

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಫೆ.25ರಿಂದ ಮಾರ್ಚ್ 5ರವರೆಗೆ ನಡೆಯಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಸಂದರ್ಭ ಪ್ರಪಂಚಾದ್ಯಂತ ಲಕ್ಷಾಂತರ ಭಕ್ತರು, ಧಾರ್ಮಿಕಾಸಕ್ತರು ಪಾಲ್ಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಮಾರಿಗುಡಿ ಸುತ್ತಮುತ್ತ ಸುಸಜ್ಜಿತ ವ್ಯವಸ್ಥೆಗಳ ಜೋಡಣೆ ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ಪೂರ್ವಭಾವಿ ಮೂಲಸೌಕರ್ಯ ಜೋಡಣೆ ಕುರಿತಂತೆ ವಿವಿಧ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯೊಂದಿಗೆ ಕಾಪುವಿನಲ್ಲಿ ಶನಿವಾರ ಜಂಟಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಒಂಬತ್ತು ದಿನಗಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ರಾಜ್ಯ ಮತ್ತು ಕೇಂದ್ರ ಸಚಿವರ ಸಹಿತ ವಿವಿಧ ಗಣ್ಯರು, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪುರಸಭೆ ಸಹಿತ ವಿವಿಧ ಇಲಾಖೆಗಳು ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯೊಂದಿಗೆ ಕೈ ಜೋಡಿಸಲಿದೆ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪರಮೇಶ್ವರ ಎ.ಹೆಗಡೆ, ಎಸ್.ಟಿ.ಸಿದ್ಧಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ, ಟೋಲ್ ಮ್ಯಾನೇಜರ್ ತಿಮ್ಮಯ್ಯ, ತಹಸೀಲ್ದಾರ್ ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ., ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ, ಎಸ್ಐ ತೇಜಸ್ವಿ, ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಪ್ರಶಾಂತ್ ಕುಮಾರ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಲಾಲಾಜಿ ಆರ್.ಮೆಂಡನ್, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷರಾದ ಮನೋಹರ ಎಸ್.ಶೆಟ್ಟಿ, ಮಾಧವ ಆರ್.ಪಾಲನ್, ದೇವಿಪ್ರಸಾದ್ ಶೆಟ್ಟಿ ಬೆಳಪು, ನವದುರ್ಗಾ ಲೇಖನ ಸಮಿತಿ ಕಾರ್ಯದರ್ಶಿ ಕೆ.ವಿಶ್ವನಾಥ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ಸಾಲ್ಯಾನ್, ಮನೋಹರ ರಾವ್, ಜಯಲಕ್ಷ್ಮೀ ಎಸ್.ಶೆಟ್ಟಿ, ಚರಿತಾ ದೇವಾಡಿಗ ಉಪಸ್ಥಿತರಿದ್ದರು. ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ಪ್ರಸ್ತಾವನೆಗೈದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ವಂದಿಸಿದರು.
ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ಜೀರ್ಣೋದ್ಧಾರ ಕಾರ್ಯ ನಡೆದು ಬಂದ ದಾರಿ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಆಗಬೇಕಾದ ವ್ಯವಸ್ಥೆಗಳ ಜೋಡಣೆ ಮತ್ತು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪುರಸಭೆ ಸಹಕಾರ ಯಾಚಿಸಿದರು.
ಉಡುಪಿ ಪರ್ಯಾಯ ಮಾದರಿಯಲ್ಲಿ ಕಾಪು ಪಟ್ಟಣದಲ್ಲಿ ಮೂಲಸೌಕರ್ಯಗಳ ಜೋಡಣೆಗೆ ಪ್ರಸ್ತಾವನೆ ಸಲ್ಲಿಸುವುದು. 9 ದಿನಗಳ ಕಾಲ ಹೆಲಿ ಟೂರಿಸಂ ಮೂಲಕ ಪ್ರವಾಸಿಗರನ್ನು ಸೆಳೆಯಲು ಹೆಲಿ ಪ್ಯಾಡ್ ರಚನೆಗೆ ಆದ್ಯತೆ, ಹೆದ್ದಾರಿ ಸರ್ವೀಸ್ ರಸ್ತೆ ಇಕ್ಕೆಲಗಳಲ್ಲಿ ಸ್ವಾಗತ ಕಮಾನು, ಫ್ಲೈಓವರ್ ಬಳಿ ರಸ್ತೆ ಅಲಂಕಾರ, ವಿದ್ಯುತ್ ದೀಪಾಲಂಕಾರ ಜೋಡಣೆಗೆ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿ ಸಹಿತ ಬೆಂಬಲ ನೀಡುವುದು. ಕಾಪು ಪುರಸಭೆ ವತಿಯಿಂದ 24*7 ಮಾದರಿಯಲ್ಲಿ ಸ್ವಚ್ಛತೆಗೆ ಆದ್ಯತೆ, ಪಾರ್ಕಿಂಗ್ ನಿರ್ವಹಣೆ, ಕುಡಿಯುವ ನೀರು, ತಾತ್ಕಾಲಿಕ ಶೌಚಗೃಹ ವ್ಯವಸ್ಥೆ, ಮಾರಿಗುಡಿ ಮುಂಭಾಗದಲ್ಲಿರುವ ಎಕ್ಸ್ಪ್ರೆಸ್ ಬಸ್ ನಿಲ್ದಾಣ ಸ್ಥಳಾಂತರ ಮಾಡುವುದು, ಬ್ರಹ್ಮಕಲಶೋತ್ಸವ ಸಂದರ್ಭ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಸುಗಮ ಸಂಚಾರಕ್ಕೆ ಒತ್ತು ನೀಡುವುದು, ದೇವಸ್ಥಾನದ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಜಾತ್ರೆ, ಸಂತೆ, ಅಂಗಡಿ ಮತ್ತು ವ್ಯಾಪಾರ ಮಳಿಗೆಗಳಿಗೆ ಅವಕಾಶ ನೀಡದೇ ಪ್ರತ್ಯೇಕ ಸ್ಥಳ ಗೊತ್ತು ಪಡಿಸಿವುದು, ಉಡುಪಿ ಮತ್ತು ದ.ಕ. ಜಿಲ್ಲೆಯಿಂದ ಹೊರೆಕಾಣಿಕೆ ಸ್ವೀಕಾರ ಸಂದರ್ಭ, ಸ್ವರ್ಣ ಗದ್ದುಗೆ ಮತ್ತು ಬೆಳ್ಳಿರಥದ ಮೆರವಣಿಗೆ, ಪವಿತ್ರ ಗಂಗಾ ಜಲ ಮೆರವಣಿಗೆಗೆ ಪೊಲೀಸ್ ಭದ್ರತೆ ಒದಗಿಸುವುದು. ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ನಿರಂತರ ಸಿಸಿ ಕ್ಯಾಮರಾ ಕಣ್ಗಾವಲು, ಪೊಲೀಸ್ ಇಲಾಖೆಯಿಂದ ಪೂರ್ಣ ಸಹಕಾರದ ಭರವಸೆ, ಬ್ರಹ್ಮಕಲಶೋತ್ಸವದಿಂದ ಧೃಡ ಕಲಶೋತ್ಸವದವರೆಗೆ ನಿತ್ಯ ಉತ್ಸವ ನಡೆಸುವುದಕ್ಕೆ ಸಿದ್ಧತೆ, ಸ್ಥಳ ಗುರುತಿಸುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.