

ಬೆಳವಣಿಕಿ: ಮೆಣಸಿನಕಾಯಿ ಬೆಳೆಗೆ ತಾಮ್ರದ ರೋಣ ಕಾಣಿಸಿಕೊಂಡಿದ್ದು, ರೈತರನ್ನು ಕಂಗೆಡಿಸಿದೆ.
ಬೆಳವಣಿಕಿ ಸುತ್ತಲಿನ ಕೌಜಗೇರಿ, ಯಾವಗಲ್ಲ, ಮಾಳವಾಡ, ಕರಮುಡಿ, ಮಲ್ಲಾಪುರ, ಸಂದಿಗವಾಡ, ಯಾವಗಲ್ಲ, ಯಾ.ಸ. ಹಡಗಲಿ ಇನ್ನಿತರ ಗ್ರಾಮಗಳಲ್ಲಿ ರೋಗವು ಕಾಣಿಸಿಕೊಂಡಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬಿತ್ತನೆ ಮಾಡಿ 3 ತಿಂಗಳಾಗಿವೆ. ಪ್ರಸ್ತುತ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು ನಷ್ಟದ ಸುಳಿಗೆ ಸಿಲುಕುವ ಸಾಧ್ಯತೆ ಇದೆ.
ಅಲ್ಪ ಮಳೆಯಿಂದ ಕಳೆದ ವಾರ ಚೆನ್ನಾಗಿ ಕಾಣುತ್ತಿದ್ದ ಮೆಣಸಿನಕಾಯಿ ಬೆಳೆಯು ಈ ವಾರ ಎಲೆ ಮುರಿದುಕೊಂಡು ನರಳುತ್ತಿದೆೆ. ಬೂದಿ ಬಣ್ಣದ ರೋಗ ಇಡೀ ಬೆಳೆಯನ್ನು ಹಾಳುಮಾಡುತ್ತಿದೆ. ಸಾಲಮಾಡಿ ರಸಗೊಬ್ಬರ ಹಾಕಿ, 2ರಿಂದ 3 ಬಾರಿ ಕಳೆ ತೆಗೆಯಿಸಿ, ಔಷಧ ಸಿಂಪಡಿಸಿ ಇನ್ನೇನು ಬೆಳೆ ಕೆಲವೇ ವಾರಗಳಲ್ಲಿ ಕೈಸೇರಬೇಕಾದ ಹಂತದಲ್ಲಿ ರೋಗಕ್ಕೆ ತುತ್ತಾಗಿದೆ. ರೋಗ ಹತೋಟಿಗೆ ಬರದೆ ಬೆಳೆ ನಾಶವಾಗಿದೆ. ಸಾಕಷ್ಟು ರೈತರು ಸಂಕಷ್ಟಕ್ಕೆ ಒಳಗಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರಾದ ಯಲ್ಲಪ್ಪ ತಾಳಿ, ಶಿವಾನಂದ ಅಳಗವಾಡಿ ಮನವಿ ಮಾಡಿದ್ದಾರೆ.