

ಬೆಂಗಳೂರು: ಕಂದಾಯ ಇಲಾಖೆ ಮಾದರಿಯಂತೆ ಅಬಕಾರಿ ಇಲಾಖೆ, ಡಿಜಿಟಲೀಕರಣವಾಗುತ್ತಿದ್ದರೂ ಹಳೆಯ ಕಾಯ್ದೆಗಳನ್ನು ಪರಿಷ್ಕರಿಸುವ ಮೂಲಕ ರಾಜಸ್ವ ಹೆಚ್ಚಿಸಲು ಹೊಸ ನೀತಿಗಳನ್ನು ಜಾರಿಗೆ ತರುವ ಅವಶ್ಯಕತೆ ಇದೆ.
ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ತುಂಬಿಸುವಲ್ಲಿ ಇತರೆ ಇಲಾಖೆಗಿಂತ ಅಬಕಾರಿ ಇಲಾಖೆ ಮುಂಚೂಣಿಯಲ್ಲಿದೆ. ಆದರೂ 2 ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ಅಬಕಾರಿ ಆದಾಯದಲ್ಲಿ ತುಸು ಕುಸಿತವಾಗುತ್ತಿದೆ. ಆದ್ದರಿಂದ, ಆದಾಯ ಸೋರಿಕೆ ತಡೆಗೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಲಂಚಬಾಕಕ್ಕೆ ಕಡಿವಾಣ ಹಾಕುವುದು, ಹೊಸ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ಅತ್ಯುತ್ತಮ ಪಾಲಿಸಿಗಳನ್ನು ಅಧ್ಯಯನ ನಡೆಸಿ ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವುದು, ನಿಯಮ ಉಲ್ಲಂಘಿಸಿ ಹೋಟೆಲ್ ಮತ್ತು ವಸತಿ ಗೃಹ( ಸಿಎಲ್&7) ಮದ್ಯದಂಗಡಿಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಬ್ರೇಕ್ ಹಾಕುವುದು, ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಸ್ಐಎಲ್ಗೆ ಉತ್ತೇಜನ ನೀಡುವುದು, ಹರಾಜು ಬದಲು ರಾಜಸ್ವ ಹೆಚ್ಚಿಸಲು ಪಾಲಿಸಿ ತರುವುದು ಹಾಗೂ ಖಾಲಿ ಹುದ್ದೆಗಳ ಭರ್ತಿ ಸೇರಿ ಇತರೆ ಕ್ರಮ ತೆಗೆದುಕೊಳ್ಳಬೇಕಿದೆ.
ರಾಜ್ಯದಲ್ಲಿ 4,002 ವೈನ್ಶಾಪ್(ಸಿಎಲ್2), 302 ಕ್ಲಬ್ (ಸಿಎಲ್4),95 ಸ್ಟಾರ್ ಹೋಟೆಲ್ (ಸಿಎಲ್&6ಎ), 2,994 ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7), 71 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್8), 3,644 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9), 1,071 ಎಂಎಸ್ಐಎಲ್ (ಸಿಎಲ್11ಸಿ) ಮತ್ತು 745 ಆರ್ವಿಬಿ, ವೈನ್ ಟವರ್ನ್ 202, ವೈನ್ ಬೋಟಿಕ್ 87 ಸೇರಿ ಒಟ್ಟು 13,519 ಮದ್ಯದಂಗಡಿಗಳಿವೆ. ಗೋವಾ ಸೇರಿ ಇತರೆ ರಾಜ್ಯಗಳ ಮದ್ಯ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಿದ್ದರೂ ಖಾಸಗಿ ವಾಹನ, ಬೋಟ್, ದೋಣಿ ಹಾಗೂ ಯಾಂತ್ರೀಕೃತ ಬೋಟ್ಗಳ ಮೂಲಕ ಸಾಗಾಣೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ಹತ್ತಾರು ಕೋಟಿ ಆದಾಯ ನಷ್ಟವಾಗುತ್ತಿದೆ. ಹಾಗಾಗಿ, ಅಡ್ಡದಾರಿಯಿಂದ ಬರುತ್ತಿರುವ ಹೊರ ರಾಜ್ಯಗಳ ಮದ್ಯ ಮಾರಾಟ ತಡೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ರಾಜರೋಷವಾಗಿ ನಡೆಯುತ್ತಿರುವ ನಕಲಿ ಮದ್ಯ ಮಾರಾಟ ವಿರುದ್ಧ ಇಲಾಖೆ ಇನ್ನಷ್ಟು ಎಚ್ಚೆತ್ತುಕೊಳ್ಳಬೇಕು.
