

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮೂರು ದಶಕದ ಹಿಂದೆಯೇ ಮಾರಕ ಕಾಯಿಲೆಗೆ ಕೊಡಗಿನ ಜೇನು ತುತ್ತಾಗಿದೆ. ಜಿಲ್ಲೆಯ ಹಲವೆಡೆಗೆಯಲ್ಲಿ ಸಣ್ಣ ಪ್ರಮಾಣದಲ್ಲಿ ಕೊಡಗಿ ನ ಜೇನು ಉತ್ಪಾದನೆ ಆಗುತ್ತಿದೆ. ಹೀಗಿದ್ದರೂ, ಕೊಡಗಿನ ಜೇನಿನ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವ್ಯಾಪಾರ- ವಹಿವಾಟು ನಡೆಯುತ್ತಿದೆ. ಕೊಡಗಿನ ಜೇನು ಎಂದು ಪ್ರಚಾರ ಮಾಡುತ್ತಾ ಹೊರಗಿನ ಜೇನು ತುಪ್ಪ ಮಾರಾಟ ಮಾಡುವುದರ ಮೂಲಕ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆ.
ಕೊಡಗಿನ ಕಿತ್ತಳೆ, ಕೊಡಗಿನ ಜೇನು, ಕೊಡಗಿನ ಏಲಕ್ಕಿ ಗತವೈಭವ ಕಳೆದುಕೊಂಡಿವೆ. ಆದರೂ, ಮಾರುಕಟ್ಟೆಯಲ್ಲಿ ಕೊಡಗಿನ ಈ ಮೂರು ಉತ್ಪನ್ನಗಳಿಗೆ ಇಂದಿಗೂ ಉತ್ತಮ ಬೇಡಿಕೆ ಇದೆ. ಅಲ್ಪ ಪ್ರಮಾಣದಲ್ಲಿರುವ ಕಿತ್ತಳೆ, ಜೇನು, ಏಲಕ್ಕಿ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತಿದೆ. ಪ್ರತಿಕೂಲ ಪರಿಸ್ಥಿತಿಯನ್ನು ಸಂಘ- ಸಂಸ್ಥೆಗಳು, ವರ್ತಕರು ತಮ್ಮ ಲಾಭಕ್ಕೆ ಕೊಡಗಿನ ಬ್ರಾೃಂಡ್ ಬಳಸುತ್ತಿದ್ದಾರೆ.
ಭಾಗಮಂಡಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಹಾಗೂ ವಿರಾಜಪೇಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ಕೂರ್ಗ್ ಹನಿ ಬ್ರಾೃಂಡ್‌ನಲ್ಲಿ ಜೇನು ಮಾರಾಟ ಮಾಡಲಾಗುತ್ತಿದೆ.
ಕೂರ್ಗ್ ಹನಿ ಕೊಡಗಿನ ಪರಿಶುದ್ಧ ಜೇನು ಎಂಬ ಭಾವನೆ ಗ್ರಾಹಕರಲ್ಲಿದೆ. ಕೊಡಗಿಗೆ ಬರುವ ಬಹುತೇಕ ಪ್ರವಾಸಿಗರು ಕೂರ್ಗ್ ಹನಿ ಖರೀದಿಸುತ್ತಿದ್ದಾರೆ. ಪ್ರತಿಷ್ಠಿತ ಸಂಸ್ಥೆಗಳು ಹೊರ ರಾಜ್ಯದಿಂದ ಜೇನು ಖರೀದಿಸಿ, ಕೂರ್ಗ್ ಹನಿ ಹೆಸರಿನಲ್ಲಿ ಜೇನು ಮಾರಾಟ ಮಾಡುವುದರ ಮೂಲಕ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿದೆ.
ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೊರಗಿನ ಜೇನುಗಳನ್ನು ಕೊಡಗಿನ ಜೇನು ಎಂದು ಮಾರಾಟ ಮಾಡಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದ ಹೇರಳ ಪ್ರಮಾಣದಲ್ಲಿ ಕುಶಾಲನಗರಕ್ಕೆ ಜೇನು ತಂದು ಅಲ್ಲಿಂದ ವ್ಯಾಪಾರಿಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗಿನ ಜೇನು ಎಂದು ಬಿಂಬಿಸಿಕೊಂಡು ಹೊರಗಿನ ಜೇನು ಮಾರಾಟ ಮಾಡುತ್ತಿರುವ ದಂಧೆ ಬಗ್ಗೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ವಿರಾಜಪೇಟೆ ಸೊಸೈಟಿ ಜೇನು ಕಳಪೆ ಗುಣಮಟ್ಟದೆಂದು ವರದಿ ಬಂದಿದೆ. ಭಾಗಮಂಡಲ ಸೊಸೈಟಿ ಜೇನು ಗುಣಮಟ್ಟ ಖಾತ್ರಿ ಪಡಿಸಲು ಬೆಂಗಳೂರು ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗಿದೆ. ಗುಣಮಟ್ಟ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ಮೂಲಕ ಸೊಸೈಟಿಗಳಿಗೆ ಸೂಚನೆ ನೀಡಲಾಗುವುದು. ಇದು ಪಾಲನೆ ಆಗದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಡಾ.ಅನಿಲ್ ಧವನ್, ಜಿಲ್ಲಾ ಅಂಕಿತ ಅಧಿಕಾರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಖಾತ್ರಿ ಪ್ರಾಧಿಕಾರ.
