

ಹಾಸನ: ಕರೊನಾ ವೈರಸ್ನಿಂದಾಗಿ ದೇಶದ ಜನ ಭಯಭೀತರಾಗಿದ್ದಾರೆ. ವಿದೇಶಗಳಿಂದ ಬಂದಿರುವ ಜನರನ್ನು ವೈರಿಗಳಂತೆ ನೋಡಲಾಗುತ್ತಿದೆ. ಹೀಗಿರುವಾಗ ದುಬೈನಿಂದ ಮರಳಿರುವ ಮಹಿಳೆಯೊಬ್ಬಳು ಬಸ್ಸಿನಲ್ಲಿ ಸಂಚರಿಸಿದ್ದು, ಅವಳನ್ನು ಕಂಡ ಜನರು ಹೆದರಿ ಆಕೆಯನ್ನು ಬಸ್ಸಿನಿಂದ ಇಳಿಸಿ ಆಂಬುಲೆನ್ಸ್ನಲ್ಲಿ ಹಾಸನಕ್ಕೆ ಕಳುಹಿಸಿದ್ದಾರೆ.
ದುಬೈನಿಂದ ಆಗಮಿಸಿರುವ ಮಹಿಳೆ ಮೊದಲು ಬೆಂಗಳೂರು ಬಂದಿದ್ದು, ಅಲ್ಲಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಅರಕಲಗೋಡು ಮಾರ್ಗವಾಗಿ ಸೋಮವಾರಪೇಟೇಟೆಗೆ ಹೋಗುತ್ತಿದ್ದಳು. ವಿಮಾನ ನಿಲ್ದಾಣದಲ್ಲಿ ಯುವತಿಯ ಕೈ ಮೇಲೆ ಹಾಕಲಾಗಿರುವ ಸೀಲ್ ನೋಡಿ ಸಹ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಎಚ್ಚರಿಕೆಯಿಂದಿರಬೇಕಾದ ನೀವು ಬಸ್ಸಿನಲ್ಲಿ ಏಕಾಗಿ ಓಡಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಯುವತಿ ಬಸ್ಸಿನಲ್ಲಿ ಸಂಚರಿಸುತ್ತಿರುವ ವಿಚಾರವನ್ನು ಪ್ರಯಾಣಿಕರು ಆರೋಗ್ಯ ಇಲಾಖೆಗೆ ತಿಳಿಸಿದ್ದು, ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ವೇಳೆ ಯುವತಿ ತನಗೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಕರೊನಾ ಇಲ್ಲದಿರುವುದಾಗಿ ವರದಿ ಬಂದಿರುವುದಾಗಿ ತಿಳಿಸಿದ್ದಾಳೆ.
ಯುವತಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಜತೆಯಲ್ಲೇ ಕರೆದೊಯ್ದಿದ್ದು, ಮತ್ತೊಮ್ಮೆ ಪರಿಶೀಲನೆ ನಡೆಸಿದ್ದಾರೆ. ಸ್ವಲ್ಪ ದಿನಗಳ ಕಾಲ ಮನೆಯಿಂದ ಹೊರಬರದಿರಿ ಎಂದು ಆಕೆಗೆ ಸೂಚನೆ ನೀಡಲಾಗಿದೆ.