ಸಮನ್ವಯ ಸಮಿತಿ ರಚಿಸಿ: ಅಬಕಾರಿ ಉದ್ಯಮದ ಸುಗಮ ವ್ಯವಸ್ಥೆ ಮತ್ತು ದೈನಂದಿನ ಸಮಸ್ಯೆಗಳ ಪರಿಹಾರಕ್ಕಾಗಿ "ಸಮನ್ವಯ ಸಮಿತಿ' ರಚಿಸಿದರೆ ಸರ್ಕಾರಕ್ಕೆ ಬರುವ ವರಮಾನವೂ ಹೆಚ್ಚಳವಾಗಲಿದೆ. ಸನ್ನದು ನವೀಕರಣಕ್ಕೆ ಒಂದೇ ನಿಯಮ ಜಾರಿಗೆ ತರಬೇಕು.ಮಿಲಿಟರಿ ಕ್ಯಾಂಟಿನ್ ಸ್ಟೋರ್ಗಳಲ್ಲಿ ಡ್ಯೂಟಿ ಫ್ರೀ ಹೆಸರಿನಲ್ಲಿ ನಕಲಿ ಮದ್ಯ ಲಭ್ಯವಾಗುತ್ತಿದೆ. ಗೋವಾದಲ್ಲಿ ತಯಾರಿಯಾಗುವ ಮದ್ಯ ರಾಜ್ಯದಲ್ಲಿ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಡಾಬಾ, ಮಾಂಸಾಹಾರಿ ಹೋಟೆಲ್, ಕಿರಾಣಿ ಅಂಗಡಿಗಳು ಸೇರಿ ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ತಡೆಗೆ ಇಲಾಖೆ ಕ್ರಮಕೈಗೊಳ್ಳಬೇಕು.
ಅಬಕಾರಿ ಅಕಾಡೆಮಿ ಸ್ಥಾಪಿಸಿ?
ಕಾಯ್ದೆಗಳನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ತರಲು ಅಬಕಾರಿ ಅಕಾಡೆಮಿ ಕೇಂದ್ರ ಸ್ಥಾಪಿಸುವ ಅವಶ್ಯತೆ ಇದೆ. ಇಲಾಖೆಯಲ್ಲಿ ನಿರಂತರವಾಗಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತದೆ. ನೇಮಕಾತಿ ಪ್ರಕ್ರಿಯೆ ನಡೆದ ಬಳಿಕ ಆಯ್ಕೆಯಾದ ಸಿಬ್ಬಂದಿಗೆ ಒಂದು ವರ್ಷದವರೆಗೆ ಇಲಾಖೆ ಸಂಬಂಧ ಮೌಲ್ಯಧಾರಿತ ಮಾಹಿತಿ, ಎನ್ಡಿಪಿಎಸ್ ಕಾಯ್ದೆ ಹಾಗೂ ಕಳ್ಳಬಟ್ಟಿ ತಡೆಯುವ ಕ್ರಮ ಸೇರಿ ಇನ್ನಿತರ ಕೌಶಲಗಳನ್ನು ಹೇಳಿಕೊಡಲಾಗುತ್ತದೆ. ಆದರೆ, ಇಲಾಖೆಯಲ್ಲಿ ತರಬೇತಿ ಪಡೆಯಲು ತರಬೇತಿ ಕೇಂದ್ರವೇ ಇಲ್ಲ. ಆದ್ದರಿಂದ, ಪೊಲೀಸ್ ಇಲಾಖೆ ತರಬೇತಿ ಕೇಂದ್ರದಲ್ಲಿ ಅಬಕಾರಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ಹಂತದಲ್ಲೂ ಪೊಲೀಸ್ ತರಬೇತಿ ಕೇಂದ್ರವನ್ನು ಆವಲಂಬಿಸಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ತರಬೇತಿ ಕೇಂದ್ರ ಸಿಗುವುದಿಲ್ಲ. ಹಾಗಾಗಿ, ಈ ಕೊರತೆ ನೀಗಿಸಲು ಅಬಕಾರಿ ಅಕಾಡೆಮಿ ಅವಶ್ಯಕತೆ ಇದೆ.
ಇಲಾಖೆ ಪುನರ್ ರಚಿಸಿ:ಆದಾಯ ಸೋರಿಕೆ ತಡೆಗೆ ಹಾಗೂ ನಿಯಮಗಳನ್ನು ಕಾರ್ಯರೂಪಕ್ಕೆ ತರಲು ಇಲಾಖೆಯನ್ನು ಪುನರ್ ರಚಿಸುವ ಅಗತ್ಯವಿದೆ. ಈ ಕ್ರಮದಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಬಿದ್ದರೆ ಮತ್ತಷ್ಟು ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸಲು ಸಹಾಯವಾಗಲಿದೆ. ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಇಲಾಖೆ ಕಾರ್ಯವೈಖರಿಯನ್ನು ಮತ್ತಷ್ಟು ಉತ್ತಮಗೊಳಿಸಲು ಅನುಕೂಲವಾಗಲಿದೆ. ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಕೆಲ ಹುದ್ದೆಗಳನ್ನು ಉನ್ನತಿಕರಿಸಿ ಕೆಲ ಹುದ್ದೆಗಳನ್ನು ಮರು ವಿನ್ಯಾಸಗಳಿಸಿ ಸಿಬ್ಬಂದಿ ಕೊರತೆ ಇರುವ ಕಚೇರಿಗಳಿಗೆ ನೇಮಿಸಬೇಕು. ಇಲಾಖೆಯಲ್ಲಿ ಹಾಲಿ ಇರುವ ವಾಹನಗಳು, ಕಚೇರಿಗಳು, ಪೀಠೋಪಕರಣಗಳು, ಮೂಲ ಸೌಕರ್ಯ ಬಳಕೆ ಮಾಡಿಕೊಳ್ಳಬೇಕು.