**
ತಾಜಾತನ ಸಾಬೀತು ಪಡಿಸುವ, ಮತ್ತೊಬ್ಬರಿಗೆ ನಕಲಿ ಮಾಡಲು ಸಾಧ್ಯವಾಗದ ರೀತಿ ಏನಾದರೊಂದು ಗುರುತನ್ನು ಆಹಾರ ಇಲಾಖೆ ನೀಡುವಂತಾಗಬೇಕು. ವಿಶ್ವ ಮಟ್ಟದ ಬ್ರಾೃಂಡ್ ವಸ್ತುಗಳನ್ನೇ ನಕಲಿ ಮಾಡಿ, ಮಾರಾಟ ಮಾಡುತ್ತಿರುವಾಗ ಇದೆಲ್ಲವೂ ಸರ್ವೇ ಸಾಮಾನ್ಯ. ನಕಲಿ ಜೇನು ತಡೆಯುವ ವ್ಯವಸ್ಥಿತ ಕಾರ್ಯ ಯೋಜನೆ ನಡೆಯಬೇಕೆ ಹೊರತು ಚರ್ಚೆಗಳಿಂದ ಪ್ರಯೋಜನವಿಲ್ಲ. ಶಾಫಿ ಸಅದಿ, ಜಿಲ್ಲಾಧ್ಯಕ್ಷರು, ಸುನ್ನಿ ಸ್ಟೂಡೆಂಟ್ ಫೆಡರೇಷನ್, ಸೋಮವಾರಪೇಟೆ.
**
ಕೊಡಗಿನ ಜೇನು ಎಂದು ಹೊರಗಿನ ಜೇನು ಮಾರಾಟ ಮಾಡುವ ಮೋಸಗಾರರ ಜಾಲ ಸಕ್ರಿಯವಾಗಿರುವುದು ಮೇಲ್ನೋಟಕ್ಕೆ ಸಾಬೀತಾ ಗಿದೆ. ಒಂದು ಸಂಸ್ಥೆ ಮೇಲೆ ಆರೋಪ ಬಂದಾಗ ಅದು ಸುಳ್ಳಾಗಿದ್ದಲ್ಲಿ ಅದರ ವಿರುದ್ಧ ಧ್ವನಿಯೆತ್ತಿದವರಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಏಕೆ. ಯಾವುದಾದರೂ ಒಂದು ಕಡೆಯಿಂದ ತನಿಖೆಗೆ ಒತ್ತಾಯಿಸಲು ಹಿಂಜರಿಕೆ ಏಕೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆಯೇ. ಹೊಸೂರು ಸೂರಜ್, ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ.
**
ಕೊಡಗಿನ ಜೇನು ಹೆಸರಿನಲ್ಲಿ ನಕಲಿ ಜೇನು ಮಾರಾಟ ಮಾಡುತ್ತಿರುವುದರಿಂದ ಕೊಡಗಿನ ಜೇನು ಕೃಷಿಕರಿಗೆ ಅನ್ಯಾಯವಾಗುತ್ತಿದೆ. ಕೊಡಗಿ ನ ಉತ್ಪನ್ನಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ವರು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ. ಮಾಳೇಟಿರ ಕಾಳಯ್ಯ, ಸ್ಥಳೀಯರು, ವಿರಾಜಪೇಟೆ.
