ಸಂತ್ರಸ್ತರಿಗೆ ಸಿಗಲಿ ಸೂಕ್ತ ಚಿಕಿತ್ಸೆ, ಕಾನೂನ ನೆರವು...

DC Meeting
Published on

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಡಿಸಿ ಕಚೇರಿಯಲ್ಲಿ ಸಮನ್ವಯ ಸಮಿತಿ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮಾಜದಲ್ಲಿರುವ ದುರ್ಬಲ ಹೆಣ್ಣು ಮಕ್ಕಳು ಹಾಗೂ ಮಕ್ಕಳ ಮೇಲೆ ದೌರ್ಜನ್ಯವಾದಾಗ ನೊಂದ ಸಂತ್ರಸ್ತರಿಗೆ ಸಾಂತ್ವನ ಹೇಳುವುದರೊಂದಿಗೆ ಅಗತ್ಯವಿರುವ ಕಾನೂನು ನೆರವು, ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ತನ್ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.

ಆಪ್ತ ಸಮಾಲೋಚನೆ ನಡೆಸಿ

ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ, ವಿಚ್ಛೇದನ, ಬಹು ಪತ್ನಿತ್ವ ಹಾಗೂ ಇನ್ನಿತರ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ ನಡೆಸಿ, ಕಾನೂನು ನೆರವು ಒದಗಿಸಬೇಕು. ಅವರಿಗೆ ಸ್ವಉದ್ಯೋಗಕ್ಕೆ ಉತ್ತೇಜನ ನೀಡಿ, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಅವಕಾಶ ನೀಡಬೇಕು. ಜಿಲ್ಲೆಯಲ್ಲಿ ತಾಯಿ ಕಾರ್ಡ್​ ಹೊಂದಿರುವ ಹಾಗೂ ಹೆರಿಗೆಯಾದ ಅರ್ಹ ಫಲಾನುಭವಿಗಳ ಖಾತೆಗೇ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸಹಾಯಧನ ವರ್ಗಾಯಿಸಬೇಕು. ಎರಡನೇ ಸಲವೂ ಹೆಣ್ಣು ಮಗು ಜನಿಸಿದಲ್ಲಿ ಅವರಿಗೂ ಸಹ ಯೋಜನೆಯ ಎರಡನೇ ಕಂತಿನ ಲಾಭ ಪಡೆಯಬಹುದು ಎಂದರು.

ಪೋಷಣ್​ ಅಭಿಯಾನ ಅನುಷ್ಠಾನ

ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಸಮಗ್ರ ಪೌಷ್ಟಿಕಾಂಶ ಲಭಿಸಲು, ಆರೋಗ್ಯದ ಅಗತ್ಯತೆ ಪೂರೈಸಲು ಸಮರ್ಪಕವಾಗಿ ಪೋಷಣ್​ ಅಭಿಯಾನ ಅನುಷ್ಠಾನ ಮಾಡಬೇಕು. ಜಿಲ್ಲೆಯಲ್ಲಿ 1,222 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 1,052 ಸ್ವಂತ ಕಟ್ಟಡಗಳಲ್ಲಿವೆ. ಕೆಲವು ಬಾಡಿಗೆ ಕಟ್ಟಡಗಳಲ್ಲಿ, ಶಾಲೆಗಳಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿವೆ. ಆಗಾಗ ಅಲ್ಲಿರುವ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್​ ಬಾಯಲ್​, ಎಎಸ್ಪಿ ಸಿದ್ಧಲಿಂಗಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಡಿಡಿಪಿಐ ಗಣಪತಿ ಕೆ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯರು, ಸಾಂತ್ವನ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.

ಬಾಕಿ ಪ್ರಕರಣ ಶೀಘ್ರ ಇತ್ಯರ್ಥ ಪಡಿಸಿ

DC Box
ಜಿಲ್ಲೆಯಲ್ಲಿ ಜುಲೈ 2024ರಿಂದ ಜನವರಿಗೆ 2025ರ ವರೆಗೆ ಮಹಿಳೆಯರ ಮೇಲೆ ನಡೆದಿರುವ ಒಟ್ಟು 174 ದೌರ್ಜನ್ಯ ಪ್ರಕರಣಗಳಲ್ಲಿ 125 ಪ್ರಕರಣ ಇತ್ಯರ್ಥಗೊಂಡಿದ್ದು, 14 ಪ್ರಕರಣ ಕೋರ್ಟ್​ನಲ್ಲಿ ಬಾಕಿ ಇದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ 7 ಪ್ರಕರಣ, ಕಾನೂನು ಸಮಾಲೋಚನೆಯಲ್ಲಿ 15, ಪೊಲೀಸ್​ ಠಾಣೆಯಲ್ಲಿ 1 ಹಾಗೂ ಆಪ್ತ ಸಮಾಲೋಚನೆಯಲ್ಲಿ 12 ಪ್ರಕರಣ ಬಾಕಿ ಇದ್ದು ಅವುಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು. ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಿಯಂತ್ರಣಕ್ಕೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಡಿಸಿ ಡಾ. ಕೆ.ವಿದ್ಯಾಕುಮಾರಿ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net