ಮುಖ್ಯ ಆಯುಕ್ತರಿಗೆ ಸಮನ್ವಯ ಸವಾಲು: ಹಂಗಾಮಿ ನೇಮಕ ಹಿನ್ನೆಲೆ ಎರಡೆರಡು ಹುದ್ದೆ ನಿಭಾವಣೆ ಕಷ್ಟ

bbmp office
Published on

ಬೆಂಗಳೂರು: ಬಿಬಿಎಂಪಿ ನೂತನ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ಎಸ್.ಮಹೇಶ್ವರ್ ರಾವ್ ಅವರಿಗೆ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುವ ಹೊಣೆಗಾರಿಕೆ ಇದ್ದರೂ, ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಸವಾಲು ಎದುರಾಗಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ವಹಿಸಿರುವ ಮಹೇಶ್ವರ್ ರಾವ್ ಅವರು ಮುಖ್ಯ ಆಯುಕ್ತ ಹುದ್ದೆಯನ್ನು ಹಂಗಾಮಿ ಆಗಿ ನೇಮಕವಾಗಿದ್ದಾರೆ. ಬಿಬಿಎಂಪಿ ಅಂತಹ ಬೃಹತ್ ಸಂಸ್ಥೆಗೆ ಸರ್ಕಾರ ಪೂರ್ಣ ಪ್ರಮಾಣದ ಅಧಿಕಾರಿ ನೇಮಿಸದೆ ಹಂಗಾಮಿ ಮಟ್ಟಕ್ಕೆ ಇಳಿಸಿರುವುದು, ನೂತನ ಮುಖ್ಯ ಆಯುಕ್ತರ ಕಾರ್ಯನಿರ್ವಹಣೆಗೆ ಮೊದಲ ಅಡ್ಡಿಯಾಗಿದೆ. ರಾಜಧಾನಿ ಅಭಿವೃದ್ಧಿಯ ಎರಡು ಪ್ರಮುಖ ಸಂಸ್ಥೆಗಳನ್ನು ಮುನ್ನಡೆಸುವುದು ಅಷ್ಟು ಸುಲಭದ್ದಲ್ಲ. ಸಂಪನ್ಮೂಲ ಕ್ರೋಡೀಕರಣದ ಜತೆಗೆ ಹಿರಿ-ಕಿರಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಹೇಳಿದಷ್ಟು ಸುಲಭವಲ್ಲ. ಅದರಲ್ಲೂ ಪಾಲಿಕೆಯಲ್ಲಿರುವ 20 ಐಎಎಸ್ ಅಧಿಕಾರಿಗಳೊಂದಿಗೆ ಆಡಳಿತ ನಡೆಸುವುದು ಸರ್ಕಾರವನ್ನು ಮುನ್ನಡೆಸಿದಷ್ಟೇ ಕ್ಲಿಷ್ಟಕರ.

ಪ್ರಸ್ತುತ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಇಲ್ಲ. ಕಾರ್ಪೊರೇಟರ್‌ಗಳಿಲ್ಲದ ಕಾರಣ ಅಧಿಕಾರಿಗಳು ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತಿಲ್ಲ ಎಂಬ ಆಕ್ಷೇಪ ನಿರಂತರವಾಗಿ ಕೇಳಿಬಂದಿದೆ. ನಾಲ್ಕೂವರೆ ವರ್ಷ ಕಾಲ ಚುನಾವಣೆ ನಡೆಯದೆ ಅಧಿಕಾರಿಗಳ ದರ್ಬಾರ್‌ನಿಂದ ಸಾರ್ವಜನಿಕರ ಕೆಲಸ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದು ಸಣ್ಣ ಕೆಲಸಕ್ಕೂ ತಿಂಗಳುಗಟ್ಟಲೇ ಕಾಯಬೇಕು ಎಂಬ ಆಕ್ಷೇಪವನ್ನು ನಿರಾಕರಿಸುವ ಸ್ಥಿತಿಯಲ್ಲಿ ಅಧಿಕಾರಿಗಳು ಇಲ್ಲ. ಅಧಿಕಾರ ವಿಕೇಂದ್ರೀಕರಣ ಮಾಡಿದ್ದು, ವಲಯ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಭರವಸೆ ಹುಸಿಯಾಗಿದೆ. ವಲಯ ಮುಖ್ಯಸ್ಥರು ಪದೇ ಪದೆ ಕೇಂದ್ರ ಕಚೇರಿಯಿಂದ ಬರುವ ಆದೇಶಗಳಿಗೆ ಕಾದುಕುಳಿತುಕೊಳ್ಳುವ ಕಾರಣ ಮುಖ್ಯ ಆಯುಕ್ತರೇ ಎಲ್ಲ ಸಲಹೆ-ಸೂಚನೆ ನೀಡುವುದು ಅನಿವಾರ್ಯವಾಗಿದೆ. ಆಯಾ ವಿಭಾಗಕ್ಕೆ ಹಿರಿಯ ಐಎಎಸ್ ಅಧಿಕಾರಿಗಳಿದ್ದರೂ, ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ಕ್ಷಿಪ್ರವಾಗಿ ಕೆಲಸ ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳೊಂದಿಗೆ ಸಮನ್ವಯ ಇಲ್ಲದಿರುವುದೇ ಕಾರಣವಾಗಿದ್ದು, ಇದರ ಬಗ್ಗೆ ಹೊಸ ಮುಖ್ಯ ಆಯುಕ್ತರು ಎಷ್ಟರಮಟ್ಟಿಗೆ ಸಲತೆ ಹೊಂದಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ.