**
ಕೊಡಗಿನ ಜೇನಿನೆಂದು ಗ್ರಾಹಕರಿಗೆ ವಂಚನೆ ಮಾಡಿದವರ ಮೇಲೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಮುಂದೆ ಈ ರೀತಿಯ ವಂಚನೆ ನಡೆಯದಂತೆ ತಡೆಯಬಹುದು. ಈ ವಿಷಯದ ಬಗ್ಗೆ ಆಹಾರ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕರವಂಡ ಲಿತೀನ್ ಪೊನ್ನಪ್ಪ , ಉದ್ಯೋಗಿ, ನಾಪೋಕ್ಲು
**
ಕೊಡಗಿನಲ್ಲಿ ವಿಪರೀತ ಪ್ರವಾಸೋದ್ಯಮ ನಡೆಯುತ್ತಿದೆ. ಅನಧಿಕೃತ ಹೋಂಸ್ಟೇ, ಮಾದಕ ವಸ್ತುಗಳ ಮಾರಾಟ ಹಾಗೂ ಇತರೆ ಬೇಡದ ದಂಧೆಗಳಿಂದ ಕೊಡಗಿನ ಹೆಸರು ಕೆಟ್ಟು ಹೋಗಿದೆ. ಇದರೊಂದಿಗೆ ಕೊಡಗಿನ ಪರಿಸರಕ್ಕೂ ಧಕ್ಕೆಯಾಗುತ್ತಿದೆ. ಕೊಡಗಿನಲ್ಲಿ ಸಿಗುತ್ತಿರುವ ಪರಿಶುದ್ಧ ಜೇನಿನ ಮೇಲೂ ದಂಧೆಕೋರರ ಕೆಟ್ಟ ದೃಷ್ಟಿ ಬಿದ್ದಿರುವುದು ದುರಾದೃಷ್ಟಕರ. ಕೊಡಗು ಜೇನಿನ ಹೆಸರಿನಲ್ಲಿ ಹೊರಗಿನ ಜೇನು ಮಾರಾಟ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದರ ಮೂಲಕ ಕೊಡಗಿನ ಹೆಸರು ಹಾಳಾಗದಂತೆ ನೋಡಿಕೊಳ್ಳಬೇಕು. ಅಪ್ಪಂಡೇರಂಡ ರಾಜ್ ಕಾಳಪ್ಪ, ಸ್ವಉದ್ಯೋಗಿ, ವಿರಾಜಪೇಟೆ
**
ಆಹಾರ ಇಲಾಖೆಯವರು ಪ್ರಾಮಾಣಿಕರಾಗಿದ್ದರೆ ಜೇನು ಹಗರಣ ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ. ಆಹಾರ ಇಲಾಖೆಯ ಕರ್ತವ್ಯ ಲೋಪದಿಂದ ಅಮಾಯಕ ಗ್ರಾಹಕರು ನಕಲಿ ಜೇನು ತಿನ್ನುವಂತಾಗಿದೆ. ಪರಿಶುದ್ಧ ಕೊಡಗಿನ ಜೇನು ಎಂದು ಮಕ್ಕಳಿಗೆ ವಿಷ ತಿನ್ನಿಸಿದಂತಾಗಿದೆ. ಆಹಾರ ಪದಾರ್ಥಗಳಲ್ಲಿ ಕಲಬೆರಕೆ, ಕಳಪೆ ಗುಣಕಟ್ಕಟೆ ನೇರ ಹೊಣೆ ಆಹಾರ ಇಲಾಖೆ. ಗುಣಮಟ್ಟ ಪರೀಕ್ಷಿಸಿ ಪರವಾನಗಿ ನೀಡಿದ್ದರೆ ಇಂದು ಕೊಡಗಿಗೂ, ಕೊಡಗಿನ ಜೇನಿಗೂ ಕೆಟ್ಟು ಹೆಸರು ಬರುತ್ತಿರಲಿಲ್ಲ. ಅಜ್ಜಮಾಡ ಚಂಗಪ್ಪ, ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ.
**
ಕೊಡಗಿನಲ್ಲಿ ನಕಲಿ ಜೇನು ತುಪ್ಪ ದಂಧೆ ಭಾಗಮಂಡಲ- ತಲಕಾವೇರಿ ರಸ್ತೆಯುದ್ದಕ್ಕೂ ನಡೆಯುತ್ತಿದೆ ಅನ್ನೋ ಮಾತು ಜನವಲಯದಿಂದ ಕೇಳಿ ಬರುತ್ತಿದೆ. ಆರೋಗ್ಯದ ದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಜೇನು ಸೇವನೆಗೆ ಯೋಗ್ಯವೇ ಅನ್ನೋದನ್ನು ಕಾತರಿ ಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಬೇಕು. ಹೊರಗಿನಿಂದ ತಂದ ಜೇನನ್ನು ಕೊಡಗಿನ ಜೇನು ಎಂದು ಮಾರಾಟ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಡಾ. ಸುಭಾಶ್ ನಾಣಯ್ಯ, ವೈದ್ಯರು, ಮೂರ್ನಾಡು.
**
ಈ ಮೊದಲು ದೂರದಲ್ಲಿರುವ ನಮ್ಮ ಆಪ್ತರಿಗೆ ಜೇನು ತುಪ್ಪ ಉಡುಗೊರೆಯಾಗಿ ಕೊಡುವುದೇ ಒಂದು ಸಂತೋಷ. ಕೊಡಗಿನ ಜೇನು ಶುದ್ಧತೆಗೆ ಪ್ರಸಿದ್ಧಿಯಾಗಿತ್ತು. ಈಗ ಶುದ್ಧತೆಯ ಜೇನನ್ನು ಹುಡುಕುವುದೇ ಪ್ರಯಾಸಕರ. ಪೋಡಮಾಡ ಭವಾನಿ ನಾಣಯ್ಯ, ಯೋಗ ಗುರು, ಬಾಳೆಲೆ.