆ ನೀಡಿ ಕೊಂಡುಕೊಳ್ಳಲು ನಫೆಡ್ ಖರೀದಿ ಕೇಂದ್ರ ಆರಂಭವಾಗಿದ್ದರೂ ರಾಜ್ಯ ಸರ್ಕಾರ ಪ್ರೋತ್ಸಾಹಧನ ಘೋಷಿಸದ ಹಿನ್ನೆಲೆಯಲ್ಲಿ ರೈತರು ನಫೆಡ್‌ನಲ್ಲಿ ಮಾರಾಟಕ್ಕೆ ನಿರಾಸಕ್ತಿ ತೋರಿದ್ದಾರೆ.

ನೋಂದಣಿ ಅವಧಿ ವಿಸ್ತರಣೆ: ರೈತರ ನಿರಾಸಕ್ತಿ ಹಿನ್ನೆಲೆಯಲ್ಲಿ ಜು.25ರವರೆಗೂ ನೋಂದಣಿಗೆ ಅವಕಾಶ ವಿಸ್ತರಿಸಲಾಗಿದೆ, ಜು.7ರವರೆಗೆ ಚೇಳೂರು ಕೇಂದ್ರದಲ್ಲಿ 16, ಗುಬ್ಬಿ 25, ಶಿರಾ 8, ತುಮಕೂರು 15, ಚಿಕ್ಕನಾಯಕನಹಳ್ಳಿ 87, ಹುಳಿಯಾರು 88, ಕುಣಿಗಲ್‌ನಲ್ಲಿ ಒಬ್ಬ ರೈತ, ತಿಪಟೂರು 96 ಹಾಗೂ ತುರುವೇಕೆರೆಯಲ್ಲಿ ಅತೀ ಹೆಚ್ಚು 194 ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ನಫೆಡ್ ಆರಂಭದ ಹಿನ್ನೆಲೆಯಲ್ಲಿ ಬೆಲೆ ಸ್ಥಿರ! : 9 ಸಾವಿರ ರೂ.ಗಿಂತ ಕೆಳಗೆ ಇಳಿದಿದ್ದ ಕೊಬ್ಬರಿ ಬೆಲೆ 9,500ರ ಆಸುಪಾಸಿನಲ್ಲಿ ಸ್ಥಿರವಾಗಿರಲು ಕಾರಣವಾಗಿದೆ. ನಫೆಡ್ ಈಗಾಗಲೇ ರೈತರ ನೋಂದಣಿ ಆರಂಭಿಸಿದ್ದು ಇಲ್ಲಿಗೆ ರೈತರ ಆಕರ್ಷಣೆ ತಪ್ಪಿಸಲು ಮಾರುಕಟ್ಟೆ ತಂತ್ರವಾಗಿ ಬೆಲೆ ಸ್ಥಿರವಾಗಿಸಿಕೊಂಡಿದ್ದು, ರೈತರಿಗೆ ಅಲ್ಪಸ್ವಲ್ಪ ನೆರವಾಗಿದೆ. ನಫೆಡ್ ಖರೀದಿ ಕೇಂದ್ರ ಆರಂಭವಾಗದಿದ್ದರೆ ವರ್ತಕರು ಹೆಚ್ಚು ಬೆಲೆಗೆ ಕೊಬ್ಬರಿ ಖರೀದಿಗೆ ಮುಂದಾಗುತ್ತಿರಲಿಲ್ಲ.

ಮಾಧುಸ್ವಾಮಿ ರೈತರ ಹಿತಕಾಯಲಿ: ಜಿಲ್ಲೆಯ ತೆಂಗು ಬೆಳೆಗಾರರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ನಂಬಿಕೊಂಡಿದ್ದು ಎಂಎಸ್‌ಪಿ ಜತೆ ರಾಜ್ಯ ಸರ್ಕಾರ ಕೂಡ ಕನಿಷ್ಠ 2 ಸಾವಿರ ರೂ. ಪ್ರೋತ್ಸಾಹ ಬೆಲೆ ಘೋಷಿಸುತ್ತಾರೆ ಎಂದು ನಂಬಿಕುಳಿತಿದ್ದಾರೆ. 10,300 ಹಾಗೂ ರಾಜ್ಯದ 2 ಸಾವಿರ ಸೇರಿ 12,300ರೂ. ನೀಡಿ ನಫೆಡ್ ಕೊಬ್ಬರಿ ಖರೀದಿ ಮಾಡಲು ಆರಂಭಿಸಿದರೆ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಳವಾಗಲಿದೆ. ಹಾಗಾಗಿ, ಸ್ವತಃ ತೆಂಗು ಬೆಳೆಗಾರರಾಗಿರುವ ಸಚಿವ ಮಾಧುಸ್ವಾಮಿ ಪ್ರೋತ್ಸಾಹಬೆಲೆ ಘೋಷಿಸಲು ಶ್ರಮಿಸಬೇಕು, ಜಿಲ್ಲೆಯ ಶಾಸಕರು, ಸಂಸದರು ದನಿಮಾಡಿ ಒತ್ತಡ ತರಬೇಕಿದೆ.

ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುವಾಗ ಹಾಗೂ ರೈತರು ಬಿಡುವಾಗಿರುವ ಈ ಸಮಯದಲ್ಲಿ ನಫೆಡ್ ಆರಂಭವಾದರೆ ರೈತರು ಬಂದು ಕೊಬ್ಬರಿ ಮಾರುತ್ತಾರೆ. ತಿಪಟೂರು ಮಾರುಕಟ್ಟೆಯಲ್ಲಿ ಅಗತ್ಯ ಗೋದಾಮು ನೀಡಲು ಸಿದ್ಧರಾಗಿದ್ದು ಒಂದೆರಡು ದಿನದಲ್ಲಿ ಖರೀದಿ ಆರಂಭಿಸಲು ನಫೆಡ್‌ಗೆ ಸೂಚಿಸಲಾಗಿದೆ. ನ್ಯಾಮಗೌಡ ಕಾರ್ಯದರ್ಶಿ, ಎಪಿಎಂಸಿ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net