ಸ್ಥಳ ಪರಿಶೀಲನೆ, ಅಹವಾಲು ಆಲಿಕೆಗೆ ಸಮಯ ಎಲ್ಲಿ?:

ಬಿಬಿಎಂಪಿ ವ್ಯಾಪ್ತಿ ಬಹು ವಿಸ್ತಾರ ಇರುವುದರಿಂದ ಹತ್ತುಹಲವು ಯೋಜನೆಗಳ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ. ಇದರ ನಿರ್ವಹಣೆ ಆಯಾ ವಿಭಾಗದ ಮುಖ್ಯಸ್ಥ ವಹಿಸಿದ್ದರೂ, ಮೇಲ್ವಿಚಾರಣೆಯನ್ನು ಮುಖ್ಯ ಆಯುಕ್ತರೇ ಮಾಡಬೇಕಿದೆ. ಜತೆಗೆ ಇವರೇ ಉತ್ತರದಾಯಿತ್ವ ಆಗಿರುವುದರಿಂದ ಆಗಾಗ್ಗೆ ಕಾಮಗಾರಿಗಳ ಸ್ಥಳ ಪರಿಶೀಲನೆ, ಸಾರ್ವಜನಿಕರ ಅಹವಾಲು ಆಲಿಕೆ, ಅಧಿಕಾರಿಗಳೊಂದಿಗೆ ವಿವಿಧ ಸಭೆಗಳನ್ನು ನಡೆಸಬೇಕಿದೆ. ವಿಧಾನಸೌಧದಲ್ಲಿ ಸಿಎಂ, ಡಿಸಿಎಂ ನೇತೃತ್ವದ ಸಭೆಗಳಿಗೆ ತಪ್ಪದೆ ಹಾಜಾರಾಗಬೇಕಾಗುತ್ತದೆ. ಇದಕ್ಕೆ ದಿನದ ಹೆಚ್ಚಿನ ಸಮಯ ವ್ಯಯವಾಗುತ್ತದೆ. ಈ ಅಮೂಲ್ಯ ಸಮಯ ಬಿಎಂಆರ್‌ಸಿಎಲ್ ಎಂಡಿ ಹುದ್ದೆ ವಹಿಸಿರುವ ಮಹೇಶ್ವರ್ ರಾವ್ ಅವರಿಗೆ ಪಾಲಿಕೆ ಕೆಲಸಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಮಯ ಹೊಂದಾಣಿಕೆ ಹೇಗೆ ಮಾಡಿಕೊಳ್ಳುತ್ತಾರೆ ಎಂಬ ಪ್ರಶ್ನೆಯೂ ಎದ್ದಿದೆ.

ಬಾಕಿ ಕಾಮಗಾರಿಗಳು ಹಳಿಗೆ ಮರಳುವುದೆ?:

ನಗರದ ವಿವಿಧ ಭಾಗಗಳಲ್ಲಿ ಪಾಲಿಕೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇವುಗಳನ್ನು ಬೃಹತ್ ಯೋಜನೆಗಳು ಕೆಲ ವರ್ಷದಿಂದ ನಿಧಾನವಾಗಿ ನಡೆಯುತ್ತಿವೆ. ವೈಟ್ ಟಾಪಿಂಗ್, ರಸ್ತೆ ವಿಸ್ತರಣಾ ಕಾಮಗಾರಿ, ಮೇಲ್ಸೇತುವೆ/ಕೆಳಸೇತುವೆಗಳ ನಿರ್ಮಾಣ, ಮಳೆನೀರುಗಾಲುವೆ ಪುನಶ್ಚೇತನ ಇತ್ಯಾದಿ ಪ್ರಮುಖವಾಗಿವೆ. ಜತೆಗೆ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹಳಿತಪ್ಪಿದೆ. ಇವುಗಳೊಂದಿಗೆ ಹಲವು ಕಾಮಗಾರಿಗಳು ಅನುದಾನ ಲಭ್ಯವಿಲ್ಲದೆ ಸ್ಥಗಿತಗೊಂಡಿವೆ. ಇವುಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಿ ಜನರಿಗೆ ಸೌಲಭ್ಯ ಒದಗಿಸಲು ಮುಖ್ಯ ಆಯುಕ್ತರು ಹೇಗೆ ಕಾರ್ಯನಿರ್ವಹಿಸಲಿದ್ದಾರೆ ಎಂಬ ಜಿಜ್ಞಾಸೆ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net