

ಮಂಡ್ಯ: ಬೆಳೆ ಸಮೀಕ್ಷೆಗೆ ಸಂಬಂಧಿಸಿದಂತೆ ಮೇಲ್ವಿಚಾರಕರು ಛಾಯಾಚಿತ್ರ ಹಾಗೂ ನಮೂದು ಮಾಡಿರುವ ವಿವರವನ್ನು ಪರಿಶೀಲಿಸಿ ನಂತರ ಅನುಮೋದನೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಬೆಳೆ ಕಟಾವು ಪ್ರಯೋಗ, ಕೃಷಿ ಅಂಕಿ ಅಂಶ ಹಾಗೂ 11ನೇ ಕೃಷಿ ಗಣತಿ ಸಮಿತಿಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೇಸಿಗೆ ಋತುವಿನ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಇದನ್ನು ಖಾಸಗಿ ನಿವಾಸಿಗಳು ಕೈಗೊಂಡಿದ್ದು, ಕೆಲವು ಹೊಸ ಬೆಳೆಗಳ ಹೆಸರನ್ನು ನಮೂದು ಮಾಡಿ ಬೇರೆ ಬೆಳೆಯ ಛಾಯಾಚಿತ್ರ ತೆಗೆದು ಹಾಕಿರುತ್ತಾರೆ. ಖಾಸಗಿ ನಿವಾಸಿಗಳು ಕೈಗೊಂಡಿರುವ ಬೆಳೆ ಸಮೀಕ್ಷೆಯ ಛಾಯಾಚಿತ್ರ ಹಾಗೂ ಬೆಳೆ ವಿವರವನ್ನು ಮೇಲ್ವಿಚಾರಕರು ಪರಿಶೀಲಿಸದೆ ಎಲ್ಲ ಸರ್ವೇ ನಂಬರ್‌ಗಳನ್ನು ಅನುಮೋದನೆ ನೀಡುತ್ತಿರುವುದರಿಂದ ಬೆಳೆಗಳ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಹೇಳಿದರು.
ಪ್ರತಿ ವರ್ಷವೂ ಬೆಳೆ ಸಮೀಕ್ಷೆಯನ್ನು ಜಿಪಿಎಸ್ ಆಧಾರಿತ ಮೊಬೈಲ್ ಆ್ಯಪ್ ಮೂಲಕ ಪ್ರತಿ ಫ್ಲಾಟ್‌ಗಳ ಬೆಳೆ ಸಮೀಕ್ಷೆ ನಡೆಸಿ ಬರುವ ದತ್ತಾಂಶಗಳನ್ನು ಮೇಲ್ವಿಚಾರಕರು ಪರಿಶೀಲನೆ ಮಾಡಬೇಕು. ಬೆಳೆ ಸಮೀಕ್ಷೆಯ ಬೆಳೆವಾರು ದತ್ತಾಂಶಗಳನ್ನು ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಸಮನ್ವಯದೊಂದಿಗೆ ತಾಲೂಕು ಮಟ್ಟದಲ್ಲಿ ಹೊಂದಾಣಿಕೆ ವರದಿ ತಯಾರಿಸಿ ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಅನುಮೋದನೆಗೊಂಡ ವರದಿಯನ್ನು ದೃಢೀಕರಿಸಿ ಸಲ್ಲಿಸಬೇಕು ಎಂದರು.
ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು. ಜಿಲ್ಲೆಯ ರೈತರಿಗೆ ಬೆಳೆ ವಿಮೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ನೋಂದಣಿ ಮಾಡಿಸಬೇಕು. 2024-25ನೇ ಪೂರ್ವ ಮುಂಗಾರು ಹಾಗೂ ಮುಂಗಾರು ಋತುವಿನಲ್ಲಿ ರೈತರ ಬೆಳೆ ಕಟಾವು ಪ್ರಯೋಗಗಳಿಗೆ ಶೇ.35ರಷ್ಟು ಮೇಲ್ವಿಚಾರಣೆ ಕೈಗೊಳ್ಳಬೇಕಾಗಿದೆ. ಇದರಲ್ಲಿ ಸಾಂಖ್ಯಿಕ ಇಲಾಖೆ- ಶೇ.15, ಕೃಷಿ ಇಲಾಖೆ- ಶೇ.5, ಆರ್‌ಡಿಪಿಆರ್ ಇಲಾಖೆ- ಶೇ.5, ತೋಟಗಾರಿಕಾ ಇಲಾಖೆ-ಶೇ.5, ಕಂದಾಯ ಇಲಾಖೆ-ಶೇ.5 ಮೇಲ್ವಿಚಾರಣೆ ಕಡ್ಡಾಯವಾಗಿದೆ. ಬೇಸಿಗೆ ಋತುವಿನಲ್ಲಿ 420 ಪ್ರಯೋಗಗಳು ಕೈಗೊಂಡಿದ್ದು, 116 ಪ್ರಯೋಗಗಳಿಗೆ ಮೇಲ್ವಿಚಾರಣೆ ನಿಯೋಜಿಸಲಾಗಿದೆ. ಇದರಲ್ಲಿ 23 ಪ್ರಯೋಗಕ್ಕೆ ಮಾತ್ರ ಮೇಲ್ವಿಚಾರಣೆ ನಡೆಸಲಾಗಿದೆ ಎಂದರು.
11ನೇ ಕೃಷಿ ಗಣತಿಯ ಪ್ರಕಾರ ಒಂದೇ ಕುಟುಂಬಕ್ಕೆ ಸೇರಿದ ವ್ಯಕ್ತಿ ಅಥವಾ ಅದೇ ಕುಟುಂಬದ ಇತರ ಸದಸ್ಯರೊಡನೆ ಸೇರಿ ಹಿಡುವಳಿಯನ್ನು ಸಾಗುವಳಿ ಮಾಡುತ್ತಿದ್ದರೆ, ಅಂತಹ ಹಿಡುವಳಿಯನ್ನು ವೈಯಕ್ತಿಕ ಹಿಡುವಳಿದಾರರ ಸಂಖ್ಯೆ ಎಂದು ಪರಿಗಣಿಸಲಾಗುವುದು. ಜಿಲ್ಲೆಯಲ್ಲಿ ವೈಯಕ್ತಿಕ ಹಿಡುವಳಿದಾರರ ಸಂಖ್ಯೆ ಶೇ.22.9 ಹಾಗೂ ವಿಸ್ತೀರ್ಣ ಪ್ರಮಾಣದಲ್ಲಿ ಶೇ.13 ರಷ್ಟು ಹೆಚ್ಚಾಗಿದೆ ಎಂದು ವಿವರಿಸಿದರು.
ಇದೇ ವೇಳೆ 2022-23 ಹಾಗೂ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮೂಲ ಕಾರ್ಯಕರ್ತರು ಬೆಳೆ ಕಟಾವು ಪ್ರಯೋಗಗಳ ಆಕ್ಷೇಪಣೆ ಮತ್ತು ನಷ್ಟಗೊಳಿಸಿರುವ ವಿವರದ ಬಗ್ಗೆ ಚರ್ಚಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೇಶವಮೂರ್ತಿ ಅವರು ಬೆಳೆ ಕಟಾವು, ಕೃಷಿ ಅಂಕಿ ಅಂಶಗಳಿಗೆ ಸಂಬಂಧಿಸಿದ ವರದಿಯನ್ನು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಧನುಷ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕೆ.ಎನ್.ರೂಪಶ್ರೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಚ್.ಕೆ.ಕುಮಾರಸ್ವಾಮಿ ಇತರರಿದ್ದರು.